ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಗೊಳಿಸಿದ ಪ್ರಕರಣದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾವು ಒಂದು ವರ್ಷಗಳ ಕಾಲ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿಷೇಧ ಹೇರಿದೆ.
ನಾಯಕ, ಉಪನಾಯಕರ ಆದೇಶ ಪಾಲಿಸಿ ಚೆಂಡನ್ನು ಸ್ಯಾಂಡ್ ಪೇಪರ್‌ನಿಂದ ಉಜ್ಜಿದ ಕೆಮರಾನ್ ಬ್ಯಾಂಕ್ರೋಫ್ಟ್‌ನಿಗೆ ಒಂಬತ್ತು ತಿಂಗಳ ಕಾಲ ಕ್ರಿಕೆಟ್ ನಿಂದ ನಿಷೇಧ ಹೇರಲಾಗಿದೆ. ಆದರೆ ಚೆಂಡು ವಿರೂಪಗೊಳಿಸಿದ ಪ್ರಕರಣದ ಪ್ರಮುಖ ರುವಾರಿ ಎನಿಸಿಕೊಂಡಿರುವ ಕೋಚ್ ಲೆಹ್ಮನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಆಶ್ಚರ್ಯ ಮೂಡಿಸಿದೆ.
ಐಸಿಸಿಯು ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಅವರುಗಳಿಗೆ ಒಂದು ಟೆಸ್ಟ್ ಪಂದ್ಯದ ನಿಷೇಧ ಹೇರಿತ್ತು. ಹಾಗೂ ಬ್ಯಾಂಕ್ರೋಫ್ಟ್ ರಿಗೆ ದಂಡ ವಿಧಿಸಿತ್ತು ಆದರೆ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳಿಂದ ಐಸಿಸಿ ವಿಧಿಸಿದ ಕನಿಷ್ಟ ಶಿಕ್ಷೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾವು ಈ ನಿರ್ಣಯ ಕೈಗೊಂಡಿದೆ. ಆಸ್ಟ್ರೇಲಿಯಾದ ಪ್ರಧಾನಿ ಮೆಕಲಮ್ ಟರ್ನ್‌ಬುಲ್ ಕೂಡ ಆಸ್ಟ್ರೇಲಿಯಾ ತಂಡದ ಈ ವರ್ತನೆಯನ್ನು ಕಠು ಶಬ್ದಗಳಲ್ಲಿ ಖಂಡಿದ್ದರು.
ಒಂದು ವರ್ಷ ಕ್ರಿಕೆಟ್‌ನಿಂದ ನಿಷೇಧದ ಜೊತೆಗೆ ಎರಡು ವರ್ಷಗಳ ಕಾಲ ನಾಯಕತ್ವದಿಂದಲೂ ನಿಷೇಧ ಹೇರಲಾಗಿದೆ. ವರ್ಷದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಮರಳಿದರೂ ಸಹಿತ ಈ ಇಬ್ಬರೂ ವಿವಾದಿತ ಆಟಗಾರರು ನಾಯಕತ್ವ ವಹಿಸಿಕೊಳ್ಳುವಂತಿಲ್ಲ.
ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧ ಹೇರಿದ ಬೆನ್ನಲ್ಲೇ ರಾಜಸ್ತಾನ ರಾಯಲ್ಸ್ ಪರ ಆಡುತ್ತಿದ್ದ ಸ್ಟೀವ್ ಸ್ಮಿತ್ ಮತ್ತು ಹೈದರಾಬಾದ್ ಪರ ಆಟಗಾರ ಡೇವಿಡ್ ವಾರ್ನರ್ ಅವರುಗಳು ಐಪಿಎಲ್‌ಗೂ ಅಲಭ್ಯರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಟಿಮ್ ಪೇಯ್ನೆಗೆ ವಹಿಸಲಾಗಿದ್ದು, ನಿಷೇಧ ಹೊಂದಿರುವ ಆಟಗಾರರ ಬದಲಿಗೆ ಕಣಕ್ಕಿಳಿಯುವ ಹೊಸ ಆಟಗಾರರನ್ನು ನಾಳೆ ಘೋಷಿಸಲಾಗುತ್ತದೆ.
ಈ ಇಬ್ಬರೂ ಸ್ಟಾರ್ ಆಟಗಾರರ ಮೇಲೆ ನಿಷೇಧ ಹೇರಿರುವುದು ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹೊಡೆತ ಬೀಳಲಿದ್ದು ಮುಂಬರುವ ವಿಶ್ವಕಪ್ ಹಾಗೂ ಐತಿಹಾಸಿಕ ಆಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ. Subscribe to Kannada MyKhel.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