ಐಪಿಎಲ್ 15ನೇ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಹೋರಾಟ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅಂತ್ಯವಾಗಿದೆ. ಈ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸುವ ಮೂಲಕ 15ನೇ ಆವೃತ್ತಿಯಲ್ಲಿ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದೆ. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆರ್ಸಿಬಿ ಟ್ರೋಫಿ ಗೆಲ್ಲುವ ಕನಸನ್ನು ಮತ್ತೊಂದು ಬಾರಿ ಭಗ್ನಗೊಳಿಸಿದೆ. ಈ ಸೋಲಿನ ಬಳಿಕ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಪ್ರತಿಕ್ರಿಯೆ ನೀಡಿದ್ದು ಟೂರ್ನಿಯಲ್ಲಿ ತಂಡದ ಆಟಗಾರರ ಒಟ್ಟಾರೆ ಪ್ರದರ್ಶನ ತನಗೆ ಹೆಮ್ಮೆ ಮೂಡಿಸಿದೆ ಎಂದಿದ್ದಾರೆ.
ಐಪಿಎಲ್ ಫೈನಲ್ಗೇರುವ ಪ್ರಯತ್ನದಲ್ಲಿ ಆರ್ಸಿಬಿ ಮತ್ತೊಮ್ಮೆ ವಿಫಲವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದ ಆರ್ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಂಥಾ ಪ್ರದರ್ಶನ ನೀಡಲು ವಿಫಲವಾಯಿತು. ಎಲ್ಲಾ ವಿಭಾಗದಲ್ಲಿಯೂ ಮೇಲುಗೈ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ತಂಡ ಎರಡನೇ ತಂಡವಾಗಿ ಫೈನಲ್ಗೆ ಪ್ರವೇಶ ಪಡೆದಿದೆ. ಈ ಆಘಾತಕಾರಿ ಸೋಲಿನ ಬಳಿಕ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ತಂಡದ ಆಟಗಾರರು ಒಟ್ಟಾರೆ ಟೂರ್ನಿಯಲ್ಲಿ ನೀಡಿದ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟೂರ್ನಿಯುದ್ದಕ್ಕೂ ಅಭಿಮಾನಿಗಳಿಂದ ದೊರೆತ ಅದ್ಭುತ ಬೆಂಬಲಕ್ಕೆ ಧನ್ಯವಾದ ಹೇಳಲು ಆರ್ಸಿಬಿ ನಾಯಕ ಮರೆಯಲಿಲ್ಲ.
ಆರಂಭದಲ್ಲಿ ಪಿಚ್ ಸವಾಲಾಗಿತ್ತು
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ "ಈ ಪಿಚ್ನಲ್ಲಿ ಹೊಸ ಚೆಂಡನ್ನು ಎದುರೊಸುವುದು ಬಹಳ ಸವಾಲಾಗಿತ್ತು. ಆದರೆ ಹೆಚ್ಚಿನ ಹಾನಿಯಿಲ್ಲದೆ ನಾವು ಮೊದಲ ಆರು ಓವರ್ಗಳನ್ನು ದಾಟಿದ್ದೆವು. ಇದೊಂದು ರೀತಿ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸೆಶನ್ನಂತೆ ಭಾಸವಾಗಿತ್ತು. ಬೌನ್ಸ್ ಹೆಚ್ಚಾಗಿತ್ತು. 180 ರನ್ಗಳನ್ನು ನಾವು ಗಳಿಸಿದರೆ ಎದುರಾಳಿಗೆ ಸವಾಲೊಡ್ಡಬಹುದು ಎಂದು ನಾವು ಭಾವಿಸಿದ್ದೆವು" ಎಂದಿದ್ದಾರೆ ಫಾಪ್ ಡು ಪ್ಲೆಸಿಸ್.
ತಂಡದ ಪ್ರದರ್ಶನದಿಂದ ಹೆಮ್ಮೆಯಿದೆ
"ಹಾಗಿದ್ದರೂ ನಾನು ನಮ್ಮ ತಂಡದ ಪ್ರದರ್ಶನಕ್ಕೆ ಹೆಮ್ಮೆ ಪಡುತ್ತಿದ್ದೇನೆ. ಆರ್ಸಿಬಿ ತಂಡಕ್ಕೆ ಇದು ಶ್ರೇಷ್ಠವಾದ ಆವೃತ್ತಿಯಾಗಿತ್ತು. ಆರ್ಸಿಬಿ ತಂಡದಲ್ಲಿ ಇದು ನನ್ನ ಮೊದಲ ಆವೃತ್ತಿ. ಇಲ್ಲಿ ನಮಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿರುವುದು ನೋಡಲು ನಿಜಕ್ಕೂ ಹರ್ಷವಾಗುತ್ತಿದೆ.
