ಓವಲ್ ಅಂಗಳದಲ್ಲಿಯೂ ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ

ಲಂಡನ್, ಸೆಪ್ಟೆಂಬರ್ 6: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ ಅದ್ಭುತ ಪ್ರದರ್ಶನಕ್ಕೆ ಆತಿಥೇಯ ಇಂಗ್ಲೆಂಡ್ ಸಂಪೂರ್ಣ ಶರಣಾಗಿದೆ. ಟಾಸ್ ಸೋತು ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ತನ್ನದೇ ಶೈಲಿಯಲ್ಲಿ ತಿರುಗಿ ಬಿದ್ದ ರೀತಿಯಿಂದಾಗಿ ಟೀಮ್ ಇಂಡಿಯಾ ಸರಣಿಯಲ್ಲಿ ಎರಡನೇ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮೊದಲಿಗೆ ಲಾರ್ಡ್ಸ್ ಮೈದಾನದಲ್ಲಿ ಗೆಲುವು ಸಾಧಿಸಿದ್ದ ವಿರಾಟ್ ಪಡೆ ಈಗ ಓವಲ್ ಅಂಗಳದಲ್ಲಿಯೂ ಇಂಗ್ಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.

ಅಂತಿಮ ದಿನದಾಟದಲ್ಲಿ ಎರಡು ತಂಡಗಳ ಪರವಾಗಿಯೂ ಫಲಿತಾಂಶಕ್ಕೆ ನಿಚ್ಚಳ ಅವಕಾಶವಿತ್ತು. ಆದರೆ ಬೃಹತ್ ಸಾವಲು ಇಂಗ್ಲೆಂಡ್ ಮುಂದಿಟ್ಟಿದ್ದ ಕಾರಣ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ನಂತರ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಇದಕ್ಕೆ ಪೂರಕವಾಗಿ ಐದನೇ ದಿನವೂ ಪ್ರದರ್ಶನ ನೀಡಿದ ಭಾರತ ಇಂಗ್ಲೆಂಡ್ ದಾಂಡಿಗರ ಮೇಲೆ ಸವಾರಿ ಮಾಡಿದೆ. ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾಗಿದ್ದರೂ ಐದನೇ ದಿನ ಇಂಗ್ಲೆಂಡ್ ಆಟಗಾರರ ಈ ಆಟ ನಡೆಯಲಿಲ್ಲ. ಟೀಮ್ ಇಂಡಿಯಾ ಬೌಲರ್‌ಗಳು ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಭಾರತ ಭರ್ಜರಿ ಗೆಲ್ಲುವಂತೆ ಮಾಡಿದರು.

ಆರಂಭದಲ್ಲಿ ಭಾರೀ ಹಿನ್ನೆಡೆ: ಹೆಡಿಂಗ್ಲೆ ಟೆಸ್ಟ್ ಪಂದ್ಯವನ್ನು ಸೋತು ಓವಲ್‌ಗೆ ಬಂದಿಳಿದಿದ್ದ ಟೀಮ್ ಇಂಡಿಯಾ ಮೊದಲ ದಿನ ಮತ್ತೊಮ್ಮೆ ಆಘಾತಕಾರಿ ಪ್ರದರ್ಶನ ನೀಡಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಇಂಗ್ಲೆಂಡ್ ಬೌಲರ್‌ಗಳು ಆಘಾತ ನೀಡಿದರು. ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿ ಅಗ್ರ ಕ್ರಮಾಂಕದ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಅಗ್ಗಕ್ಕೆ ಕಬಳಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಟೀಮ್ ಇಂಡಿಯಾಗೆ ಶಾರ್ದೂಲ್ ಠಾಕೂರ್ ಆಸರೆಯಾದರು. 8ನೇ ವಿಕೆಟ್‌ಗೆ 63 ರನ್‌ಗಳ ಅಮೂಲ್ಯ ಜೊತೆಯಾಟವನ್ನು ನೀಡಿದರು. ಈ ಮೂಲಕ ಟೀಮ್ ಇಂಡಿಯಾ 191 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಇಂಗ್ಲೆಂಡ್‌ಗೆ ಆಸರೆಯಾದ ಕೆಳ ಕ್ರಮಾಂಕ: ಟೀಮ್ ಇಂಡಿಯಾವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಆಲೌಟ್ ಮಾಡಿದ ಉತ್ಸಾಹದಲ್ಲಿ ಬ್ಯಾಟಿಂಗ್‌ಗೆ ಇಳಿದಿತ್ತು ಇಂಗ್ಲೆಂಡ್. ಆದರೆ ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡಕ್ಕೆ ಭಾರತೀಯ ಬೌಲರ್‌ಗಳು ಕೂಡ ಅನಿರೀಕ್ಷಿತ ಆಘಾತ ನೀಡಲು ಆರಂಭಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಅದ್ಭುತ ಯಶಸ್ಸು ಸಾಧಿಸುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಿದ್ದರು. 62 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಜೋ ರೂಟ್ ಪಡೆ. ಇಂತಾ ಸಂದರ್ಭದಲ್ಲಿ ಇಂಗ್ಲೆಂಡ್‌ನ ಕೆಳ ಕ್ರಮಾಂಕ ತಂಡದ ನೆರವಿಗೆ ಬಂದಿತ್ತು. ಒಲ್ಲಿ ಪೋಪ್, ಕ್ರಿಸ್ ವೋಕ್ಸ್ ಇಂಗ್ಲೆಂಡ್ ತಂಡಕ್ಕೆ ತಲಾ ಅರ್ಧ ಶತಕದ ನೆರವು ನೀಡಿದರು. ಮೊಯೀನ್ ಅಲಿ ಹಾಗೂ ಜಾನಿ ಬೈರ್‌ಸ್ಟೋವ್ ಕೂಡ ಇಂಗ್ಲೆಂಡ್ ತಂಡಕ್ಕೆ ಗಮನಾರ್ಹ ಕೊಡುಗೆ ನೀಡಿದರು. ಈ ಆಟಗಾರರ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್‌ಗಳನ್ನು ಗಳಿಸಿತ್ತು. ಟೀಮ್ ಇಂಡಿಯಾಗಿಂತ 99 ರನ್‌ಗಳ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ತಿರುಗಿ ಬಿದ್ದ ಟೀಮ್ ಇಂಡಿಯಾ: ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಅಕ್ಷರಶಃ ತಿರುಗಿ ಬಿದ್ದಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಅನುಭವಿಸಿದ ಹಿನ್ನೆಡೆಯನ್ನು ಮರೆತು ಟೀಮ್ ಇಂಡಿಯಾ ಬ್ಯಾಟಿಂಗ್ ನಡೆಸಿತು. ತಮಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಮೋಘ ಶತಕ ಸಿಡಿಸಿ ತಂಡಕ್ಕೆ ನೆರವಾದರು. ಉಪನಾಯಕ ಅಜಿಂಕ್ಯಾ ರಹಾನೆ ಹೊರತು ಪಡಿಸಿದರೆ ಉಳಿದ ಎಲ್ಲಾ ಆಟಗಾರರಿಂದಲೂ ಅದ್ಭುತ ಪ್ರದರ್ಶನ ಹೊರಬಂದಿತ್ತು. ಶಾರ್ದೂಲ್ ಠಾಕೂರ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದರು. ಈ ಮೂಲಕ ಟೀಮ್ ಇಂಡಿಯಾ ಭರ್ಜರಿ 466 ರನ್‌ಗಳನ್ನು ಗಳಿಸಿತ್ತು. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 367 ರನ್‌ಗಳ ಕಠಿಣ ಸವಾಲನ್ನು ನೀಡಲು ಯಶಸ್ವಿಯಾಗಿತ್ತು.

