ಆರ್‌ಸಿಬಿ ವರ್ಸಸ್ ಪಂಜಾಬ್: ಯಾರು ಗೆಲ್ತಾರೆ ಇಂದು?

Posted By:

ಬೆಂಗಳೂರು, ಏಪ್ರಿಲ್ 13: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಈ ಬಾರಿಯ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದ ರೋಚಕ ಗಳಿಗೆಗೆ ಸಾಕ್ಷಿಯಾಗಲು ಸಿದ್ಧವಾಗಿದೆ. ಇತ್ತ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ತವರಿನಲ್ಲಿ ಪ್ರಥಮ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಭಿಮಾನಿಗಳ ನಿರಾಶೆ ಮರೆಸಲು ತಯಾರಿ ನಡೆಸಿದೆ.

ಈ ಪಂದ್ಯ ಹೈವೋಲ್ಟೇಜ್‌ ಪಡೆದುಕೊಳ್ಳಲು ಹಲವು ಕಾರಣಗಳಿವೆ. ತವರು ಕ್ರೀಡಾಂಗಣದಲ್ಲಿ ಆರ್‌ಸಿಬಿಗೆ ಮೊದಲ ಪಂದ್ಯ ಎನ್ನುವುದು ಒಂದಾದರೆ, ಇದೇ ಕ್ರೀಡಾಂಗಣದಲ್ಲಿ ಆಡಿ ಬೆಳೆದ ಕರ್ನಾಟಕದ ಮೂವರು ಆಟಗಾರರು ಆರ್‌ಸಿಬಿ ವಿರುದ್ಧ ಬ್ಯಾಟ್ ಬೀಸುವ ತವಕದಲ್ಲಿದ್ದಾರೆ.

ಐಪಿಎಲ್ ವಿಶೇಷ ಪುಟ | ಆರ್ ಸಿಬಿ ವೇಳಾಪಟ್ಟಿ

ಹೀಗಾಗಿ ಆರ್‌ಸಿಬಿಯ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಬ್ರೆಂಡನ್ ಮೆಕಲಂ ಮುಂತಾದ ಆಟಗಾರರ ಅಬ್ಬರಕ್ಕೆ ನೀಡುವ ಉತ್ತೇಜನವನ್ನು ಆರ್‌ಸಿಬಿ ಅಭಿಮಾನಿಗಳು, ಕಿಂಗ್ಸ್ ಇಲೆವೆನ್ ಪಂಜಾಬ್‌ನ ಕೆ.ಎಲ್. ರಾಹುಲ್, ಕರುಣ್ ನಾಯರ್ ಮತ್ತು ಮಯಂಕ್ ಅಗರ್‌ವಾಲ್ ಅವರಿಗೂ ನೀಡುವುದರಲ್ಲಿ ಅನುಮಾನವಿಲ್ಲ.

ಕೊಹ್ಲಿ ಮೇಲೆ ಹೆಚ್ಚಿದ ಒತ್ತಡ

ಕೊಹ್ಲಿ ಮೇಲೆ ಹೆಚ್ಚಿದ ಒತ್ತಡ

ಈಡನ್‌ ಗಾರ್ಡನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಕೋಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ ಯಾವುದೇ ಪ್ರತಿರೋಧ ತೋರದೆ ಶರಣಾಗಿತ್ತು. ಬ್ರೆಂಡನ್ ಮೆಕಲಂ, ಎಬಿ ಡಿವಿಲಿಯರ್ಸ್ ಮತ್ತು ಮನದೀಪ್ ಸಿಂಗ್‌ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಗಮನಾರ್ಹ ಆಟವಾಡಿರಲಿಲ್ಲ. ಕೊಹ್ಲಿ 31ರನ್ ಗಳಿಸಿದ್ದರೂ ತೀರಾ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಬೌಲಿಂಗ್‌ ವಿಭಾಗದಲ್ಲಿಯೂ ಉಮೇಶ್ ಯಾದವ್ ಮಾತ್ರ ಪರಿಣಾಮಕಾರಿ ಎನಿಸಿದ್ದರು. ಕೆಕೆಆರ್‌ನ ಆರಂಭಿಕ ಆಟಗಾರ ಸುನೀಲ್ ನಾರಾಯಣ್, ಆರ್‌ಸಿಬಿ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ್ದರು. ಮೊದಲ ಸೋಲಿನ ಗಾಯವನ್ನು ಶಮನ ಮಾಡಿಕೊಳ್ಳಲು ಆರ್‌ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಮೋಡಿ ಮಾಡ್ತಾರಾ ರಾಹುಲ್, ಕರುಣ್, ಮಯಂಕ್?

ಮೋಡಿ ಮಾಡ್ತಾರಾ ರಾಹುಲ್, ಕರುಣ್, ಮಯಂಕ್?

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಸವಾರಿ ಮಾಡಿದ್ದ ಪಂಜಾಬ್ ತಂಡ, ನಿರಾಯಾಸವಾಗಿ ಗೆಲುವನ್ನು ಮುಡಿಗೇರಿಸಿಕೊಂಡಿತ್ತು.

