
ಐಸಿಸಿ ಪುರುಷರ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಗೆದ್ದ ಮೊದಲ ಭಾರತೀಯ
"ಐಸಿಸಿ ನನ್ನನ್ನು ವರ್ಷದ ಐಸಿಸಿ ಪುರುಷರ ಟಿ20 ಕ್ರಿಕೆಟಿಗ ಎಂದು ಹೆಸರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ವೈಯಕ್ತಿಕ ದೃಷ್ಟಿಕೋನದಿಂದ 2022 ನನಗೆ ಅದ್ಭುತವಾದ ಅನುಭವ ನೀಡಿದ ವರ್ಷವಾಗಿದೆ. ಆ ವರ್ಷದಲ್ಲಿ ನಾನು ಆಡಿದ ಕೆಲವು ಪ್ರದರ್ಶನಗಳನ್ನು ನಾನು ಆನಂದಿಸಿದ್ದೇನೆ," ಎಂದು ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
"ನನಗೆ ವಿಶೇಷವಾದ ಒಂದು ಪ್ರದರ್ಶನವನ್ನು ನಾನು ಆಯ್ಕೆಮಾಡಬೇಕೆಂದರೆ, ನನ್ನ ದೇಶಕ್ಕಾಗಿ ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ನನ್ನ ಮೊದಲ ಶತಕ ಗಳಿಸಿದೆ. ಏಕೆಂದರೆ ಅದು ಪಂದ್ಯ ವಿಜೇತ ಮೊದಲ ಶತಕ ಭಾರತ ತಂಡವು ಸರಣಿ ಗೆಲ್ಲುವಂತೆ ಮಾಡಿತ್ತು. ಹೀಗಾಗಿ ಅದು ಯಾವಾಗಲೂ ವಿಶೇಷವಾಗಿರುತ್ತದೆ. ಭವಿಷ್ಯದಲ್ಲಿ ಇನ್ನೂ ಅನೇಕ ಉತ್ತಮ ಪ್ರದರ್ಶನಗಳು ಬರಲಿವೆ," ಎಂದು ಸೂರ್ಯಕುಮಾರ್ ಯಾದವ್ ಪ್ರಶಸ್ತಿ ಸ್ವೀಕರಿಸಿ ಹೇಳಿದರು.

46.56 ಸರಾಸರಿಯಲ್ಲಿ 1164 ರನ್
ಸೂರ್ಯಕುಮಾರ್ ಯಾದವ್ ಅವರು 2022ರಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರ 360-ಡಿಗ್ರಿ ಶಾಟ್‌ಗಳೊಂದಿಗೆ ಒಂದು ವರ್ಷದಲ್ಲಿ 1000ಕ್ಕೂ ಅಧಿಕ ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆದರು. ಸೂರ್ಯಕುಮಾರ್ 187.43ರ ಸ್ಟ್ರೈಕ್‌ರೇಟ್‌ನಲ್ಲಿ 46.56 ಸರಾಸರಿಯಲ್ಲಿ 1164 ರನ್‌ಗಳನ್ನು ಗಳಿಸುವ ಮೂಲಕ ಆ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.
2022ರಲ್ಲಿ ಸೂರ್ಯಕುಮಾರ್ ಯಾದವ್ 68 ಸಿಕ್ಸರ್‌ಗಳ ಮೂಲಕ ಒಂದು ವರ್ಷದಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟರ್ ಎನಿಸಿದರು. ಅದೇ ವರ್ಷದಲ್ಲಿ ಎರಡು ಶತಕ ಮತ್ತು ಒಂಬತ್ತು ಅರ್ಧ ಶತಕಗಳೊಂದಿಗೆ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಪುರುಷರ ಟಿ20 ಬ್ಯಾಟ್ಸ್‌ಮನ್ ಆಗಿದ್ದರು. ವೃತ್ತಿಜೀವನದ 890 ರೇಟಿಂಗ್ ಅಂಕಗಳೊಂದಿಗೆ 2022ರಲ್ಲಿ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದರು.

ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ 239 ರನ್
ಸೂರ್ಯಕುಮಾರ್ ಯಾದವ್ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ 59.75ರ ಸರಾಸರಿಯಲ್ಲಿ 239 ರನ್ ಬಾರಿಸಿದರು. ಇದೇ ವೇಳೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಅರ್ಧಶತಕ ಗಳಿಸಿದ್ದರು.
ನ್ಯೂಜಿಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಮೌಂಟ್ ಮೌಂಗನುಯಿ ಕ್ರೀಡಾಂಗಣದಲ್ಲಿ 11 ಬೌಂಡರಿ ಮತ್ತು ಏಳು ಸಿಕ್ಸರ್‌ಗಳ ಮೂಲಕ 217.65 ಸ್ಟ್ರೈಕ್‌ರೇಟ್‌ನಲ್ಲಿ 51 ಎಸೆತಗಳನ್ನು ಎದುರಿಸಿ 111 ರನ್ ಗಳಿಸಿದರು, ಇದು ಅವರ ಎರಡನೇ ಟಿ20 ಶತಕವಾಯಿತು.