ನ್ಯೂಜಿಲೆಂಡ್‌ನ ಮೌಂಟ್ ಮೌಂಗನ್ಯುಯಿಯಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ ಸೂರ್ಯ ಮಿಂಚಿನಂತಹ ಶತಕ ದಾಖಲಿಸಿದ್ದಾರೆ.
ರಿಷಭ್ ಪಂತ್ 6ರನ್‌ಗೆ ಬಹುಬೇಗನೆ ವಿಕೆಟ್ ಒಪ್ಪಿಸಿದ ಬಳಿಕ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್, ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ರು. 49 ಎಸೆತಗಳಲ್ಲಿ ಮೂರಂಕಿ ಗಡಿದಾಟಿದ ಸೂರ್ಯ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2ನೇ ಶತಕ ದಾಖಲಿಸಿದರು. ಅದ್ರಲ್ಲೂ ವಿಶೇಷ ಏನಂದ್ರೆ ಸೂರ್ಯ ಇದೇ ವರ್ಷದಲ್ಲಿ(2022) ತನ್ನ ಎರಡನೇ ಶತಕವನ್ನು ಸಿಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಸೂರ್ಯ 55 ಎಸೆತಗಳಲ್ಲಿ 117ರನ್ ಸಿಡಿಸಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ಇದೀಗ ಅಜೇಯ 111ರನ್ ಕಲೆಹಾಕಿದ ಸೂರ್ಯ, ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ವೈಯಕ್ತಿಕ ಗರಿಷ್ಠ ರನ್ ಸಿಡಿಸಿದವರ ಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.
ಈ ಶತಕದ ಮೂಲಕ ಸೂರ್ಯಕುಮಾರ್ ಯಾದವ್, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬಳಿಕ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಎರಡು ಶತಕ ದಾಖಲಿಸಿದ 2ನೇ ಭಾರತೀಯ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ 2018ರಲ್ಲಿ ಎರಡು ಶತಕ ದಾಖಲಿಸಿದ್ದರು. ಹಿಟ್‌ಮ್ಯಾನ್ ಒಟ್ಟಾರೆ 4 ಶತಕ ದಾಖಲಿಸಿದ್ದು, ಚುಟುಕು ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ ಬ್ಯಾಟರ್ ಆಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 217.65 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ ಅಜೇಯ 111ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳು ಒಳಗೊಂಡಿದ್ದವು.
ಅತ್ಯದ್ಭುತ ಇನ್ನಿಂಗ್ಸ್ ಆಡಿದ ಸೂರ್ಯಕುಮಾರ್ ಯಾದವ್‌ಗೆ ಅಂತಿಮ ಓವರ್‌ನಲ್ಲಿ ಸ್ಟ್ರೈಕ್ ಸಿಗದ ಹಿನ್ನಲೆ ಟೀಂ ಇಂಡಿಯಾ 200ರ ಗಡಿ ತಲುಪುವಲ್ಲಿ ಎಡವಿತು. ಟಿಮ್ ಸೌಥಿ ಬೌಲಿಂಗ್‌ನಲ್ಲಿ ಹಾರ್ದಿಕ್ ಪಾಂಡ್ಯ, ದೀಪಕ್ ಹೂಡ, ವಾಷಿಂಗ್ಟನ್ ಸುಂದರ್ ಸತತ ಮೂರು ಎಸೆತಗಳಲ್ಲಿ ಔಟಾಗುವ ಮೂಲಕ ಪೆವಿಲಿಯನ್ ಸೇರಿದರು. ಹ್ಯಾಟ್ರಿಕ್ ವಿಕೆಟ್ ಪಡೆದ ಟಿಮ್ ಸೌಥಿ ಟೀಂ ಇಂಡಿಯಾ 200ರ ಗಡಿ ತಲುಪುವ ಆಸೆಗೆ ತಣ್ಣೀರೆರಚಿದ್ರು. 20ನೇ ಓವರ್‌ನಲ್ಲಿ ಕೇವಲ 5ರನ್‌ಗಳಿಸಿದರ ಪರಿಣಾಮ ಭಾರತ 6 ವಿಕೆಟ್ ನಷ್ಟಕ್ಕೆ 191ರನ್ ಕಲೆಹಾಕಿದೆ.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 3, ಲ್ಯೂಕಿ ಫರ್ಗುಸನ್ 2, ಇಶ್ ಸೋಧಿ 1 ವಿಕೆಟ್ ಪಡೆದರು.