ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಈ ಎರಡು ತಂಡಗಳು ಹೈದರಾಬಾದ್‌ನಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕನಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದಾರೆ. ಇನ್ನು ಮತ್ತೋರ್ವ ಯುವ ಆಟಗಾರ ಇಶಾನ್ ಕಿಶನ್ ಈ ಪಂದ್ಯದಲ್ಲಿ ಮಧ್ಯಮ ಕ್ರಮಾಂಖದಲ್ಲಿ ಆಡುವ ಅವಕಾಶ ಪಡೆದುಕೊಂಡರು. ಈ ಪಂದ್ಯದ ಆರಂಭಕ್ಕೂ ಮುನ್ನ ಪ್ರತಿಕ್ರಿಯಿಸಿರುವ ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ಜವಾಬ್ಧಾರಿ ವಹಿಸಿಕೊಳ್ಳಲು ತಾನು ಸಿದ್ಧ ಎಂದಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಬದಲಿಗೆ ಆರಂಬಿಕನಾಗಿ ಶುಬ್ಮನ್ ಗಿಲ್ ಅವರನ್ನು ಕಣಕ್ಕಿಳಿಸಲು ಬಯಸುವುದಾಗಿ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದರು. ಬಾಂಗ್ಲಾದೇಶ ಸರಣಿಯಲ್ಲಿ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿದು ದ್ವಿಶತಕ ಸಿಡಿಸಿದ ಹೊರತಾಗಿಯೂ ಶುಬ್ಮನ್ ಗಿಲ್ ಅವರ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ ಆರಂಬಿಕನಾಗಿ ಅವರಿಗೆ ಅವಕಾಶ ನೀಡುವುದು ನ್ಯಾಯ ಎಂದಿದ್ದರು. ಅದಕ್ಕೆ ಪೂರಕವಾಗಿ ಶ್ರೀಲಂಕಾ ವಿರುದ್ಧದ ರನ್ ಮಳೆ ಹರಿಸಿದ್ದರು ಶುಬ್ಮನ್ ಗಿಲ್.
IND vs NZ: ನ್ಯೂಜಿಲೆಂಡ್ ವಿರುದ್ಧ ವಿರಾಟ್ ಕೊಹ್ಲಿಯ ಟಾಪ್ 3 ಅತ್ಯುತ್ತಮ ಪ್ರದರ್ಶನಗಳು
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಇಶಾನ್ ಕಿಶನ್ "ನಾನು ಸುಮ್ಮನೆ ಹೋಗಿ ಆರಂಬಿಕ ಸ್ಥಾನಕ್ಕೆ ಬೇಡಿಕೆಯಿಡಲು ಸಾಧ್ಯವಿಲ್ಲ. ತಂಡದಲ್ಲಿ ಪ್ರತಿಯೊಬ್ಬರು ಕೂಡ ಅದ್ಭುತವಾಗಿ ಆಡುತ್ತಿರುವಾಗ ಎಷ್ಟು ಬಲಿಷ್ಠವಾದ ಸ್ಪರ್ಧೆಯಿದೆ ಎಂಬುದು ತಿಳಿದಿದೆ. ಈಗ ನನಗೆ ಮಧ್ಯ ಕ್ರಮಾಂಕದಲ್ಲಿಯೂ ಉತ್ತಮ ಅವಕಾಶವಿದೆ. ಕಠಿಣ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಲು ನಾನು ಬಯಸುತ್ತೇನೆ" ಎಂದಿದ್ದಾರೆ ಇಶಾನ್ ಕಿಶನ್.
ಇನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮಧ್ಯಮ ಕ್ರಮಾಂಕದಲ್ಲಿ ಇಬ್ಬರು ಪ್ರಮುಖ ಆಟಗಾರರು ಅಲಭ್ಯವಾಗಿದ್ದಾರೆ. ಶ್ರೇಯಸ್ ಐಯ್ಯರ ಬೆನ್ನು ನೋವಿನ ಕಾರಣದಿಂದಾಗಿ ಈ ಸರಣಿಯಿಂದ ಹೊರಬಿದ್ದಿದ್ದರೆ ಕೆಎಲ್ ರಾಹುಲ್ ಕೂಡ ಈ ಸರಣಿಯಲ್ಲಿ ಆಡುತ್ತಿಲ್ಲ. ಇದು ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡಲು ಅವಕಾಶ ಮಾಡಿಕೊಟ್ಟಿದೆ.
"ಮಧ್ಯಮ ಕ್ರಮಾಂಕದಲ್ಲಿ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಉತ್ತಮವಾದ ಅವಕಾಶವಾಗಿದೆ. ಜನರು ನಾನು ಆರಂಭಿಕನಾಗಿ ಉತ್ತಮ ಆಟಗಾರ ಎಂಬುದನ್ನು ತಿಳಿಸುಕೊಂಡಿದ್ದಾರೆ. ಈಗ ನಾನು ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿಯೂ ಉತ್ತಮವಾಗಿ ಆಡಬಲ್ಲೆ ಎಂಬುದನ್ನು ಸಾಬೀತುಪಡಿಸಬೇಕಿದೆ. ತಂಡ ಉತ್ತಮ ಸ್ಥಿತಿಯಲ್ಲಿದ್ದರೆ ನಾನು ಕಣಕ್ಕಿಳಿದಾಗ ನನ್ನ ಹೊಡೆತಗಳನ್ನು ಬಾರಿಸಲು ಇಷ್ಟಪಡುತ್ತೇನೆ" ಎಂದಿದ್ದಾರೆ ಇಶಾನ್ ಕಿಶನ್.
ಇನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರು ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ನಾಲ್ಕನೇ ಕ್ರಮಾಂಖದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ 14 ಎಸೆತಗಳಲ್ಲಿ 5 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾದರು. ಇನ್ನು ಆರಂಭಿಕನಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ ಅಮೋಘ ಶತಕ ಸಿಡಿಸಿದ್ದು ಬೃಹತ್ ಮೊತ್ತವನ್ನು ದಾಖಲಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣವಾಗಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಭವಿಷ್ಯದ ಕುರಿತು ಸುನಿಲ್ ಗವಾಸ್ಕರ್ ಹೇಳಿದ್ದೇನು?
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೀಕರ್ ಭರತ್, ಶಹಬಾಜ್ ಅಹ್ಮದ್, ರಜತ್ ಪಾಟಿದಾರ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್
ಬೆಂಚ್: ಜಾಕೋಬ್ ಡಫಿ, ಡೌಗ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಇಶ್ ಸೋಧಿ