ದುಬೈನಲ್ಲಿ ಫೆಬ್ರವರಿ 14 ರಿಂದ 19 ರವರೆಗೆ 2023ರ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್ ನಡೆಯಲಿದ್ದು ಈ ಟೂರ್ನಿಯಲ್ಲಿ ಪಿವಿ ಸಿಂಧು ಮತ್ತು ಎಚ್‌ಎಸ್ ಪ್ರಣಯ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವಿ ಸಿಂಧು ಮತ್ತು ಎಚ್‌ಎಸ್ ಪ್ರಣಯ್ ಅವರು ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕದ ಸಿಂಗಲ್ಸ್ ಆಟಗಾರರಾಗಿದ್ದಾರೆ. ಪಿವಿ ಸಿಂಧು ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಇತ್ತೀಚಿನ ಬ್ಯಾಡ್ಮಿಂಟನ್ ವಿಶ್ವ ಶ್ರೇಯಾಂಕದಲ್ಲಿ ಎಚ್‌ಎಸ್ ಪ್ರಣಯ್ ಎಂಟನೇ ಸ್ಥಾನಕ್ಕೆ ಏರಿದ್ದಾರೆ.
ಕೇವಲ ಒಂದು ಜೋಡಿಯನ್ನು ಒಳಗೊಂಡಿರುವ ಮಿಶ್ರ ಡಬಲ್ಸ್ ಸ್ಪರ್ಧೆಯನ್ನು ಹೊರತುಪಡಿಸಿ, ಪ್ರತಿ ವಿಭಾಗವು (ಸಿಂಗಲ್ಸ್ ಮತ್ತು ಡಬಲ್ಸ್) ಇಬ್ಬರು ಆಟಗಾರರು ಮತ್ತು ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಇಂಟರ್‌ನ್ಯಾಶನಲ್ ಚಾಲೆಂಜ್‌ನಲ್ಲಿ ಜಯಗಳಿಸಿದ ಆಕರ್ಷಿ ಕಶ್ಯಪ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ಆಕರ್ಷಿ ಕಶ್ಯಪ್ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದರು.
ಇನ್ನು ಈ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.10 ಲಕ್ಷ್ಯ ಸೇನ್ ಎರಡನೇ ಆಟಗಾರರಾಗಿ ಸ್ಪರ್ಧಿಸಲಿದ್ದಾರೆ. 21 ವರ್ಷ ವಯಸ್ಸಿನವರು ಯುವ ಆಟಗಾರ 2022ರಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು ಬೀಗಿದ್ದರು.
ಫ್ರೆಂಚ್ ಓಪನ್ ಚಾಂಪಿಯನ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು ಕೃಷ್ಣ ಪ್ರಸಾದ್ ಜಿ ಮತ್ತು ವಿಷ್ಣುವರ್ಧನ್ ಗೌಡ್ ಎರಡನೇ ಜೋಡಿಯಾಗಿ ತಂಡ ಸೇರಿಕೊಂಡಿದ್ದಾರೆ.
ಎರಡು ವರ್ಷಗಳಿಗೊಮ್ಮೆ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್ ಆಯೋಜನೆಗೊಳಿಸಲಾಗುತ್ತಿದ್ದು 2021ರಲ್ಲಿ ಈ ಟೂರ್ನಿಯ ಕೊನೆಯ ಆವೃತ್ತಿ ಕೊರೊನಾವೈರಸ್ ಕಾರಣದಿಂದ ರದ್ದುಗೊಂಡಿತ್ತು.