ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೋಗಿ ಬನ್ನಿ ಕ್ಯಾಪ್ಟನ್, ನಿಮಗಿದೋ ವಿದಾಯ: ವಾಡೇಕರ್‌ಗೆ ಟ್ವಿಟ್ಟರ್ ನಮನ

ಮುಂಬೈ, ಆಗಸ್ಟ್ 16: ಮುಂಬೈನ ಕಾಲೇಜೊಂದರ ವಿಜ್ಞಾನ ವಿದ್ಯಾರ್ಥಿಯೊಬ್ಬ ಒಮ್ಮೆ ಬಸ್‌ನಲ್ಲಿ ಕುಳಿತಿದ್ದಾಗ ಆತನ ಕಾಲೇಜಿನ ಹಳೆಯ ವಿದ್ಯಾರ್ಥಿಯ ಪರಿಚಯವಾಯಿತು. ಕ್ರಿಕೆಟ್ ಪಂದ್ಯವಾಡಲು ಹೊರಟಿದ್ದ ಸೀನಿಯರ್ ತಮ್ಮ ತಂಡಕ್ಕೆ ಸೇರಿಕೊಳ್ಳುತ್ತೀಯಾ ಎಂದು ಕೇಳಿದ.

ಆತ ಕೇಳಿದ್ದು ಆಡಲು ಅವಕಾಶ ನೀಡುವ ಉದ್ದೇಶದಿಂದ ಅಲ್ಲ. ಆತ ಬಂದರೆ 11 ಜನರಿರುವ ತಂಡಕ್ಕೆ 12ನೆಯ ಆಟಗಾರ ಸಿಗುತ್ತಾನೆ. ಅಲ್ಲಿನ ನಿಯಮದ ಪ್ರಕಾರ 12 ಮಂದಿಯಿದ್ದರೆ ಮಾತ್ರ ಪಂದ್ಯವೊಂದಕ್ಕೆ ನೀಡಲಾಗುವ 3 ರೂ. ಭತ್ಯೆ ಸಿಗುವುದು.

ಕ್ಯಾನ್ಸರಿನಿಂದ ಬಳಲುತ್ತಿದ್ದ ಕ್ರಿಕೆಟ್ ದಿಗ್ಗಜ ಅಜಿತ್ ಇನ್ನಿಲ್ಲ ಕ್ಯಾನ್ಸರಿನಿಂದ ಬಳಲುತ್ತಿದ್ದ ಕ್ರಿಕೆಟ್ ದಿಗ್ಗಜ ಅಜಿತ್ ಇನ್ನಿಲ್ಲ

ಅಷ್ಟಕ್ಕೇ ಖುಷಿಯಾದ ಆ ವಿದ್ಯಾರ್ಥಿ ಬೇರಾರೂ ಅಲ್ಲ, ಮುಂಬೈ ಸತತವಾಗಿ 15 ರಣಜಿ ಟ್ರೋಫಿ ಗೆದ್ದ ತಂಡದಲ್ಲಿ ಆಡಿದ ಆಟಗಾರ ಮತ್ತು ವಿದೇಶಿ ನೆಲದಲ್ಲಿ ಭಾರತಕ್ಕೆ ಮೊಟ್ಟ ಮೊದಲು ಸರಣಿ ಗೆಲುವು ತಂದುಕೊಟ್ಟ ನಾಯಕ ಅಜಿತ್ ವಾಡೇಕರ್.

ವಿದ್ಯಾರ್ಥಿ ವಾಡೇಕರ್‌ನನ್ನು ಕ್ರಿಕೆಟ್‌ಗೆ ಕರೆದುಕೊಂಡು ಹೋದವರು ಭಾರತದ ಖ್ಯಾತ ಸ್ಪಿನ್ನರ್ ಆದ ಬಾಲೂ ಗುಪ್ಟೆ. ಈ ಬಸ್ ಪ್ರಯಾಣ ಅಜಿತ್ ವಾಡೇಕರ್ ಎಂಬ ನಾಯಕನ ಸೃಷ್ಟಿಗೆ ಮಾತ್ರವಲ್ಲ, ಭಾರತ ಕ್ರಿಕೆಟ್‌ನ ಪುನರುತ್ಥಾನಕ್ಕೆ ಮುನ್ನುಡಿ ಬರೆಯಿತು.

ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಜೀವ ನೀಡಿದ ನಾಯಕ ಎಂದೇ ಗುರುತಿಸಲಾಗುವ ಅಜಿತ್ ವಾಡೇಕರ್ ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಟ್ವಿಟ್ಟರ್ ಲೋಕ ಹಂಚಿಕೊಂಡ ಕೆಲವು ಸಂತಾಪದ ನುಡಿಗಳು ಇಲ್ಲಿವೆ.

ನರೇಂದ್ರ ಮೋದಿ

ಭಾರತೀಯ ಕ್ರಿಕೆಟ್‌ಗೆ ನೀಡಿದ ಮಹತ್ವದ ಕೊಡುಗೆಯಿಂದ ಅಜಿತ್ ವಾಡೇಜರ್ ಅವರನ್ನು ಸ್ಮರಿಸಲಾಗುತ್ತದೆ. ಮಹಾನ್ ಬ್ಯಾಟ್ಸ್‌ಮನ್ ಮತ್ತು ಅದ್ಭುತ ನಾಯಕ. ನಮ್ಮ ಕ್ರಿಕೆಟ್ ಇತಿಹಾಸದಲ್ಲಿ ನಮ್ಮ ತಂಡವನ್ನು ಅನೇಕ ಸ್ಮರಣೀಯ ವಿಜಯಗಳಲ್ಲಿ ಮುನ್ನಡೆಸಿದ್ದಾರೆ. ಅತ್ಯುತ್ತಮ ಕ್ರಿಕೆಟ್ ಆಡಳಿತಗಾರನಾಗಿಯೂ ಅವರು ಗೌರವಕ್ಕೆ ಪಾತ್ರರಾಗಿದ್ದರು. ಅವರ ಅಗಲುವಿಕೆಯಿಂದ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅನಿಲ್ ಕುಂಬ್ಳೆ

ಅಜಿತ್ ವಾಡೇಕರ್ ಅವರು ಜಾಣ್ಮೆಯ ತಂತ್ರಗಳ ಮೂಲಕ ಮತ್ತು ತಂದೆಯ ಸ್ಥಾನದಲ್ಲಿದ್ದು ಇಡೀ ತಂಡಕ್ಕೆ ಕೋಚ್‌ಗಿಂತಲೂ ಹೆಚ್ಚಿನದ್ದಾಗಿದ್ದರು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಅವರನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಹರ್ಷ ಭೋಗ್ಲೆ

ಅಜಿತ್ ವಾಡೇಕರ್ ಅವರೊಂದಿಗೆ ಅನೇಕ ನೆನಪುಗಳಿವೆ. 1971ರಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆಲುವು ಸಾಧಿಸಿದ ಭಾರತ ತಂಡವನ್ನು ಮುನ್ನಡೆಸಿದ ನೆನಪಿಗಿಂತ ದೊಡ್ಡದು ಯಾವುದೂ ಅಲ್ಲ. ಭಾರತೀಯ ಕ್ರಿಕೆಟ್‌ನ ಪುಟದಲ್ಲಿ ಹಾಗೂ ನಮ್ಮ ಸ್ಮೃತಿಕೋಶದಲ್ಲಿ ಹೆಚ್ಚು ಮೆಚ್ಚಿಕೊಂಡ, ಹೆಚ್ಚು ಪ್ರೀತಿಸಲ್ಪಟ್ಟ ಆಟಗಾರ ಎಂದು ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.

