ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ, ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಬರೋಬ್ಬರಿ ಮೂರು ವರ್ಷಗಳ ನಂತರ ಅವರು ಶತಕ ಸಿಡಿಸಿ ತಮ್ಮ ಫಾರ್ಮ್ ಪ್ರದರ್ಶಿಸಿದರು.
ಶತಕ ಸಿಡಿಸುವ ಜೊತೆಗೆ ಸಿಕ್ಸ್ ಸಿಡಿಸುವ ವಿಚಾರದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಅವರನ್ನು ಹಿಂದಿಕ್ಕಿರುವ ಹಿಟ್‌ಮ್ಯಾನ್ ರೋಹಿತ್ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಶೀದ್ ಖಾನ್: ಈ ಸಾಧನೆ ಮಾಡಿದ 2ನೇ ಬೌಲರ್
85 ಎಸೆತಗಳಲ್ಲಿ 9 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 101 ರನ್ ಗಳಿಸಿದ ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ಗೆ ಭರ್ಜರಿಯಾಗಿಯೇ ತಯಾರಿ ನಡೆಸುತ್ತಿದ್ದಾರೆ. ನಾಯಕನಾಗೊ ರೋಹಿತ್ ಶರ್ಮಾ ರನ್ ಗಳಿಸುತ್ತಿಲ್ಲ ಎನ್ನುವ ಟೀಕೆಗಳು ಆರಂಭವಾದ ಬೆನ್ನಲ್ಲೇ ಅವರಿಗೆ ಬ್ಯಾಟ್ ಮೂಲಕ ಉತ್ತರ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಸಿಕ್ಸ್ ಸಿಡಿಸುವ ವಿಚಾರದಲ್ಲಿ ಎಂಎಸ್ ಧೋನಿ ದಾಖಲೆಯನ್ನು ಮುರಿದಿದ್ದರು. ಭಾರತದಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದವರ ಪಟ್ಟಿಯಲ್ಲಿ ಧೋನಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಭಾರತದಲ್ಲಿ ರೋಹಿತ್ ಏಕದಿನ ಮಾದರಿಯಲ್ಲಿ 125 ಸಿಕ್ಸ್ ಸಿಡಿಸಿದ್ದಾರೆ.
ಅಫ್ರಿದಿ, ಕ್ರಿಸ್‌ಗೇಲ್ ಮೊದಲ ಎರಡು ಸ್ಥಾನದಲ್ಲಿ
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿರುವ ದಾಖಲೆಯನ್ನು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಹೊಂದಿದ್ದಾರೆ. 369 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅವರು 351 ಸಿಕ್ಸ್ ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್‌ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ. 294 ಏಕದಿನ ಇನ್ನಿಂಗ್ಸ್‌ಗಳಲ್ಲಿ ಅವರು 331 ಸಿಕ್ಸ್ ಸಿಡಿಸಿದ್ದಾರೆ. ರೋಹಿತ್ ಶರ್ಮಾ 234 ಏಕದಿನ ಇನ್ನಿಂಗ್ಸ್‌ಗಳಲ್ಲಿ 272 ಸಿಕ್ಸರ್ ಸಿಡಿಸಿದ್ದಾರೆ. 270 ಸಿಕ್ಸರ್ ಸಿಡಿಸಿರುವ ಸನತ್ ಜಯಸೂರ್ಯ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.
ಫಾರ್ಮ್‌ಗೆ ಮರಳಿದ ರೋಹಿತ್ ಶರ್ಮಾ
ಸನತ್ ಜಯಸೂರ್ಯ 270 ಸಿಕ್ಸರ್ ಸಿಡಿಸಲು 433 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ರೋಹಿತ್ ಶರ್ಮಾ 234ನೇ ಇನ್ನಿಂಗ್ಸ್‌ನಲ್ಲೇ ಅವರ ದಾಖಲೆಯನ್ನು ಮುರಿದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿರುವ ಏಕೈಕ ಕ್ರಿಕೆಟರ್ ಎನ್ನುವ ಹೆಗ್ಗಳಿಕೆ ರೋಹಿತ್ ಶರ್ಮಾರದ್ದಾಗಿದೆ.
ಶ್ರೀಲಂಕಾ ವಿರುದ್ಧ ಅವರು ಸಿಡಿಸಿದ 264 ರನ್‌ಗಳ ದಾಖಲೆಯನ್ನು ಇದುವರೆಗೂ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನಿಂಗ್ಸ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. 2023ರ ಆರಂಭದಲ್ಲೇ ಅವರು ಫಾರ್ಮ್ ಕಂಡುಕೊಂಡಿರುವುದು ಏಕದಿನ ವಿಶ್ವಕಪ್ ದೃಷ್ಟಿಯಿಂದ ಭಾರತಕ್ಕೆ ಶುಭಸೂಚನೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.