ಈ ತಂಡದಲ್ಲಿ ಆರಂಭಿಕ ಮೂವರು ಬ್ಯಾಟ್ಸ್‌ಮನ್‌ಗಳು ಕನ್ನಡಿಗರೇ ಆಗಿರುವುದು ವಿಶೇಷ. ಕಳೆದ ಆವೃತ್ತಿಯಲ್ಲಿ ಕೆ.ಎಲ್. ರಾಹುಲ್ ಆರ್‌ಸಿಬಿ ತಂಡದಲ್ಲಿದ್ದರು. ಹರಾಜಿನ ವೇಳೆ ಮತ್ತೊಬ್ಬ ಆಟಗಾರ ಸರ್ಫರಾಜ್ ಖಾನ್‌ಗೆ ಮಣೆ ಹಾಕಿದ್ದ ಆರ್‌ಸಿಬಿ ಮಾಲೀಕರು, ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಗಿರಲಿಲ್ಲ. ಅವರು ಪಂಜಾಬ್ ತಂಡದ ಪಾಲಾಗಿದ್ದರು.

ಅದಕ್ಕೆ ತಕ್ಕ ಉತ್ತರವನ್ನು ರಾಹುಲ್ ತಮ್ಮ ಬ್ಯಾಟ್‌ನಿಂದಲೇ ನೀಡಿದ್ದರು. ಡೆಲ್ಲಿ ವಿರುದ್ಧ ಕೇವಲ 14 ಎಸೆತದಲ್ಲಿ ಅರ್ಧಶತಕ ಸಿಡಿಸಿ ಐಪಿಎಲ್‌ನಲ್ಲಿ ದಾಖಲೆ ಬರೆಯುವ ಮೂಲಕ ಆರ್‌ಸಿಬಿ ಅಭಿಮಾನಿಗಳು ಕೈಕೈ ಹಿಸುಕಿಕೊಳ್ಳುವಂತೆ ಮಾಡಿದ್ದರು. ಜತೆಗೆ ಕರ್ನಾಟಕದ ಮತ್ತೊಬ್ಬ ಆಟಗಾರ ಕರುಣ್ ನಾಯರ್ ಕೂಡ ಅರ್ಧಶತಕ ದಾಖಲಿಸಿದ್ದರು. ಮಯಂಕ್ ಅಗರ್‌ವಾಲ್ ಒಂದು ಸಿಕ್ಸರ್ ಸಿಡಿಸಿದ್ದರೂ, ದೊಡ್ಡ ಮೊತ್ತ ದಾಖಲಿಸುವಲ್ಲಿ ಸಫಲರಾಗಲಿಲ್ಲ. ತವರಿನ ಅಂಗಳದಲ್ಲಿ ಆರ್‌ಸಿಬಿ ವಿರುದ್ಧ ಆಡುತ್ತಿರುವುದರಿಂದ ಈ ಮೂವರು ಆಟಗಾರರ ಮೇಲೆ ಹೆಚ್ಚಿನ ಒತ್ತಡವೂ ಇದೆ.

ಬ್ಯಾಟಿಂಗ್‌ ಓಕೆ, ಬೌಲಿಂಗ್‌ನದ್ದೇ ಚಿಂತೆ

ಬ್ಯಾಟಿಂಗ್‌ ಓಕೆ, ಬೌಲಿಂಗ್‌ನದ್ದೇ ಚಿಂತೆ

ಬ್ಯಾಟಿಂಗ್ ವಿಭಾಗವನ್ನು ನೋಡಿದರೆ ಎರಡೂ ತಂಡಗಳು ಸಮಬಲ ಹೊಂದಿವೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಬ್ರೆಂಡನ್ ಮೆಕಲಂ, ಕ್ವಿಂಟನ್ ಡಿ ಕಾಕ್, ಮನ್‌ದೀಪ್ ಸಿಂಗ್, ಸರ್ಫ್ರಾಜ್ ಖಾನ್ ಆರ್‌ಸಿಬಿಯ ಪ್ರಮುಖ ಶಕ್ತಿ. ಆಲ್‌ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಕ್ರಿಸ್ ವೋಕ್ಸ್ ಬ್ಯಾಟಿಂಗ್ ಬಲ ಹೆಚ್ಚಿಸಬಲ್ಲರು.

ಆದರೆ, ಬೌಲಿಂಗ್ ವಿಭಾಗ ಇನ್ನೂ ಬಲಿಷ್ಠವಾಗಬೇಕಿದೆ. ಉಮೇಶ್ ಯಾದವ್, ಕ್ರಿಸ್ ವೋಕ್ಸ್ ವೇಗದ ದಾಳಿಯ ಹೊಣೆ ನಿಭಾಯಿಸಲಿದ್ದಾರೆ. ಯಜುರ್ವೇಂದ್ರ ಚಾಹಲ್ ಮೇಲೆ ಸ್ಪಿನ್‌ ದಾಳಿಯ ಭಾರ ಹೆಚ್ಚಿದೆ. ವಾಷಿಂಗ್ಟನ್ ಸುಂದರ್ ಮತ್ತು ಕುಲ್ವಂತ್ ಕೆಜ್ರೋಲಿಯಾ ಅವರಲ್ಲಿ ಅನುಭವದ ಕೊರತೆ ಇದೆ.