ಐಸಿಸಿ

ಭಾರತವನ್ನು ತನ್ನ ಮೊದಲ ವಿದೇಶಿ ಸರಣಿ ಗೆಲುವಿನಲ್ಲಿ ಮುನ್ನಡೆಸಿದ್ದ ಭಾರತದ ಪ್ರೀತಿ ಪಾತ್ರ ಕ್ಯಾಪ್ಟನ್ ಅಜಿತ್ ವಾಡೇಕರ್ ಇನ್ನಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಟ್ವೀಟ್ ಮಾಡಿದೆ.

ಸಚಿನ್ ತೆಂಡೂಲ್ಕರ್

90ರ ದಶಕದಲ್ಲಿ ನಮ್ಮಲ್ಲಿನ ಅತ್ಯುತ್ತಮವಾದುದ್ದನ್ನು ಹೊರತರುವಲ್ಲಿ ಅಹಿತ್ ವಾಡೇಕರ್ ಶ್ರಮಿಸಿದ್ದರು. ಅವರ ಸಲಹೆಗಳು ಮತ್ತು ಮಾರ್ಗದರ್ಶನಕ್ಕೆ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಮಹಮ್ಮದ್ ಅಜರುದ್ದೀನ್

ಅಜಿತ್ ವಾಡೇಕರ್ ಒಬ್ಬ ಮಹಾನ್ ಆದರ್ಶ ವ್ಯಕ್ತಿ. ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ನನಗೆ ತಂದೆ ಸ್ವರೂಪಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಶೋಕ ವ್ಯಕ್ತಪಡಿಸಿದ್ದಾರೆ.

ಬಿಶನ್ ಸಿಂಗ್ ಬೇಡಿ

ಎರಡು ವಿದೇಶಿ ಮತ್ತು ಒಂದು ತವರಿನ ನೆಲದಲ್ಲಿ, ಒಟ್ಟು ಸತತವಾಗಿ ಮೂರು ಸರಣಿಗಳನ್ನು ಗೆದ್ದ ಭಾರತ ಏಕೈಕ ನಾಯಕ. ನನ್ನ ಸಮಕಾಲೀನರು ಅವರು. ನಮ್ಮ ನಡುವೆ ಅಭಿಪ್ರಾಯಭೇದವಿತ್ತು. ಆದರೆ, ಕ್ರಿಕೆಟ್‌ನ ವೈಭವವನ್ನು ನಾವು ಗೌರವಿಸುತ್ತಿದ್ದೆವು. ಅದ್ಭುತ ಫೀಲ್ಡರ್, ಆಟಗಾರ, ಆಯ್ಕೆದಾರ, ಕೋಚ್. ರಿಪ್ ಜೀತು ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಹೇಳಿದ್ದಾರೆ.

ಬೊಮನ್ ಇರಾನಿ

ತಂಬಾ ದುಃಖದ ಸುದ್ದಿ. 1971ರ ಸರಣಿ ಗೆಲುವು ವಿಶ್ವಕಪ್ ಗೆಲುವಿಗಿಂತ ಸಣ್ಣದೇನಲ್ಲ. ಅದಕ್ಕಿಂತಲೂ ದೊಡ್ಡದು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಆತ್ಮೀಯ ಕ್ಯಾಪ್ಟನ್ ಎಂದು ನಟ ಬೊಮನ್ ಇರಾನಿ ಟ್ವೀಟ್ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ

ಭಾರತದ ವಿದೇಶ ಪ್ರವಾಸದ ಸಂದರ್ಭದಲ್ಲಿನ ಅವರ ಅತ್ಯುತ್ತಮ ನಾಯಕತ್ವಕ್ಕಾಗಿ ಅವರನ್ನು ಸದಾ ನೆನಪಿಸಿಕೊಳ್ಳಲಾಗುತ್ತೆ. ಭಾರತ ಕ್ರೀಡೆಯಲ್ಲಿನ ಸಾರ್ವಕಾಲಿಕ ಚಾಂಪಿಯನ್‌ಗಳಲ್ಲಿ ಒಬ್ಬರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Story first published: Thursday, August 16, 2018, 11:55 [IST]
Other articles published on Aug 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X