ಉಗ್ರನ ದಾಳಿಯಿಂದ ಪಾರಾದ ಭಯಾನಕ ಕ್ಷಣವನ್ನು ತೆರೆದಿಟ್ಟ ಶ್ರೀನಿವಾಸ್

ಕ್ರೈಸ್ಟ್‌ಚರ್ಚ್, ಮಾರ್ಚ್ 18: ಮರುದಿನದ ಕ್ರಿಕೆಟ್ ಪಂದ್ಯಕ್ಕೆ ಸಿದ್ಧರಾಗುತ್ತಿದ್ದ ಆಟಗಾರರಲ್ಲಿ ಸಾವಿನ ಭಯ ತುಂಬಿಕೊಂಡಿತ್ತು. ಡ್ರೆಸ್ಸಿಂಗ್ ರೂಂನಲ್ಲಿದ್ದ ಎಲ್ಲ ಆಟಗಾರರಲ್ಲಿಯೂ ದುಗುಡ, ಆತಂಕ. ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಕೆಲವು ಗಂಟೆಗಳ ಮೊದಲು ಅವರಲ್ಲಿ ಕೆಲವರು ಹಂತಕ ಉಗ್ರನ ಗುಂಡಿಗೆ ಬಲಿಯಾಗುತ್ತಿದ್ದರು.

ಅದರಲ್ಲಿಯೂ ಆರಂಭಿಕ ಬ್ಯಾಟ್ಸ್‌ಮನ್‌ ತಮಿಮ್ ಇಕ್ಬಾಲ್ ಅಕ್ಷರಶಃ ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದಿದ್ದರು. ಕಣ್ಣೀರು ಅವರ ಕೆನ್ನೆಗಳ ಮೇಲೆ ಇಳಿದು ಸಾಗುತ್ತಿತ್ತು. ವಾರದ ಹಿಂದಷ್ಟೇ ತಮಿಮ್ ಇಕ್ಬಾಲ್ ಆ ದಾಳಿ ನಡೆದ ಸ್ಥಳದಲ್ಲಿಯೇ ಇದ್ದರು. ಆ ಮಸೀದಿಯ ಒಳಭಾಗದಲ್ಲಿ ಜಾಗವೇ ಇಲ್ಲದಷ್ಟು ಜನರು ಕಿಕ್ಕಿರಿದು ತುಂಬಿದ್ದರಿಂದ ಉಗ್ರ ಒಳಪ್ರವೇಶಿಸಿದ ಜಾಗದಲ್ಲಿಯೇ ಕುಳಿತು ಪ್ರಾರ್ಥನೆ ಸಲ್ಲಿಸಿದ್ದರು.

ಘಟನೆಯ ಬಳಿಕ ತಮಿಮ್ ಅನುಭವಿಸಿದ ತಳಮಳ, ಸಂಕಟವನ್ನು ಸಮೀಪದಿಂದ ಕಂಡವರು ಭಾರತದವರಾದ, ಬಾಂಗ್ಲಾದೇಶ ತಂಡದ ವಿಡಿಯೋ ವಿಶ್ಲೇಷಕ ಶ್ರೀನಿವಾಸ್ ಚಂದ್ರಶೇಖರನ್. ಕಳೆದ ವರ್ಷದ ಜನವರಿಯಲ್ಲಿ ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮತ್ತು ಐಪಿಎಲ್‌ನಲ್ಲಿ ಸನ್‌ ರೈಸರ್ಸ್ ಹೈದರಾಬಾದ್‌ನ ವಿಡಿಯೋ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಗುಂಡಿನ ದಾಳಿಯಿಂದ ಬಚಾವಾದ ಬಾಂಗ್ಲಾ ಕ್ರಿಕೆಟಿಗರು: ಟೆಸ್ಟ್ ಪಂದ್ಯ ರದ್ದು