ಮತ್ತೆ ಟೀಮ್ ಇಂಡಿಯಾ ಬೌಲರ್‌ಗಳ ಮಿಂಚು: ನಾಲ್ಕನೇ ಇನ್ನಿಂಗ್ಸ್‌ಅನ್ನು ನಾಲ್ಕನೇ ದಿನ ಆರಂಭಿಸಿದ ಇಂಗ್ಲೆಂಡ್ ಉತ್ತಮ ಜೊತೆಯಾಟವನ್ನು ಪಡೆಯಿತು. ಮೊದಲ ದಿನ ವಿಕೆಟ್ ಕಳೆದುಕೊಳ್ಳದೆ 80 ರನ್‌ಗಳ ಜೊತೆಯಾಟವನ್ನು ನೀಡಿತ್ತು. ಈ ಮೂಲಕ ಅಂತಿಮ ದಿನ ಕುತೂಹಲವನ್ನು ಮೂಡಿಸಿತ್ತು. ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ಆರಂಭಿಕರು ಶತಕದ ಜೊತೆಯಾಟ ನೀಡಿದ ಬಳಿಕ ಬೇರ್ಪಟ್ಟಿತು. ಈ ಮೂಲಕ ಇಂಗ್ಲೆಂಡ್ ತಂಡದ ಕುಸಿತ ಆರಂಭವಾಗಿತು. ಟೀಮ್ ಇಂಡಿಯಾದ ಬಹುತೇಕ ಎಲ್ಲಾ ಬೌಲರ್‌ಗಳು ಕೂಡ ತಂಡಕ್ಕೆ ಯಶಸ್ಸು ನೀಡುತ್ತಾ ಸಾಗಿದರು. ಆರಂಭಿಕರನ್ನು ಹೊರತುಪಡಿಸಿದರೆ ನಾಯಕ ಜೋ ರೂಟ್ ಮಾತ್ರವೇ 36 ರನ್‌ಗಳನ್ನು ಗಳಿಸಿ ಪ್ರತಿರೋಧವನ್ನು ಒಡ್ಡಿದರು. ಅಂತಿಮವಾಗಿ ಇಂಗ್ಲೆಂಡ್ 210 ರನ್‌ಗಳಿಗೆ ಎರಡನೇ ಇನ್ನಿಂಗ್ಸ್‌ನ ಆಟವನ್ನು ಮುಗಿಸಿ ಭಾರತಕ್ಕೆ 157 ರನ್‌ಗಳಿಂದ ಶರಣಾಯಿತು. ಟೀಮ್ ಇಂಡಿಯಾ ಪರವಾಗಿ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಉಮೇಶ್ ಯಾದವ್ ಎರಡು ಇನ್ನಿಂಗ್ಸ್‌ನಲ್ಲಿಯೂ ತಲಾ 3 ವಿಕೆಟ್ ಪಡೆದು ಮಿಂಚಿದರು

For Quick Alerts
ALLOW NOTIFICATIONS
For Daily Alerts
Story first published: Monday, September 6, 2021, 21:27 [IST]
Other articles published on Sep 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X