ಗುರುವಾರ, ಜನವರಿ 12ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಎರಡನೇ ಏಕದಿನ ಪಂದ್ಯವದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 4 ವಿಕೆಟ್‌ಗಳ ಜಯ ಸಾಧಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿಗೆ ವಶಪಡಿಸಿಕೊಂಡಿದೆ.
ಇದೇ ವೇಳೆ, ಭಾರತ ತಂಡದ ಡ್ರೆಸ್ಸಿಂಗ್ ಕೋಣೆಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಂದಿದ್ದು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಸ್ವಸ್ಥಗೊಂಡಿದ್ದಾರೆ. ಗುರುವಾರದ 2ನೇ ಏಕದಿನ ಪಂದ್ಯದ ವೇಳೆಗೆ ರಾಹುಲ್ ದ್ರಾವಿಡ್ ಸ್ವಲ್ಪ ಅನಾರೋಗ್ಯ ಸಮಸ್ಯೆ ಅನುಭವಿಸಿದರು.
ಭಾರತ ತಂಡದೊಂದಿಗೆ ಮೂರನೇ ಏಕದಿನ ಪಂದ್ಯಕ್ಕಾಗಿ ತಿರುವನಂತಪುರಕ್ಕೆ ತೆರಳದೆ, ಹೆಚ್ಚಿನ ಚಿಕಿತ್ಸೆಗಾಗಿ ರಾಹುಲ್ ದ್ರಾವಿಡ್ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಆಟಕ್ಕೆ ನಾಯಕನ ಮೆಚ್ಚುಗೆ: ಭಾರತದ 5ನೇ ಕ್ರಮಾಂಕಕ್ಕೆ ಈಗ ವಿಶೇಷ ಬಲ ಬಂದಿದೆ ಎಂದ ರೋಹಿತ್
ರಾಹುಲ್ ದ್ರಾವಿಡ್ ಅವರ ರಕ್ತದೊತ್ತಡ (ಬಿಪಿ) ಹೆಚ್ಚಾದ ಕಾರಣ ಹೋಟೆಲ್‌ನಲ್ಲಿಯೇ ಅಸ್ವಸ್ಥರಾಗಿದ್ದರು ಎಂದು ತಿಳಿದುಬಂದಿದೆ. ನಂತರ ಔಷಧಿ ಸೇವಿಸಿದ ನಂತರ ಕೋಲ್ಕತ್ತಾದಲ್ಲಿ ಉಳಿದರು. ಇದೀಗ ರಾಹುಲ್ ದ್ರಾವಿಡ್ ಅವರು ಅಂತಿಮ ಏಕದಿನ ಪಂದ್ಯಕ್ಕಾಗಿ ತಿರುವನಂತಪುರದಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಇನ್ನೂ ಎರಡನೇ ಏಕದಿನ ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್‌ಗಳನ್ನು ಪಡೆದು ಶ್ರೀಲಂಕಾ ತಂಡವನ್ನು 215 ರನ್‌ಗಳಿಗೆ ಆಲೌಟ್ ಮಾಡಿದರು. ನಂತರ, ಪ್ರವಾಸಿ ಶ್ರೀಲಂಕಾ ಬೌಲರ್‌ಗಳು ಆತಿಥೇಯ ಭಾರತವನ್ನು 86 ರನ್‌ಗೆ 4 ವಿಕೆಟ್ ಪಡೆದು ಸಂಕಷ್ಟಕ್ಕೆ ಇಳಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ನಿರ್ಣಾಯಕ 75 ರನ್‌ಗಳ ಜೊತೆಯಾಟ ನೀಡಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಒತ್ತಡದ ಪರಿಸ್ಥಿತಿಯಲ್ಲಿ 103 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು.