ಏಷ್ಯಾ ಕಪ್ 2018: ಔಪಚಾರಿಕ ಪಂದ್ಯದಲ್ಲಿ ಭಾರತಕ್ಕೆ ಅಫ್ಘಾನಿಸ್ತಾನ ಸವಾಲು

Asia cup 2018 : IND v/s AFG -ಭಾರತಕ್ಕೆ ಅಫ್ಘಾನಿಸ್ತಾನ ಸವಾಲು | Oneindia Kannada

ದುಬೈ, ಸೆಪ್ಟೆಂಬರ್ 25: ಅಷ್ಟೇನೂ ಮಹತ್ವವಲ್ಲದ ಪಂದ್ಯದಲ್ಲಿ ಮಂಗಳವಾರ ಭಾರತ ತಂಡವು ಅಫ್ಘಾನಿಸ್ತಾನವನ್ನು ಎದುರಿಸಲಿದೆ.

ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ ನಿರಾಳವಾಗಿದೆ. ಅತ್ತ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಎರಡರ ವಿರುದ್ಧವೂ ಸೋಲು ಅನುಭವಿಸಿರುವ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಔಪಚಾರಿಕ ಪಂದ್ಯದ ಫಲಿತಾಂಶ ಇಲ್ಲಿ ಮುಖ್ಯವಾಗುವುದಿಲ್ಲ.

ನನ್ನನ್ನು ಹರಕೆಯ ಕುರಿಯನ್ನಾಗಿ ಮಾಡಲಾಯಿತು: ಮ್ಯಾಥ್ಯೂಸ್ ಆರೋಪ

ಆದರೆ, ಏಷ್ಯಾ ಕಪ್‌ನಲ್ಲಿ ಅಜೇಯ ಓಟ ನಡೆಸಿರುವ ಭಾರತ ಈ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಅಫ್ಘಾನಿಸ್ತಾನ ಬೆಳೆಯುತ್ತಿರುವ ತಂಡವಾದರೂ ಪ್ರತಿಭಾವಂತ ಆಟಗಾರರಿದ್ದಾರೆ. ಲೀಗ್‌ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳನ್ನು ಭಾರಿ ಅಂತರದಿಂದ ಸೋಲಿಸಿದ್ದ ಅದು ಸೂಪರ್ ಫೋರ್ ಹಂತದಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾನಗಳ ವಿರುದ್ಧ ಗೆಲುವಿನ ಸಮೀಪ ಬಂದು ಮುಗ್ಗರಿಸಿತ್ತು.

ಫೈನಲ್ ಪ್ರವೇಶಿಸಿರುವ ಕಾರಣಕ್ಕೆ ಮತ್ತು ಅಫ್ಘಾನಿಸ್ತಾನ ದುರ್ಬಲ ತಂಡ ಎಂದು ನಿರ್ಲಕ್ಷ್ಯವಹಿಸಿದರೆ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಎಂತಹ ತಂಡಕ್ಕೂ ಪೈಪೋಟಿ ನೀಡಬಲ್ಲೆ ಎಂಬುದನ್ನು ಅಫ್ಘಾನಿಸ್ತಾನ ಹಲವು ಬಾರಿ ಸಾಬೀತುಪಡಿಸಿದೆ.

ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಾಕಷ್ಟು ಪ್ರಬಲವಾಗಿರುವ ಭಾರತ ಅವಕಾಶ ಸಿಗದ ಆಟಗಾರರಿಗೆ ಸ್ಥಾನ ಕಲ್ಪಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಶುಕ್ರವಾರ ನಡೆಯುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಎದುರಾಳಿಯಾಗಲಿದ್ದು, ಅದಕ್ಕೂ ಮುನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಬಹುದು.

ರಾಹುಲ್, ಪಾಂಡೆಗೆ ಅವಕಾಶ?

ರಾಹುಲ್, ಪಾಂಡೆಗೆ ಅವಕಾಶ?

ಸರಣಿಯಲ್ಲಿ ಒಂದೂ ಪಂದ್ಯವನ್ನು ಆಡದ ಕೆ.ಎಲ್. ರಾಹುಲ್ ಮತ್ತು ಮನೀಶ್ ಪಾಂಡೆ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ.

ಅಫ್ಘಾನಿಸ್ತಾನದ ಬೌಲಿಂಗ್ ದಾಳಿ ಶಕ್ತಿಯುತವಾಗಿರುವುದರಿಂದ ಭಾರತ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಸಾಹಸಕ್ಕೆ ಮುಂದಾಗಲಾರದು. ಹೀಗಾಗಿ ಆರಂಭಿಕ ಜೋಡಿಯನ್ನು ಬದಲಿಸಲು ಮುಂದಾಗುವ ಸಾಧ್ಯತೆ ಇಲ್ಲ. ಅಂಬಾಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ಸ್ಥಾನದಲ್ಲಿ ರಾಹುಲ್ ಹಾಗೂ ಮನೀಶ್ ಪಾಂಡೆಗೆ ಅವಕಾಶ ಸಿಗಬಹುದು.

ಈ ಸರಣಿಯಲ್ಲಿ ಭಾರತದ ಕೆಳ ಕ್ರಮಾಂಕಕ್ಕೆ ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶವೇ ದೊರೆತಿಲ್ಲ. ನಾಲ್ಕು ಪಂದ್ಯಗಳಲ್ಲಿ ಆರಂಭಿಕರಾದ ಶಿಖರ್ ಧವನ್ 327 ರನ್ ಬಾರಿಸಿದ್ದರೆ, ರೋಹಿತ್ ಶರ್ಮಾ 269 ರನ್ ಕಲೆಹಾಕಿದ್ದಾರೆ. ಅವರ ಹೊರತು ಮೂರನೇ ಕ್ರಮಾಂಕದಲ್ಲಿ ಅಂಬಾಟಿ ರಾಯುಡು 116 ರನ್ ಗಳಿಸಿದ್ದೇ ಹೆಚ್ಚು. ಧೋನಿ, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್ ಅವರಿಗೆ ಬ್ಯಾಟಿಂಗ್‌ಗೆ ಸರಿಯಾಗಿ ಅವಕಾಶ ದೊರೆತಿಲ್ಲ.

ರೋಹಿತ್ (284) ಮತ್ತು ಧವನ್ (321) ಎಸೆತಗಳನ್ನು ಎದುರಿಸಿದ್ದಾರೆ. ರಾಯುಡು 162 ಎಸೆತಗಳನ್ನು ಆಡಿದ್ದರೆ, ದಿನೇಶ್ ಕಾರ್ತಿಕ್ 78, ಧೋನಿ 40, ಕೇದಾರ್ ಜಾಧವ್ 27 ಎಸೆತಗಳನ್ನು ಮಾತ್ರ ಆಡಿದ್ದಾರೆ.

ಬೂಮ್ರಾ ಅಥವಾ ಭುವಿಗೆ ವಿಶ್ರಾಂತಿ ಸಾಧ್ಯತೆ

ಬೂಮ್ರಾ ಅಥವಾ ಭುವಿಗೆ ವಿಶ್ರಾಂತಿ ಸಾಧ್ಯತೆ

ಬೌಲಿಂಗ್ ವಿಭಾಗದಲ್ಲಿಯೂ ದೊಡ್ಡ ಬದಲಾವಣೆ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಆದರೂ ಪ್ರಮುಖ ಬೌಲರ್ ಜಸ್ ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಖಲೀಲ್ ಅಹ್ಮದ್ ಮತ್ತೊಂದು ಅವಕಾಶ ಗಿಟ್ಟಿಸಿಕೊಳ್ಳಬಹುದು.

ಇನ್ನಿಬ್ಬರು ವೇಗಿಗಳಾದ ದೀಪಕ್ ಚಾಹರ್ ಹಾಗೂ ಸಿದ್ಧಾರ್ಥ ಕೌಲ್ ಸ್ಥಾನ ಪಡೆದುಕೊಳ್ಳುವ ಸಂಭವನೀಯತೆ ಕಡಿಮೆ. ಭುವನೇಶ್ವರ್‌ಗೆ ಕೂಡ ವಿಶ್ರಾಂತಿ ನೀಡಲು ಮುಂದಾದರೆ ಅನನುಭವಿ ವೇಗಿಗಳೊಂದಿಗೆ ಭಾರತ ಕಣಕ್ಕಿಳಿಯಬೇಕಾಗುತ್ತದೆ.

ಸ್ಪಿನ್ನರ್‌ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಕ್ರಮವಾಗಿ 4.61 ಮತ್ತು 4.01ರ ರನ್ ಸರಾಸರಿಯಲ್ಲಿ ತಲಾ ಐದು ವಿಕೆಟ್ ಉರುಳಿಸಿದ್ದಾರೆ. ತಂಡಕ್ಕೆ ಮರಳಿರುವ ರವೀಂದ್ರ ಜಡೇಜಾ ತಮ್ಮ ಸ್ಪಿನ್ ಚಾಕಚಕ್ಯತೆ ತೋರಿಸಿದ್ದಾರೆ.

ಡೆತ್ ಓವರ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಜಸ್‌ ಪ್ರೀತ್ ಬೂಮ್ರಾ 7 ಮತ್ತು ಭುವನೇಶ್ವರ್ ಕುಮಾರ್ 6 ವಿಕೆಟ್‌ಗಳನ್ನು ಖಾತೆಗೆ ಜಮಾಯಿಸಿದ್ದಾರೆ. ಖಲೀಲ್ ಅಹ್ಮದ್ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಗಮನ ಸೆಳೆದಿದ್ದರು.