ವಿದೇಶಿ ಆಟಗಾರರಲ್ಲಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್‌ ಅವರ ಬದಲು ಆಲ್‌ರೌಂಡರ್ ಕಾಲಿನ್ ಡಿ ಗ್ರಾಂಡ್‌ಹೋಮ್‌, ವೇಗದ ಬೌಲರ್‌ಗಳಾದ ಟಿಮ್ ಸೌಥಿ ಅಥವಾ ನಥಾನ್ ಕೌಲ್ಟರ್ ನೈಲ್ ಅವರಿಗೆ ಅವಕಾಶ ನೀಡುವ ಮೂಲಕ ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿನ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು. ಬ್ರೆಂಡನ್ ಮೆಕಲಂ ಅವರಿಗೆ ವಿಕೆಟ್ ಕೀಪಿಂಗ್ ಹೊಣೆಗಾರಿಕೆ ವಹಿಸಬಹುದು.

ಮಂಕಾಗಿರುವ ಯುವಿ, ಗೇಲ್‌ಗೆ ಸಿಗುತ್ತಾ ಅವಕಾಶ?

ಮಂಕಾಗಿರುವ ಯುವಿ, ಗೇಲ್‌ಗೆ ಸಿಗುತ್ತಾ ಅವಕಾಶ?

ರಾಹುಲ್, ಕರುಣ್ ಮತ್ತು ಮಯಂಕ್ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಆದರೆ, ಫಾರ್ಮ್ ಕಳೆದುಕೊಳ್ಳಲು ಹೆಣಗಾಡುತ್ತಿರುವ ಯುವರಾಜ್ ಸಿಂಗ್ ಪಂಜಾಬ್ ತಂಡಕ್ಕೆ ತಲೆನೋವಾಗಿದ್ದಾರೆ. ದೆಹಲಿ ವಿರುದ್ಧದ ಪಂದ್ಯದಲ್ಲಿ ಯುವರಾಜ್ ರನ್ ಗಳಿಸುವಲ್ಲಿ ಹೆಣಗಾಡಿದ್ದರು.

ಮೊದಲ ಪಂದ್ಯದಲ್ಲಿ ಆಡದ ಆರೋನ್ ಫಿಂಚ್ ತಂಡವನ್ನು ಸೇರಿಕೊಳ್ಳಬಹುದು. ದೆಹಲಿ ವಿರುದ್ಧ ಬೆಂಚ್ ಕಾಯ್ದಿದ್ದ ಬ್ಯಾಟಿಂಗ್ ದೈತ್ಯ ಕ್ರಿಸ್‌ ಗೇಲ್, ಈ ಪಂದ್ಯದಲ್ಲಿಯೂ ಆಡುವ ಅವಕಾಶ ಕಡಿಮೆ. ಒಂದು ವೇಳೆ ಗೇಲ್ ಆಡಿದರೆ ಪಂದ್ಯ ಮತ್ತಷ್ಟು ಕುತೂಹಲ ಪಡೆದುಕೊಳ್ಳಲಿದೆ. ಏಕೆಂದರೆ ಕೆಲವು ಆವೃತ್ತಿಗಳಿಂದ ಗೇಲ್ ಆರ್‌ಸಿಬಿ ತಂಡದಲ್ಲಿದ್ದರು. ಅವರಿಗೆ ಬೆಂಗಳೂರಿನಲ್ಲಿ ಅಭಿಮಾನಿಗಳ ದೊಡ್ಡ ದಂಡೇ ಇದೆ.

ಡೇವಿಡ್ ಮಿಲ್ಲರ್ ಪಂದ್ಯದ ಗತಿಯನ್ನೇ ಬದಲಿಸುವ ಸ್ಫೋಟಕ ಆಟವಾಡುವ ಶಕ್ತಿ ಹೊಂದಿದ್ದಾರೆ. ಮಾರ್ಕಸ್ ಸ್ಟೋನಿಸ್, ಅಕ್ಷರ್ ಪಟೇಲ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಬಲ ತುಂಬಲಿದ್ದಾರೆ.

ನಾಯಕ ಆರ್. ಅಶ್ವಿನ್, ಆಂಡ್ರೂ ಟೈ, ಮೋಹಿತ್ ಶರ್ಮಾ ಜತೆಗೆ, ಐಪಿಎಲ್ ಆಡುತ್ತಿರುವ ಅತಿ ಕಿರಿಯ ಆಟಗಾರ ಎನಿಸಿರುವ ಆಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

'ಈ ಸಲ ಕಪ್ ನಮ್ದೇ' ಎಂಬ ಮಂತ್ರ ಜಪಿಸುತ್ತಿರುವ ಆರ್‌ಸಿಬಿ ಅಭಿಮಾನಿಗಳಿಗೆ ತವರಿನಲ್ಲಿ ಮೊದಲ ಗೆಲುವಿನ ಸಂಭ್ರಮ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, April 13, 2018, 12:49 [IST]
Other articles published on Apr 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