ಟೀಮ್ ಇಂಡಿಯಾ ಯುವ ಆಟಗಾರ ಶುಬ್ಮನ್ ಗಿಲ್ ಅಮೋಘ ಫಾರ್ಮ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ಮುಂದುವರಿಸಿದ್ದಾರೆ. ಈ ಪಂದ್ಯದಲ್ಲಿಯೂ ಅದ್ಭುತ ಆರಂಭವನ್ನು ನೀಡಿರುವ ಶುಬ್ಮನ್ ಗಿಲ್ ಮತ್ತೊಂದು ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಬ್ಲೈರ್ ಟಿಕ್ನರ್ ಎಸೆತವನ್ನು ಬೌಂಡರಿಗೆ ಅಟ್ಟಿ ಶತಕವನ್ನು ಪೂರ್ಣಗೊಳಿಸಿದ್ದಾರೆ ಶುಬ್ಮನ್ ಗಿಲ್.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭದಿಂದಲೇ ಸ್ಪೋಟಕವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ ಶುಬ್ಮನ್ ಗಿಲ್. ತಮ್ಮ ಮೊದಲ 50 ರನ್‌ಗಳನ್ನು 33 ಎಸೆತಗಳಲ್ಲಿ ಪೂರೈಸಿದ ಗಿಲ್ ತಮ್ಮ ಅದ್ಭುತ ಬ್ಯಾಟಿಂಗನ್ನು ಬಳಿಕವೂ ಮುಂದುವರಿಸಿದರು. 13 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಿಡಿಸಿ ಕೇವಲ 89 ಎಸೆತಗಳಲ್ಲಿ ಶುಬ್ಮನ್ ಗಿಲ್ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ಶುಬ್ಮನ್ ಗಿಲ್ ಸತತವಾಗಿ ಅಮೋಘ ಪ್ರದರ್ಶನ ನೀಡುತ್ತಿದ್ದು ಕಳೆದ ನಾಲ್ಕು ಪಂದ್ಯಗಳಲ್ಲಿ ಸಿಡಿಸಿರುವ ಮೂರನೇ ಶತಕ ಇದಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭರ್ಜರಿ 116 ರನ್ ಸಿಡಿಸಿದ್ದ ಶುಬ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 208 ರನ್‌ಗಳಿಸಿ ಅಮೋಘ ದ್ವಿಶತಕ ಸಿಡಿಸಿದ್ದರು. ಇದೀಗ ಮತ್ತೊಂದು ಭರ್ಜರಿ ಶತಕ ಸಿಡಿಸಿದ್ದಾರೆ.
ಇನ್ನು ಭರ್ಜರಿ ಪ್ರದರ್ಶನದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮೂರು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಅತೀ ಹೆಚ್ಚು ರನ್‌ಗಳಿಸಿದ ದಾಖಳೆ ಈವರೆಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಮೂರು ಪಂದ್ಯಗಳ ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ ಕೊಹ್ಲಿ 283 ರನ್‌ಗಳಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಆದರೆ ಇದೀಗ ಆ ದಾಖಲೆಯನ್ನು ಗಿಲ್ ಮುರಿದಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 300ಕ್ಕೂ ಅಧಿಕ ರನ್ ದಾಖಲಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಇತ್ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್/ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಜಾಕೋಬ್ ಡಫ್ಫಿ, ಬ್ಲೇರ್ ಟಿಕ್ನರ್