ಕೆಕೆಆರ್ ವಿರುದ್ಧ 'ಸವಿ ಸೇಡು' ತೀರಿಸಿಕೊಂಡ ಆರ್ ಸಿಬಿ

Posted By:
IPL 2018 auction : RCB’s sweet revenge on KKR

ಬೆಂಗಳೂರು, ಜನವರಿ 29: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ರ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸವಿಯಾದ ಸೇಡು ತೀರಿಸಿಕೊಂಡಿದೆ.

ಏಪ್ರಿಲ್ 23, 2017ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಅತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 82ರನ್ ಗಳ ಅಂತರದ ಅತ್ಯಂತ ಹೀನಾಯವಾಗಿ ಸೋಲು ಅನುಭವಿಸಿತ್ತು.

131ರನ್ ಗಳ ಗುರಿ ಬೆನ್ನು ಹತ್ತಿದ್ದ ವಿರಾಟ್ ಕೊಹ್ಲಿ ಪಡೆ 9.4 ಓವರ್ ಗಳಲ್ಲಿ 49ಸ್ಕೋರಿಗೆ ಸರ್ವಪತನ ಕಂಡಿತ್ತು. ಅಂದು ಆರ್ ಸಿಬಿ ಅವನತಿಗೆ ಕಾರಣರಾದವರು ವೇಗಿಗಳಾದ ಕ್ರಿಸ್ ವೋಕ್ಸ್, ಉಮೇಶ್ ಯಾದವ್, ನಾಥನ್ ಕೌಲ್ಟರ್ ನೈಲ್ ಹಾಗೂ ಕಾಲಿನ್ ಡಿ ಗ್ರಾಂಡ್ ಹೋಮ್.

ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ

ಆ ಪಂದ್ಯದಲ್ಲಿ ವೋಕ್ಸ್, ಗ್ರಾಂಡ್ ಹೋಮ್, ನೈಲ್ ತಲಾ 3 ವಿಕೆಟ್ ಗಳಿಸಿದರೆ, ಉಮೇಶ್ 1 ವಿಕೆಟ್ ಕಿತ್ತಿದ್ದರು. ಈ ಸೋಲಿನ ನಂತರ ಚೇತರಿಸಿಕೊಳ್ಳದ ಆರ್ ಸಿಬಿ ಕೊನೆ ಸ್ಥಾನದಲ್ಲಿ ಉಳಿದು ಸೀಸನ್ ಗೆ ಮುಕ್ತಾಯ ಹಾಡಿತ್ತು.

ಈಗ ಹೊಸ ತಂಡ ಕಟ್ಟಿಕೊಂಡಿರುವ ಆರ್ ಸಿಬಿ, ಕೆಕೆಆರ್ ವಿರುದ್ಧ ಸೇಡು ತೀರಿಸಿಕೊಳ್ಳಲೋ ಏನೋ ಅಂದು ಸೋಲಿಗೆ ಕಾರಣರಾಗಿದ್ದ ಆ ನಾಲ್ಕು ಜನ ವೇಗಿಗಳನ್ನು ಹರಾಜಿನಲ್ಲಿ ಖರೀದಿಸಿದೆ. ವೋಕ್ಸ್, ಗ್ರಾಂಡ್ ಹೋಮ್, ನೈಲ್ ,ಉಮೇಶ್ ಈಗ ಆರ್ ಸಿಬಿ ಬೌಲರ್ ಗಳಾಗಿದ್ದಾರೆ.

ಐಪಿಎಲ್ ನ 11 ಆವೃತ್ತಿ ಏಪ್ರಿಲ್ 7ರಂದು ಆರಂಭವಾಗಲಿದ್ದು, ಮೇ 27ರಂದು ಫೈನಲ್ ನಿಗದಿಯಾಗಿದೆ.

Story first published: Monday, January 29, 2018, 23:53 [IST]
Other articles published on Jan 29, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