ಇಂದೋರ್ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತ ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದಿದ್ದು ಸರಣಿಯನ್ನು ವಶಪಡಿಸಿಕೊಂಡಿದೆ. ಇಂದಿನ ಪಂದ್ಯವನ್ನು ಗೆದ್ದರೆ ಭಾರತ ಸರಣಿಯನ್ನು ವೈಟ್‌ವಾಶ್ ಮಾಡುವ ಜೊತೆಗೆ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಮೊದಲನೇ ಸ್ಥಾನಕ್ಕೇರಲಿದೆ.
ನಿರೀಕ್ಷೆಯಂತೆ ಭಾರತ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದ್ದು, ಉಮ್ರಾನ್ ಮಲಿಕ್ ಮತ್ತು ಯುಜುವೇಂದ್ರ ಚಹಾಲ್ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
IPL 2023: ಐಪಿಎಲ್ನಲ್ಲಿ ಆಡಬೇಕೆನ್ನುವುದು ಕನಸು: ಅಷ್ಟು ದೊಡ್ಡ ಮೊತ್ತ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ!
ನ್ಯೂಜಿಲೆಂಡ್ ತಂಡದಲ್ಲಿ ಕೂಡ ಒಂದು ಬದಲಾವಣೆ ಮಾಡಿದ್ದು, ಶಿಪ್ಲೆ ಬದಲಾಗಿ ಜಾಕೋಬ್ ಡಫ್ಫಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಎರಡು ಪಂದ್ಯಗಳನ್ನು ಸೋತಿರುವ ನ್ಯೂಜಿಲೆಂಡ್ ಸರಣಿಯ ಮೂರನೇ ಪಂದ್ಯವನ್ನು ಗೆಲ್ಲಲು ಕಠಿಣ ಸವಾಲೊಡ್ಡಲು ನಿರ್ಧರಿಸಿದೆ.
ಇಂದೋರ್ ನಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಭಾರತ ಈ ಅಂಗಳದಲ್ಲಿ ಇದುವರೆಗೂ ಆಡಿರುವ 5 ಏಕದಿನ ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಮ್ಮ ಅಜೇಯ ಓಟವನ್ನು ಮುಂದುವರೆಸುವ ಉತ್ಸಾಹದಲ್ಲಿದೆ ರೋಹಿತ್ ಶರ್ಮಾ ಪಡೆ.
ಬ್ಯಾಟರ್ ಗಳಿಗೆ ಅನುಕೂಲವಾಗುವ ಪಿಚ್
ಹೋಲ್ಕರ್ ಸ್ಟೇಡಿಯಂ ಬ್ಯಾಟರ್ ಗಳ ಸ್ವರ್ಗ ಎನಿಸಿಕೊಂಡಿದೆ. ಇಲ್ಲಿನ ಬೌಂಡರಿ ಕೂಡ ಸಾಕಷ್ಟು ಚಿಕ್ಕದಾಗಿರುವುದರಿಂದ ದೊಡ್ಡ ಸ್ಕೋರ್ ನಿರೀಕ್ಷೆ ಮಾಡಬಹುದಾಗಿದೆ. ಎರಡೂ ತಂಡಗಳಲ್ಲಿ ಸಾಕಷ್ಟು ಪವರ್ ಹಿಟ್ಟರ್ ಗಳು ಇದ್ದು, ಮತ್ತೊಂದು ರೋಚಕ ಪಂದ್ಯವಾಗುವ ಸಾಧ್ಯತೆ ಇದೆ.
ಇಂದೋರ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ ಇತಿಹಾಸ ಹೊಂದಿದ್ದಾರೆ. ಅವರ ಬ್ಯಾಟ್‌ನಿಂದ ಮತ್ತೊಂದು ಶತಕ ಸಿಡಿಸಲಿದ್ದಾರೆ ಎನ್ನುವದನ್ನು ನೋಡಬೇಕಿದೆ. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿರುವ ರೋಹಿತ್ ಶರ್ಮಾ ಅದೇ ಬ್ಯಾಟಿಂಗ್ ಮುಂದುವರೆಸಿದರೆ ಭಾರತ ಬೃಹತ್ ಮೊತ್ತ ಕಲೆಹಾಕುವುದು ನಿಶ್ಚಿತವಾಗಿದೆ. ಸೂರ್ಯಕುಮಾರ್ ಯಾದವ್ ಕೂಡ ಏಕದಿನ ಮಾದರಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಜಾಕೋಬ್ ಡಫ್ಫಿ, ಬ್ಲೇರ್ ಟಿಕ್ನರ್.