
ರೋಹಿತ್, ಕೊಹ್ಲಿಗೆ ಕೋಕ್
ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ತಂಡದಿಂದ ಹೊರಗುಳಿಯಲಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ ಭಾರತದ ಮುಂದಿನ ಟಿ20 ಪಂದ್ಯಗಳಲ್ಲಿ ವಿರಾಟ್ ಮತ್ತು ರೋಹಿತ್ ಆಡುವುದು ಅನುಮಾನವಾಗಿದೆ.
2023ರ ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡ ಸಿದ್ಧತೆ ಆರಂಭಿಸಿದ್ದು, ಹಿರಿಯ ಆಟಗಾರರು ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ. ಇವರಿಬ್ಬರೂ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಮಹತ್ವದ ಪಾತ್ರ ವಹಿಸಲಿದ್ದಾರೆ.

ಹಿರಿಯ ಆಟಗಾರರು ಹೊರಕ್ಕೆ
2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಸಿದ್ಧಗೊಳಿಸುತ್ತಿದ್ದು, ಹಂತ ಹಂತವಾಗಿ ಹಿರಿಯ ಆಟಗಾರರನ್ನು ಟಿ20 ತಂಡದಿಂದ ಹೊರಗಿಡಲು ನಿರ್ಧರಿಸಲಾಗಿದೆ. ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್ ಭಾರತದ ಟಿ20 ತಂಡದಿಂದ ಹೊರಗುಳಿಯಲಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಯುವಪಡೆ ಅದ್ಭುತ ಪ್ರದರ್ಶನ ನೀಡಿದ್ದು, ಬಹುತೇಕ ಅದೇ ತಂಡವೇ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಮುಂದುವರೆಯುವ ಸಾಧ್ಯತೆ ಇದೆ.

ಏಕದಿನ ವಿಶ್ವಕಪ್‌ಗೆ ತಯಾರಿ ಆರಂಭ
ಅಕ್ಟೋಬರ್ - ನವೆಂಬರ್ ನಲ್ಲಿ ಭಾರತದಲ್ಲಿ ಈ ಬಾರಿ ಏಕದಿನ ವಿಶ್ವಕಪ್ ನಡೆಯಲಿದ್ದು, ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ತಯಾರಿ ಆರಂಭಿಸಲಿದೆ. 2022ರಲ್ಲಿ ಭಾರತ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.
2023ರಲ್ಲಿ ಏಷ್ಯಾಕಪ್ ಕೂಡ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಏಕದಿನ ವಿಶ್ವಕಪ್‌ಗೆ ಮುನ್ನ ನಡೆಯಲಿದೆ. ಏಕದಿನ ವಿಶ್ವಕಪ್‌ಗೆ ಅಂತಿಮ ಸಿದ್ಧತೆ ನಡೆಸಲು ಏಷ್ಯಾಕಪ್ ಸಹಾಯಕವಾಗಲಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ವಾಪಸಾಗುವ ಸಾಧ್ಯತೆ ಇದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಸೇರ್ಪಡೆಯಾಗಿರುವ ಬುಮ್ರಾ, ಮೊಹಮ್ಮದ್ ಶಮಿ ಏಕದಿನ ತಂಡದಲ್ಲಿ ಮುಂದುವರೆಯಲಿದ್ದಾರೆ.