ಗೊಂದಲ, ಆತಂಕದ ನಡುವೆಯೂ ಶ್ರೀನಿವಾಸ್ ಸಮಯಪ್ರಜ್ಞೆ ಮೆರೆದಿದ್ದರು. ಮಸೀದಿ ಎದುರೇ ನಿಲ್ಲಿಸಿದ್ದ ಬಸ್‌ನಲ್ಲಿಯೇ ಕುಳಿತಿದ್ದ ಆಟಗಾರರು ಗುಂಡಿನ ದಾಳಿ ನಿಂತ ಬಳಿಕ ಕೊನೆಗೂ ಅದರಿಂದ ಹೊರಬರಲು ನಿರ್ಧರಿಸಿದ್ದರು. ಆಟಗಾರ ಖಾಲಿದ್ ಅಹ್ಮದ್ ಉದ್ದನೆಯ ಸಲ್ವಾರ್ ಕುರ್ತಾ ಧರಿಸಿದ್ದರು. ಆತ ಶ್ರೀನಿವಾಸ್ ತಮ್ಮ ಜಾಕೆಟ್ ತೆಗೆದು ಖಾಲಿದ್‌ಗೆ ಧರಿಸಲು ನೀಡಿದ್ದರು. ನಾನು ಟಿ-ಶರ್ಟ್ ಧರಿಸಿದ್ದೆ. ಹೀಗಾಗಿ ತೊಂದರೆ ಇರಲಿಲ್ಲ. ಖಾಲಿದ್ ಕುರ್ತಾದಲ್ಲಿದ್ದರು. ಅವರು ಶೂಟರ್ ಕಣ್ಣಿಗೆ ಬಿದ್ದಿದ್ದರೆ ಅಪಾಯ ಎದುರಾಗುವ ಭಯವಿತ್ತು ಎಂದು ಶ್ರೀನಿವಾಸ್ ಅನುಭವ ಹಂಚಿಕೊಂಡಿದ್ದಾರೆ.

ಕಣ್ಣೆದುರೇ ಕುಸಿದ ಬಿದ್ದ ಮಹಿಳೆ

ಕಣ್ಣೆದುರೇ ಕುಸಿದ ಬಿದ್ದ ಮಹಿಳೆ

ಬಸ್‌ನ ಮುಂಬದಿಯ ಸೀಟ್‌ನಲ್ಲಿ ಕುಳಿತಿದ್ದ ತಮಿಮ್ ಮತ್ತು ಮಹಮದುಲ್ಲಾ ಇಬ್ಬರೂ ಅಲ್ಲಿ ನಡೆಯುತ್ತಿದ್ದ ಘಟನೆಯನ್ನು ಕಣ್ಣಾರೆ ವೀಕ್ಷಿಸುತ್ತಿದ್ದರು. ತೀವ್ರ ಆತಂಕಕ್ಕೊಳಗಾದ ತಮಿಮ್, ಯಾರೂ ಓಡಬೇಡಿ. ಎಲ್ಲರೂ ಸೀಟಿನಿಂದ ಈಚೆ ಬಂದು ಮಲಗಿಕೊಳ್ಳಿ ಎಂದು ಕೂಗಿದರು.

ಕೆಲವೇ ಕ್ಷಣಗಳ ಮುನ್ನ ಬಸ್‌ನ ಹಿಂಬದಿಯ ಕಿಟಕಿ ಬಳಿ ಕುಳಿತಿದ್ದ ಶ್ರೀನಿವಾಸ್‌ ಅವರಿಗೆ ಅಲ್ಲೇನೋ ನಡೆಯುತ್ತಿದೆ ಎಂಬುದರ ಸುಳಿವು ಸಿಕ್ಕಿತ್ತು. ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಕುಸಿದು ಬಿದ್ದರು. ಅವರು ತಲೆಸುತ್ತಿ ಬಿದ್ದಿರಬಹುದು ಎಂದು ಭಾವಿಸಿದ್ದೆ. ಆಕೆಗೆ ಸಹಾಯ ಮಾಡಲು ಕೂಡಲೇ ಬಸ್‌ಅನ್ನು ನಿಲ್ಲಿಸಿದೆವು. ಆಕೆಯ ಜತೆಗಿದ್ದ ಬಾಲಕನೊಬ್ಬ ಆಕೆಯನ್ನು ಮೇಲೆತ್ತುವಾಗ ರಕ್ತ ಹರಿದು ಬರುತ್ತಿತ್ತು. ಅಲ್ಲೇನೂ ಘಟನೆ ಸಂಭವಿಸುತ್ತಿದೆ ಎಂಬುದು ಅರ್ಥವಾಯಿತು. ಆಗಲೇ ತಮಿಮ್ ಎಲ್ಲರನ್ನೂ ಎಚ್ಚರಿಸಿದರು.

ಟೆಸ್ಟ್ ಕ್ರಿಕೆಟ್ : ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಜಯ

ನಿದ್ರೆಯೇ ಸುಳಿಯುತ್ತಿಲ್ಲ

ನಿದ್ರೆಯೇ ಸುಳಿಯುತ್ತಿಲ್ಲ

ದಾಳಿ ನಡೆದು ಎರಡು ದಿನ ಕಳೆದರೂ ಶ್ರೀನಿವಾಸ್ ಅವರಿಗೆ ಇನ್ನೂ ಸರಿಯಾಗಿ ನಿದ್ರಿಸಲು ಸಾಧ್ಯವಾಗುತ್ತಿಲ್ಲ. ಬಾಂಗ್ಲಾದ ಆಟಗಾರರ ಪರಿಸ್ಥಿತಿಯೂ ಬೇರೆಯಾಗಿರಲಿಲ್ಲ. ತಮ್ಮ ವೈಯಕ್ತಿಕ ಕೊಠಡಿಗಳಿಗೆ ತೆರಳಲು ಸಾಧ್ಯವಾಗದೆ ಎಲ್ಲರೂ ನಾಯಕನ ಕೊಠಡಿಯಲ್ಲಿಯೇ ಬೆಳಗಿನ ಜಾವದವರೆಗೂ ಕುಳಿತು ಕಾಲ ಕಳೆದಿದ್ದರು.

ODI rankings: ಆಲ್ ರೌಂಡರ್ ಜಾಧವ್ ಜಿಗಿತ, ಕೊಹ್ಲಿ-ಬೂಮ್ರಾಗೆ ಅಗ್ರಸ್ಥಾನ!

ಬಸ್‌ ನಿಂತಿದ್ದ ಸ್ಥಳದತ್ತ ಸುಮಾರು 50-60 ಮಂದಿ ಓಡಿಬಂದಿದ್ದರು. ದಾಳಿಕೋರನ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಯೊಬ್ಬರು ಬಸ್‌ನಿಂದ ಕೆಳಕ್ಕೆ ಇಳಿಯದಂತೆ ಸೂಚಿಸಿದರು. ಈ ವೇಳೆ ತಮಿಮ್, ಕೆಲವು ಆಟಗಾರರನ್ನು ಮಸೀದಿಗೆ ಕರೆದೊಯ್ದಿದ್ದ ಕ್ರಿಕ್ ಇನ್ಫೋದ ಪತ್ರಕರ್ತ ಮೊಹಮ್ಮದ್ ಇಸ್ಲಾಂ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಆದರೆ, ಅದು ತಮಾಷೆ ಎಂದೇ ಇಸ್ಲಾಂ ಭಾವಿಸಿದ್ದರು. ತಮಿಮ್ ಪುನಃ ಕರೆ ಮಾಡಿ ಗುಂಡಿನ ಸದ್ದು ಆಲಿಸುವಂತೆ ಹೇಳಿದ್ದರು.

ಬಸ್ ಒಳಗೇ ಮಲಗಿದರು

ಬಸ್‌ನಲ್ಲಿ ಕುಳಿತಿದ್ದ ಅಟಗಾರರಲ್ಲಿ ವಿಪರೀತ ಭಯ ಆವರಿಸಿತ್ತು. ಬಸ್‌ನಿಂದ ಇಳಿದು ಓಡೋಣ ಎಂದು ಒಬ್ಬರು ಸಲಹೆ ಕೊಟ್ಟರು. ಆದರೆ, ಎಷ್ಟು ಮಂದಿ ದಾಳಿಕೋರರು ಇದ್ದಾರೆ ಎನ್ನುವುದೇ ತಿಳಿದಿಲ್ಲ. ಒಂದು ವೇಳೆ ಹೊರಭಾಗದಲ್ಲಿ ದಾಳಿಕೋರರಿದ್ದು ಅವರ ಎದುರೇ ಓಡಿದರೆ ಏನು ಮಾಡುವುದು? ಬಸ್‌ನ ಹಿಂದೆ ಮತ್ತು ಮುಂದೆ ಕಾರ್ ನಿಲ್ಲಿಸಿದ್ದರಿಂದ ಬಸ್‌ಅನ್ನು ಚಲಾಯಿಸಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಎಲ್ಲರೂ ಬಸ್‌ ಒಳಗೇ ಮಲಗಿಕೊಳ್ಳುವುದಾಗಿ ನಿರ್ಧರಿಸಿದರು.

ಜೀವ ಉಳಿಸಿದ ಸುದ್ದಿಗೋಷ್ಠಿ

ಜೀವ ಉಳಿಸಿದ ಸುದ್ದಿಗೋಷ್ಠಿ

ಘಟನೆಗೂ ಮುನ್ನ ಬಾಂಗ್ಲಾದೇಶಿ ಕ್ರಿಕೆಟಿಗರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಅದರ ಆಯೋಜನೆಯಲ್ಲಿ ಆದ ವಿಳಂಬ ಕ್ರಿಕೆಟಿಗರ ಜೀವ ಉಳಿಸಿತು. ಹತ್ತು ನಿಮಿಷ ಮುಂಚಿತವಾಗಿಯೇ ಮಸೀದಿಗೆ ಹೋಗಲು ನಿರ್ಧರಿಸಲಾಗಿತ್ತು. ಆದರೆ, ಮಹಮ್ಮದುಲ್ಲಾ ಅವರು ನಡೆಸಬೇಕಿದ್ದ ಸುದ್ದಿಗೋಷ್ಠಿ ಹತ್ತು ನಿಮಿಷ ತಡವಾಗಿ ಆರಂಭವಾಗಿತ್ತು. ಅಲ್ಲದೆ, ಅಲ್ಲಿ ಪ್ರಶ್ನೆಗಳ ಸಂಖ್ಯೆಯೂ ಹೆಚ್ಚಿತ್ತು. ಮಹಮ್ಮದುಲ್ಲಾ ಸುದ್ದಿಗೋಷ್ಠಿ ಮುಗಿಸಿ ಬರುವವರೆಗೂ ಡ್ರೆಸ್ಸಿಂಗ್‌ ರೂಮ್‌ನಲ್ಲಿಯೇ ಉಳಿದವರು ಫುಟ್ಬಾಲ್ ಆಡುತ್ತಿದ್ದರು.