ಭಾರತ ತಂಡಕ್ಕೆ ಆಯ್ಕೆಯಾದ ಡಿ.ಕೆ, ಹರ್ಷಲ್ ಬಗ್ಗೆ ಫಾಫ್ ಮಾತು
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾರಣಕ್ಕೆ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ ದಿನೇಶ್ ಕಾರ್ತಿಕ್ ಹಾಗೂ ವೇಗಿ ಹರ್ಷಲ್ ಪಟೇಲ್ ಬಗ್ಗೆಯೂ ಫಾಫ್ ವಿಶೇಷ ಮಾತುಗಳನ್ನಾಡಿದ್ದಾರೆ. "ಹರ್ಷಲ್, ಡಿಕೆ ಭಾರತ ತಂಡಕ್ಕೆ ನೀವು ಅರ್ಹವಾಗು ಆಯ್ಕೆಯಾಗಿದ್ದೀರಿ. ಇಂದಿನ ಪಂದ್ಯದಲ್ಲಿ ನಮ್ಮ ತಂಡ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲು ವಿಫಲವಾದರು ಕೂಡ ನಾನು ಹೆಮ್ಮೆ ಪಡುತ್ತಿದ್ದೇನೆ" ಎಂದಿದ್ದಾರೆ ಫಾಫ್ ಡು ಪ್ಲೆಸಿಸ್.
ಅಭಿಮಾನಿಗಳ ಬೆಂಬಲ ಸ್ಮರಿಸಿದ ನಾಯಕ
ಮುಂದುವರಿದು ಮಾತನಾಡಿದ ಆರ್ಸಿಬಿ ನಾಯಕ ತಂಡದಲ್ಲಿನ ಯುವ ಆಟಗಾರರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಆರ್ಸಿಬಿ ತಂಡದ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. "ನಮ್ಮ ತಂಡದಲ್ಲಿ ಕೆಲ ಅದ್ಭುತ ಯುವ ಆಟಗಾರರು ಇದ್ದಾರೆ. ಮೂರು ವರ್ಷದ ಯೋಜನೆ ನಮ್ಮ ಮುಂದಿದೆ. ಹಾಗಾಗಿ ಈ ಅವಕಾಶವನ್ನು ಮತ್ತಷ್ಟು ಉತ್ತಮವಾಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ರಜತ್ ಎಷ್ಟು ಅದ್ಭುತವಾದ ಆಟವನ್ನು ಪ್ರದರ್ಶಿಸಿದರು ಎಂಬುದನ್ನು ನೀವು ನೋಡಿದ್ದೀರಿ. ಇನ್ನು ನಮ್ಮ ಅಭಿಮಾನಿಗಳನ್ನು ನಾವು ಮರೆಯುವಂತಿಲ್ಲ. ಎಲ್ಲೇ ಹೋದರೂ ಆರ್ಸಿಬಿ-ಆರ್ಸಿಬಿ ಎಂಬ ಘೋಷಣೆಗಳು ಕೇಳಿಸುತ್ತದೆ. ಈ ಘೋಷಣೆಗಳು ನಮ್ಮ ತಂಡದ ಆಟಗಾರರ ಕಿವಿಗೆ ಬೀಳುತ್ತಿದ್ದಂತೆಯೇ ಭಾವುಕರಾಗುತ್ತಾರೆ. ಮುಂಬೈ ಪಂದ್ಯದಲ್ಲಿಯೂ ಈ ಬೆಂಬಲ ದೊರೆಯಿತ್ತು. ನಮ್ಮ ತಂಡದ ಅಭಿಮಾನಿಗಳಿಗೆ ನಮ್ಮ ಧನ್ಯವಾದಗಳು" ಎಂದಿದ್ದಾರೆ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
ರಾಜಸ್ಥಾನ್ ರಾಯಲ್ಸ್ಆಡುವ ಬಳಗ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಯುಜ್ವೇಂದ್ರ ಚಹಾಲ್
ಬೆಂಚ್: ಕರುಣ್ ನಾಯರ್, ಜೇಮ್ಸ್ ನೀಶಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕಾರ್ಬಿನ್ ಬಾಷ್, ನವದೀಪ್ ಸೈನಿ, ಕೆಸಿ ಕಾರಿಯಪ್ಪ, ಡೇರಿಲ್ ಮಿಚೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ ಜುರೆಲ್, ಶುಭಂ ಗರ್ವಾ
Faf Du plessis ಸೋತ ನಂತರ ಹೇಳಿದ್ದೇನು | Oneindia Kannada
ಆರ್ಸಿಬಿ ಆಡುವ ಬಳಗ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್
ಬೆಂಚ್: ಆಕಾಶ್ ದೀಪ್, ಅನೀಶ್ವರ್ ಗೌತಮ್, ಶೆರ್ಫೇನ್ ರುದರ್ಫೋರ್ಡ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ಚಾಮ ವಿ ಮಿಲಿಂದ್, ಜೇಸನ್ ಬೆಹ್ರೆನ್ಡಾರ್ಫ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಫಿನ್ ಅಲೆನ್, ಸಿದ್ದಾರ್ಥ್ ಕೌಲ್
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed