ಅಪ್ಘಾನಿಸ್ತಾನ ವಿರುದ್ಧ ಟೆಸ್ಟ್‌ ಬಿಟ್ಟು ಇಂಗ್ಲೆಂಡ್ ನಲ್ಲಿ ಕೌಂಟಿ ಆಡಲಿದ್ದಾರೆ ಕೊಹ್ಲಿ

Posted By:
Kohli going to miss India-Afghanistan historical test

ನವ ದೆಹಲಿ, ಮಾರ್ಚ್ 24: ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಭಾರತ-ಅಪ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್‌ ಪಂದ್ಯಕ್ಕೆ ನಾಯಕ ವಿರಾಟ್ ಕೊಹ್ಲಿ ಅಲಭ್ಯರಾಗಲಿದ್ದಾರೆ.

ಹೌದು, ಆ ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸರ್ರೆ ತಂಡದ ಪರ ಆಡಲಿದ್ದಾರೆ. ಜೂನ್‌ 14 ರಿಂದ ಅಪ್ಘಾನಿಸ್ತಾನದ ವಿರದ್ಧ ಭಾರತ ಟೆಸ್ಟ್ ಪಂದ್ಯ ಆಡಲಿದೆ. ವಿರಾಟ್ ಕೊಹ್ಲಿ ಜೂನ್ 9ಕ್ಕೆ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

ವಿರಾಟ್ ಕೊಹ್ಲಿಯ ಈ ನಿರ್ಧಾರದ ಹಿಂದೆ ಉತ್ತಮ ಆಲೋಚನೆಯೇ ಇದೆ. ಜೂನ್‌ ಅಂತ್ಯಕ್ಕೆ ಭಾರತವು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಹಾಗೂ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಬ್ಯಾಟಿಂಗ್ ಉತ್ತಮ ಪಡಿಸಿಕೊಳ್ಳಲು ಕೊಹ್ಲಿ ಮುಂಚಿತವಾಗಿಯೇ ಇಂಗ್ಲೆಂಡ್‌ಗೆ ಹೋಗಿ ಕೌಂಟಿ ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ.

ಕಳೆದ ಬಾರಿ 2014ರಲ್ಲಿ ಭಾರತವು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯ ಆಡಿದ್ದ ಕೊಹ್ಲಿ ಕೇವಲ 134 ರನ್ ಗಳಿಸಿ ಸರಣಿಯಲ್ಲಿ ವಿಫಲರಾಗಿದ್ದರು. ಈ ಬಾರಿ ತಂಡದ ನಾಯಕತ್ವವನ್ನೂ ವಹಿಸಿಕೊಂಡಿರುವ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರಲೆಂದು ಮುಂಚಿತವಾಗಿಯೇ ಇಂಗ್ಲೆಂಡ್‌ಗೆ ಹೊರಡುತ್ತಿದ್ದಾರೆ. ವಿರಾಟ್ ಕೊಹ್ಲಿಯ ಈ ನಿರ್ಧಾರವನ್ನು ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಹಿರಿಯ ಆಟಗಾರರು ಬೆಂಬಲಿಸಿದ್ದಾರೆ.

ಸರ್ರೆ ತಂಡದ ಆಡಲು ಕೊಹ್ಲಿ ಉತ್ಸಾಹ ತೋರಿದ್ದು, ಈ ವರೆಗೆ ಸರ್ರೆ ತಂಡದ ಪರ ಯಾವ ಭಾರತೀಯ ಆಟಗಾರನೂ ಆಡಿಲ್ಲ. ಕೌಂಟಿಯಲ್ಲಿ ಯಾರ್ಕ್‌ಶೈರ್ ತಂಡದ ಪರ ಪುಜಾರಾ ಮತ್ತು ಸಸ್ಸೆಕ್ಸ್‌ ತಂಡದ ಪರ ಇಶಾಂತ್‌ ಶರ್ಮಾ ಈಗಾಗಲೇ ಆಡುತ್ತಿದ್ದಾರೆ.

ಅಪ್ಘಾನಿಸ್ತಾನವು ತನ್ನ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಲು ಭಾರತಕ್ಕೆ ಬರುತ್ತಿದ್ದು, ಅಪ್ಘಾನಿಸ್ಥಾನ ತನ್ನ ಮೊದಲ ಪಂದ್ಯ ಆಡಲು ಬಿಸಿಸಿಐ ಅನುವು ಮಾಡಿಕೊಟ್ಟಿರುವುದು ವಿಶೇಷವಾಗಿದೆ. ಅಪ್ಘಾನಿಸ್ತಾನ ಮತ್ತು ಭಾರತ ಎರಡೂ ತಂಡಕ್ಕೆ ಇದೊಂದು ಐತಿಹಾಸಿಕ ಪಂದ್ಯವೇ ಆಗಿದೆ. ಯುದ್ಧಪೀಡಿತ ಅಪ್ಗಾನಿಸ್ತಾನದೊಂದಿಗೆ ಭಾರತದ ಮೊದಲ ಕ್ರೀಡಾ ಸಂಬಂಧ ಇದಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, March 24, 2018, 14:25 [IST]
Other articles published on Mar 24, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