ಆ ಮಧ್ಯಾಹ್ನ 18 ಮಂದಿ ಮಸೀದಿಗೆ ತೆರಳಿದ್ದರು. ಶ್ರೀನಿವಾಸ್ ಹಾಗೂ ತಂಡದಲ್ಲಿರುವ ಮತ್ತೊಬ್ಬ ಹಿಂದೂ ಸೌಮ್ಯ ಸರ್ಕಾರ್ ಇಬ್ಬರೂ ಆಟಗಾರರನ್ನು ಮಸೀದಿ ಹೊರಭಾಗದಲ್ಲಿ ಬಿಟ್ಟು ಕ್ಯಾಬ್‌ನಲ್ಲಿ ಹೋಟೆಲ್‌ಗೆ ಮರಳುವುದಾಗಿ ನಿರ್ಧರಿಸಿದ್ದರು. ಒಂದು ವಾರದ ಹಿಂದೆ ವೆಲ್ಲಿಂಗ್ಟನ್‌ನಲ್ಲಿಯೂ ಶ್ರೀನಿವಾಸ್ ಮತ್ತು ಸೌಮ್ಯ ಸರ್ಕಾರ್, ಮಸೀದಿಗೆ ಆಟಗಾರರನ್ನು ಬಿಟ್ಟು ಅವರು ಬರುವವರೆಗೂ ಕಾದು ಅವರೊಂದಿಗೆ ಹೋಟೆಲ್‌ಗೆ ಮರಳಿದ್ದರು.

ವಿಲಿಯಮ್ಸನ್, ಟೇಲರ್ ಸಂದೇಶ

ಘಟನೆ ಬಳಿಕ ಪೊಲೀಸರು ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ಬಳಿಕ ಬಸ್‌ನಿಂದ ಹೊರಬರುವಂತೆ ಆಟಗಾರರಿಗೆ ತಿಳಿಸಿದ್ದರು. ಆಗಲೂ ನಡೆದುಕೊಂಡು ಹೋಗುವಂತೆ ಮತ್ತು ಓಡದಂತೆ ತಮಿಮ್ ಹಾಗೂ ಮುಷ್ಫೀಕರ್ ರಹೀಂ ಮತ್ತೆ ಮತ್ತೆ ಎಚ್ಚರಿಸಿದ್ದರು.

ಆಟಗಾರರು ಅಲ್ಲಿಂದ ಹೋಟೆಲ್‌ಗೆ ತೆರಳಿದರು. ಅಲ್ಲಿ ಭಾರತದವರಾದ ಬಾಂಗ್ಲಾ ಸ್ಪಿನ್ ಕೋಚ್ ಸುನಿಲ್ ಜೋಶಿ ಮತ್ತು ಇತರೆ ಸಿಬ್ಬಂದಿ ಇದ್ದರು. ಅವರನ್ನು ಕಂಡ ಕೂಡಲೇ ಅಟಗಾರರಲ್ಲಿ ಕಣ್ಣೀರು ಉಕ್ಕತೊಡಗಿತು. ಜೋಶಿ ಮತ್ತು ಇತರೆ ಸಿಬ್ಬಂದಿ ಅವರನ್ನು ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನಿಸಿದರು.

ಸಂಜೆ ವೇಳೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ರಾಸ್ ಟೇಲರ್ ಕೂಡ ಶ್ರೀನಿವಾಸ್ ಅವರಿಗೆ ಸಂದೇಶ ರವಾನಿಸಿ ಧೈರ್ಯ ತುಂಬಿದ್ದರು.

ಆ ಭಯಾನಕ ಘಟನೆಯ ನೆನಪುಗಳನ್ನು ಶ್ರೀನಿವಾಸ್ ಹಂಚಿಕೊಳ್ಳುವಾಗ ಅವರ ಕಣ್ಣ ಮುಂದೆ ದೃಶ್ಯಗಳು ಮರುಕಳಿಸುತ್ತಿದ್ದವು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, March 18, 2019, 16:10 [IST]
Other articles published on Mar 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more