
ಬೆಲ್ಗ್ರೇಡ್, ಜುಲೈ 1: ಆ್ಯಂಡ್ರಿಯಾ ಓಪನ್ ಟೆನಿಸ್ ಟೂರ್ನಿ ಆಯೋಜಿಸಿದ್ದಕ್ಕೆ ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ ಟೀಕೆ ಎದುರಿಸುತ್ತಿರುವುದು ಇನ್ನೂ ನಿಂತಿಲ್ಲ. ಆದರೆ ಸರ್ಬಿಯಾದ ಪ್ರಧಾನ ಮಂತ್ರಿ ಅನಾ ಬ್ರನಾಬಿಕ್ ಅವರು ಸ್ಟಾರ್ ಆಟಗಾರನ ಬೆನ್ನಿಗೆ ನಿಂತಿದ್ದಾರೆ.
ಬೆಲ್ಗ್ರೇಡ್ ತಾಣದಲ್ಲಿ ಆ್ಯಂಡ್ರಿಯಾ ಪ್ರದರ್ಶನ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಿದ್ದ ನೊವಾಕ್ ಜೊಕೋವಿಕ್ ಸೇರಿ ಗ್ರಿಗರ್ ಡಿಮಿಟ್ರೋವ್ (ಬಲ್ಗೇರಿಯನ್ ಆಟಗಾರ), ಬೊರ್ನಾ ಕೋರಿಕ್ (ಕ್ರೊವೇಷಿಯಾ) ಮತ್ತು ವಿಕ್ಟರ್ ಟ್ರಾಯ್ಕಿಗೆ (ಸರ್ಬಿಯಾ) ಕೊರೊನಾ ಪಾಸಿಟಿವ್ ಬಂದಿತ್ತು.
ಸರ್ಬಿಯಾದ ಕೇಂದ್ರವಾದ ಬೆಲ್ಗ್ರೇಡ್‌ನಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೊಕೋವಿಕ್ ಪತ್ನಿ, ಎನ್‌ಬಿಎ ಸ್ಟಾರ್ ನಿಕೋಲಾ ಜೋಕಿಕ್ ಮತ್ತು ಜೊಕೋವಿಕ್ ಕೋಚ್ ಗೊರಾನ್ ಇವಾನಿಸೆವಿಚ್‌ಗೂ ಕೋವಿಡ್-19 ಪಾಸಿಟಿವ್ ಫಲಿತಾಂಶ ಬಂದಿತ್ತು.
ಆದರೆ ಆದ ತಪ್ಪಿಗೆ ಜೊಕೋವಿಕ್ ಬದಲು ನನ್ನನ್ನು ದೂರಿ ಎಂದು ಸರ್ಬಿಯಾ ಪಿಎಂ ಬ್ರನಾಬಿಕ್ ಹೇಳಿದ್ದಾರೆ. ಪಿಂಕ್ ಟಿವಿ ಜೊತೆ ಮಾತನಾಡಿದ ಬ್ರನಾಬಿಕ್ , 'ಆ ಪ್ರದೇಶದವರಿಗೆ ಒಳ್ಳೆಯದು ಮಾಡುವ ಉದ್ದೇಶದಿಂದ ಜೊಕೋವಿಕ್ ಟೂರ್ನಿ ಆಯೋಜಿಸಿದ್ದರು. ರಾಜಕೀಯವನ್ನು ಇದರಿಂದ ಹೊರಗಿಡಿ, ಯುವ ಆಟಗಾರನಿಗೆ ನೆರವು ನೀಡಿ,' ಎಂದಿದ್ದಾರೆ.
ಚಾರಿಟಿ ವಿಚಾರವಾಗಿ ಜೊಕೋವಿಕ್ ಆ ಟೂರ್ನಿ ಆಯೋಜಿಸಿದ್ದರು ಅನ್ನೋದನ್ನು ಅರಿತಿರುವ ಬ್ರನಾಬಿಕ್, 'ಆತ ಮನುಷ್ಯತ್ವದ ಉದ್ದೇಶದಿಂದ ದೇಣಿಗೆ ಸಂಗ್ರಹಕ್ಕಾಗಿ ಟೂರ್ನಿ ಆಯೋಜಿಸಿದ್ದ. ದೂಷಿಸುವುದಿದ್ದರೆ ಪ್ರಧಾನಿಯಾದ ನನ್ನನ್ನು ದೂಷಿಸಿ. ಜೊಕೋವಿಕ್‌ನನ್ನು ಅವನ ಪಾಡಿಗೆ ಬಿಟ್ಟುಬಿಡಿ,' ಎಂದು ವಿನಂತಿಸಿಕೊಂಡಿದ್ದಾರೆ.