ಕಾರವಾರ, ಮೇ 13: ಕ್ರೀಡೆ ಸದ್ಯ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಹಲವು ಕೆಲಸಗಳನ್ನು ತೊರೆದು ಕ್ರೀಡೆಯನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡವರಿದ್ದಾರೆ. ಇದರಿಂದ ಹಲವರು ಹೆಸರು, ಹಣ ಗಳಿಸಿದ್ದಾರೆ. ಕ್ರೀಡೆ ಹಲವು ಜನರ ಬದುಕಿನ ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು.
ಕ್ರೀಡೆಯಲ್ಲಿನ ಪ್ರತಿಭೆಗಳು ಅರಳುವುದು ಬಡತದಲ್ಲಿಯೇ. ಶೈಕ್ಷಣಿಕ ಜೀವನದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೆ. ಆದರೆ ಮನೆಯ ಬಡತನ ಪರಿಸ್ಥಿತಿ ಕ್ರೀಡೆಯಲ್ಲಿ ಮುಂದುವರೆಯಲು ಬಿಡುವುದಿಲ್ಲ. ಆದರೂ ಹಲವು ಪ್ರತಿಭೆಗಳು ಇವೆಲ್ಲವನ್ನೂ ಮೆಟ್ಟಿ ನಿಂತು ಸಾಧನೆ ಮಾಡುತ್ತಾರೆ ಅಥವಾ ಸಾಧನೆಯ ಹಾದಿಯಲಿದ್ದಾರೆ.
ಅದೇ ರೀತಿಯಾಗಿ ಉತ್ತರ ಕನ್ನಡ ಜಿಲ್ಲೆಯ ಬಾಲಕನೊಬ್ಬನ ಕ್ರೀಡಾ ಆಸಕ್ತಿ ರಾಷ್ಟ್ರಮಟ್ಟದವರೆಗೂ ಕರೆದುಕೊಂಡು ಹೋಗಿದೆ. ತಂದೆ ಇಲ್ಲದ ಈ ಮನೆಗೆ ತಾಯಿಯೇ ದಿಕ್ಕು. ಅವರ ದಿನಗೂಲಿಯ ದುಡಿಮೆಯಲ್ಲಿ ಈಶ್ವರ ಗೌಡ ಶಿಕ್ಷಣ ಪಡೆಯುತ್ತಿದ್ದಾನೆ. ಇದೃ ವೇಳೆ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲೂ ಭಾಗವಹಿಸಿ ಬಂದಿದ್ದಾನೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕಡತೋಕಾ ಜನತಾ ವಿದ್ಯಾಲಯದಲ್ಲಿ ಹತ್ತನೇ ತರಗತಿ ಓದುತ್ತಿರುವ ಈಶ್ವರ ಗೌಡ, ಕ್ರೀಡೆಗಳಲ್ಲಿ ಸಾಧನೆ ತೋರುತ್ತಿದ್ದಾರೆ. ಇವರು ನಾರಾಯಣ ಗೌಡ ಹಾಗೂ ಗಂಗೆ ಗೌಡ ದಂಪತಿಯ ಪುತ್ರ. ಅಕ್ಕ ನೀಲಾ ಗೌಡ ಪದವಿ ಓದುತ್ತಿದ್ದಾರೆ. ತಾಯಿಯ ಆಸೆಯಂತೆ, ಬಡತನದಲ್ಲಿಯೂ ಮಕ್ಕಳಿಬ್ಬರು ಶಿಕ್ಷಣ ಪಡೆಯುತ್ತಿದ್ದಾರೆ.
ಕ್ರೀಡಾ ಸಾಧನೆಯ ಛಲ
ಈಶ್ವರ ಗೌಡ ಬಡ ಕುಟುಂಬದ ಹುಡುಗ. ಆದರೂ ಕ್ರೀಡೆಯಲ್ಲಿ ಸಾಧಿಸಬೇಕೆಂಬ ಛಲ ಅವನಿಗಿತ್ತು. ಸಾಧನೆಯ ಬೆನ್ನು ಹತ್ತಿದ್ದ ಅವನು, ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ಪ್ರೌಢಶಾಲಾ ವಿದ್ಯಾರ್ಥಿಗಳ ಜತೆಗೆ ಕ್ರೀಡಾ ತರಬೇತಿ ಪಡೆಯುತ್ತಿದ್ದನು. ಶಾಲೆ ಮುಗಿಸಿ ಸಂಜೆಯ ವೇಳೆಗೆ ಜನತಾ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇದಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಗೌಡ ಸಹಕಾರ ನೀಡಿದ್ದರು. ಹೀಗಾಗಿ, ಹೈಜಂಪ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದನು.
ಹರ್ಡಲ್ಸ್‌ಗಾಗಿ ಪ್ರವೇಶಾತಿ:
ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ನಂತರ ಈಶ್ವರ, ಪ್ರೌಢ ಶಿಕ್ಷಣಕ್ಕಾಗಿ ಜನತಾ ವಿದ್ಯಾಲಯಕ್ಕೆ ಪ್ರವೇಶಾತಿ ಪಡೆದರು. ಆದರೆ, ಅವರ ಗಮನ ಅಲ್ಲಿ ಕಲಿಸುವ 'ಹರ್ಡಲ್ಸ್' ಕ್ರೀಡೆಯ ಕಡೆ ನೆಟ್ಟಿತ್ತು. ಶಾಲೆಗೆ ಪ್ರವೇಶ ಪಡೆದ ಒಂದು ವರ್ಷದ ಒಳಗೆ ಅವರು, ಆ ಶಾಲೆಯ ವಿದ್ಯಾರ್ಥಿಗಳನ್ನೂ ಮೀರಿ ಕ್ರೀಡೆಯಲ್ಲಿ ಗಮನ ಸೆಳೆದರು.
2018ರ ನ.3 ಮತ್ತು 4ರಂದು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ 14 ವರ್ಷದ ಒಳಗಿನವರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಈಶ್ವರ ಗೌಡ, ಅಲ್ಲಿ 80 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾದರು. ಹರಿಯಾಣದ ರೋಹ್ಟಕ್‌ನಲ್ಲಿ 2019ರ ಫೆ.7ರಿಂದ 12ರ ತನಕ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಈಶ್ವರ ಭಾಗವಹಿಸಿದ್ದಾರೆ.
ಈಶ್ವರನಿಗೆ ನೆರವಿನ ಹಸ್ತ ಬೇಕಿದೆ
"ಈಶ್ವರ ಗೌಡ, ಕ್ರೀಡೆಯಲ್ಲಿ ಸಾಧನೆ ತೋರುವಂತೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮುಂದಿದ್ದಾನೆ. ಆತ ಇನ್ನೂ ಹೆಚ್ಚಿನ ಸಾಧನೆ ಮಾಡುವ ಆಕಾಂಕ್ಷೆ ಹೊಂದಿದ್ದಾನೆ. ಅದಕ್ಕೆಲ್ಲ ಸರ್ಕಾರ, ಗಣ್ಯರು, ದಾನಿಗಳ ಸಹಾಯ, ಸಹಕಾರ ಬೇಕಿದೆ," ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಗೌಡ.
"ಶಾಲೆಯಲ್ಲಿ ಮೈದಾನ, ಕ್ರೀಡಾ ಉಪಕರಣಗಳ ಕೊರತೆ ಇದೆ. ಇರುವಷ್ಟು ಸಾಧನಗಳಿಂದ ಆತನಿಗೆ ತರಬೇತಿ ನೀಡುತ್ತಿದ್ದೇವೆ. 100 ಮೀಟರ್, 110 ಮೀಟರ್ ಹಾಗೂ 400 ಮೀಟರ್ ಹರ್ಡಲ್ಸ್ ಸ್ಪರ್ಧೆಗೆ ತರಬೇತಿ ಪಡೆಯಲು ವಿಸ್ತಾರದ ಮೈದಾನ ಇಲ್ಲ. ಈಗಿರುವ ಮೈದಾನ ಗಡುಸಾಗಿದ್ದು, ಕಾಲುಗಳಿಗೆ ಗಾಯಗಳಾಗುತ್ತವೆ. ಸದ್ಯ ನಮ್ಮ ಶಾಲೆಯ ಮೈದಾನದಲ್ಲಿ 80 ಮೀಟರ್‌ವರೆಗೆ ತರಬೇತಿ ನೀಡುತ್ತಿದ್ದೇವೆ," ಎಂದು ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಗೌಡ ತಿಳಿಸಿದರು.