ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿದ ಕಾರಣ ಬಾಂಗ್ಲಾದೇಶ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಸೋಲಿನ ಬಗ್ಗೆ ಮಾಜಿ ಕ್ರಿಕೆಟಿಗ ಮದನ್‌ಲಾಲ್ ಪ್ರತಿಕ್ರಿಯಿಸಿದ್ದು ಟೀಮ್ ಇಂಡಿಯಾ ಪ್ರದರ್ಶನಕ್ಕೆ ಕಟುವಾಗಿ ಟೀಕಿಸಿದ್ದಾರೆ.
ಭಾರತದ ಸೋಲಿನ ಬಳಿಕ ಮಾತನಾಡಿರುವ ಮದನ್‌ಲಾಲ್ ಆಟಗಾರರಲ್ಲಿ ದೇಶದ ಪರವಾಗಿ ಆಡುವ ಬದ್ಧತೆಯೇ ಕಾಣಿಸುತ್ತಿಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಭಾರತ ತಂಡ ಸೂಕ್ತ ದಾರಿಯಲ್ಲಿ ಸಾಗುತ್ತಿಲ್ಲ ಎಂಬುದನ್ನು ಕೂಡ ಬೊಟ್ಟು ಮಾಡಿ ಹೇಳಿದ್ದು ಆಟಗಾರರಲ್ಲಿ ಆಟದ ಉತ್ಸುಕತೆಯೇ ಕಾಣಿಸುತ್ತಿಲ್ಲ ಎಂದಿದ್ದಾರೆ.
ಭಾರತ ತಂಡ ಇದೀಗ ಬಾಂಗ್ಲಾದೇಶ ನೆಲದಲ್ಲಿ ಸತತ ಎರಡನೇ ಏಕದಿನ ಸರಣಿ ಸೋಲನ್ನು ಅನುಭವಿಸಿದಂತಾಗಿದೆ. ಇದಕ್ಕೂ ಮುನ್ನ 2015 ರ ಜೂನ್‌ನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಮೂರು ಪಂದ್ಯಗಳ ಸರಣಿಯಲ್ಲಿ 1-2 ರಿಂದ ಸೋತಿತು.
ಇಂಡಿಯಾ ಟುಡೇಗೆ ನೀಡಿದ ಪ್ರತಿಕ್ರಿಯೆಯಲ್ಲಿ ಮದನ್‌ಲಾಲ್ "ಖಂಡಿತವಾಗಿಯೂ ಭಾರತ ತಂಡವು ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂಬುದು ಸ್ಪಷ್ಟ. ತಂಡದ ಆಟಗಾರರಲ್ಲಿ ಆಟದ ಮೇಲಿನ ತೀವ್ರತೆಯನ್ನು ನಾನು ನೋಡಿಲ್ಲ. ಕಳೆದೆರಡು ವರ್ಷಗಳಲ್ಲಿ ಅವರಲ್ಲಿ ಉತ್ಸಾಹವೇ ಇಲ್ಲ" ಎಂದು ಮದನ್ ಲಾಲ್ ಹೇಳಿದ್ದಾರೆ
ಈ ಮಧ್ಯೆ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಸೋಲನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಸೋಲಿನ ನಂತರ ಭಾರತ ತಂಡದ ರಿವ್ಯೂ ಮೀಟಿಂಗ್ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಡಿಸೆಂಬರ್ 10 ರಂದು ಚಟ್ಟೋಗ್ರಾಮ್‌ನಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಭಾರತ ವೈಟ್‌ವಾಶ್ ಅವಮಾನದಿಂದ ಪಾರಾಗಲು ಪ್ರಯತ್ನಿಸಲಿದೆ. ರೋಹಿತ್ ಶರ್ಮಾ, ವೇಗಿ ಕುಲದೀಪ್ ಸೇನ್ ಮತ್ತು ದೀಪಕ್ ಚಹರ್ ಅಂತಿಮ ಪಂದ್ಯದಿಂದ ಹೊರಗುಳಿದಿದ್ದು ಕುಲ್‌ದೀಪ್ ಯಾದವ್ ಭಾರತೀಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.