ಸಮರ್ಥ ಅಫ್ಘಾನಿಸ್ತಾನ ತಂಡ

ಸಮರ್ಥ ಅಫ್ಘಾನಿಸ್ತಾನ ತಂಡ

ಪಾಕ್ ಮತ್ತು ಬಾಂಗ್ಲಾ ವಿರುದ್ಧ ಕೈಗೆ ಬಂದ ತುತ್ತನ್ನು ಚೆಲ್ಲಿಕೊಂಡು ನಿರಾಸೆ ಅನುಭವಿಸಿರುವ ಅಫ್ಘಾನಿಸ್ತಾನ, ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಬಯಕೆಯಲ್ಲಿದೆ. ಯುವ ಮತ್ತು ಪ್ರತಿಭಾವಂತರ ತಂಡ ಯಾವುದೇ ಬಲಿಷ್ಠ ತಂಡಕ್ಕೆ ಆಘಾತ ನೀಡುವಷ್ಟು ಶಕ್ತವಾಗಿದೆ.

ಟೂರ್ನಿಯಲ್ಲಿ ನಜಿಬುಲ್ಲಾ ಜದ್ರಾನ್ ಮತ್ತು ಸಮಿಯುಲ್ಲಾ ಶೆನ್ವಾರಿ ಅವರನ್ನು ಆಗಾಗ ಬದಲಿಸುವುದನ್ನು ಹೊರತುಪಡಿಸಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೊನೆಯ ಪಂದ್ಯದಲ್ಲಿ ಉಳಿದ ಆಟಗಾರರಿಗೆ ಅವಕಾಶ ನೀಡುವ ಉದ್ದೇಶವಿದ್ದರೂ, ಗೆಲ್ಲುವ ಗುರಿ ಇರುವುದರಿಂದ ದೊಡ್ಡ ಬದಲಾವಣೆಯ ಸಂಭವ ಕಡಿಮೆ.

ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಮೊಹಮದ್ ನಬಿ ಸ್ಪಿನ್ ಬೌಲಿಂಗ್‌ನ ಪ್ರಮುಖ ಅಸ್ತ್ರಗಳಾಗಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಮೊಹಮದ್ ಶಹಜಾದ್, ಅಸ್ಗರ್ ಅಫ್ಘನ್, ರಹಮತ್ ಶಾ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಈ ತಂಡ ಎಲ್ಲ ವಿಭಾಗಗಳಲ್ಲಿಯೂ ಭಾರತಕ್ಕೆ ಸವಾಲು ನೀಡುವಷ್ಟು ಸಮರ್ಥವಾಗಿದೆ.

ಸಂಭಾವ್ಯ ತಂಡಗಳು

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್/ಅಂಬಾಟಿ ರಾಯುಡು, ಮನೀಶ್ ಪಾಂಡೆ/ದಿನೇಶ್ ಕಾರ್ತಿಕ್, ಎಂ.ಎಸ್. ಧೋನಿ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ ಪ್ರೀತ್ ಬೂಮ್ರಾ/ಖಲೀಲ್ ಅಹ್ಮದ್

ಅಫ್ಘಾನಿಸ್ತಾನ: ಮೊಹಮದ್ ಶಹಜಾದ್, ಇಹಸನುಲ್ಲಾ ಜನತ್, ರಹಮತ್ ಶಾ, ಹಸ್ಮತುಲ್ಲಾ ಶಾಹಿದಿ, ಅಸ್ಗರ್ ಅಫ್ಘನ್, ಮೊಹಮದ್ ನಬಿ, ಸಮಿಯುಲ್ಲಾ ಶೆನ್ವಾರಿ/ನಜಿಬುಲ್ಲಾ ಜದ್ರಾನ್, ರಶೀದ್ ಖಾನ್, ಗುಲ್ಬದಿನ್ ನೈಬ್, ಅಫ್ತಾಬ್ ಅಲಂ, ಮುಜೀಬ್ ಉರ್ ರಹಮಾನ್

ಪಂದ್ಯದ ವಿವರ

ಪಂದ್ಯದ ವಿವರ

ಸಮಯ: ಸಂಜೆ 5 ಗಂಟೆಗೆ (ಭಾರತೀಯ ಕಾಲಮಾನ)
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿ ಸ್ಪೋರ್ಟ್ಸ್, ಹಾಟ್ ಸ್ಟಾರ್

For Quick Alerts
ALLOW NOTIFICATIONS
For Daily Alerts

  ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

  Story first published: Tuesday, September 25, 2018, 11:28 [IST]
  Other articles published on Sep 25, 2018
  POLLS

  myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more