
ಹೆಚ್ಚು ಬೌಂಡರಿ ಗಳಿಸಿದ ಆಟಗಾರನಾಗಲು ಕೊಹ್ಲಿಗೆ 2 ಬೌಂಡರಿಗಳ ಅಗತ್ಯ
ಸದ್ಯ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದಿದ್ದರೂ, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬರುವ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ದಾಖಲೆಗಳ ಪಟ್ಟಿಯನ್ನು ವಿಸ್ತರಿಸುವ ಅವಕಾಶವಿದೆ.
ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ 1,161 ಬೌಂಡರಿಗಳನ್ನು ಬಾರಿಸಿದ್ದು, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆಡಮ್ ಗಿಲ್‌ಕ್ರಿಸ್ಟ್ ಅವರ 1,162 ಬೌಂಡರಿಗಳ ಸಂಖ್ಯೆಯನ್ನು ಮೀರಿಸಲು ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಇತಿಹಾಸದಲ್ಲಿ ಐದನೇ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ ಆಟಗಾರನಾಗಲು ಕೇವಲ ಎರಡು ಬೌಂಡರಿಗಳ ಅಗತ್ಯವಿದೆ.

ಹೆಚ್ಚು ರನ್ ಗಳಿಸಿದ ಆಟಗಾರನಾಲು ಶ್ರೇಯಸ್ ಅಯ್ಯರ್‌ಗೆ 21 ರನ್ ಅಗತ್ಯ
ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್‌ಮನ್ ಎಂದರೆ ಶ್ರೇಯಸ್ ಅಯ್ಯರ್. ಇದೀಗ ಅವರು ಮೂರನೇ ಏಕದಿನ ಪಂದ್ಯದಲ್ಲಿ ಮಹತ್ವದ ವೈಯಕ್ತಿಕ ಮೈಲಿಗಲ್ಲು ಸ್ಥಾಪಿಸಲು ಎದುರು ನೋಡುತ್ತಿದ್ದಾರೆ.
ಮುಂಬೈ ಮೂಲದ ಬ್ಯಾಟರ್ ಶ್ರೇಯಸ್ ಅಯ್ಯರ್ ಶನಿವಾರದ ಪಂದ್ಯದಲ್ಲಿ ಕನಿಷ್ಠ 25 ರನ್ ಗಳಿಸಲು ಯಶಸ್ವಿಯಾದರೆ, 2022ರಲ್ಲಿ ಭಾರತದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಬ್ಯಾಟರ್ ಎನಿಸಲಿದ್ದಾರೆ.
ಶ್ರೇಯಸ್ ಅಯ್ಯರ್ ಈ ವರ್ಷ ಇಲ್ಲಿಯವರೆಗೆ ಒಟ್ಟು 1404 ರನ್ (ಟೆಸ್ಟ್‌ಗಳಲ್ಲಿ 220, ಏಕದಿನ ಪಂದ್ಯಗಳಲ್ಲಿ 721 ಮತ್ತು ಟಿ20 ಪಂದ್ಯಗಳಲ್ಲಿ 463 ರನ್) ಗಳಿಸಿದ್ದಾರೆ. ಎಲ್ಲ ಸ್ವರೂಪಗಳಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
2022ರಲ್ಲಿ ಭಾರತ ತಂಡಕ್ಕಾಗಿ 1424 ರನ್ (ಏಕದಿನ ಪಂದ್ಯಗಳಲ್ಲಿ 260 ಮತ್ತು ಟಿ20 ಪಂದ್ಯಗಳಲ್ಲಿ 1164 ರನ್) ಗಳಿಸಿರುವ ಸೂರ್ಯಕುಮಾರ್ ಯಾದವ್ ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ.

ಏಕದಿನ ಇತಿಹಾಸದಲ್ಲಿ 2ನೇ ಬಾರಿಗೆ ವೈಟ್‌ವಾಶ್ ಸಾಧ್ಯತೆ
ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಭಾರತ ತಂಡ ಈಗಾಗಲೇ ಸರಣಿಯನ್ನು 2-0 ಅಂತರದಿಂದ ಸೋತಾಗಿದೆ. ಹೀಗಿರುವಾಗ ಪ್ರವಾಸಿ ಭಾರತ ತಂಡ ವೈಟ್‌ವಾಶ್ ಮುಖಭಂಗ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ.
ಒಂದು ವೇಳೆ ಮೂರನೇ ಏಕದಿನ ಪಂದ್ಯವನ್ನು ಭಾರತ ತಂಡ ಸೋತರೆ, ಏಷ್ಯಾದ ಎದುರಾಳಿಯ ವಿರುದ್ಧ ತಮ್ಮ ಎರಡನೇ ಏಕದಿನ ದ್ವಿಪಕ್ಷೀಯ ವೈಟ್‌ವಾಶ್ ಮುಖಭಂಗ ಅನುಭವಿಸಬೇಕಿದೆ. 1997ರಲ್ಲಿ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವು 3-0 ಅಂತರದಿಂದ ಸೋಲಿಸಿದಾಗ ಭಾರತವು ಏಷ್ಯನ್ ತಂಡದ ವಿರುದ್ಧ ಕ್ಲೀನ್‌ಸ್ವೀಪ್ ಅನುಭವಿಸಿತ್ತು. ಅದೇ ರೀತಿ ಆತಿಥೇಯ ಬಾಂಗ್ಲಾದೇಶ ತಂಡವು ಭಾರತದ ವಿರುದ್ಧ ಈ ಗಮನಾರ್ಹ ಸಾಧನೆ ಮಾಡಿದ ಎರಡನೇ ಏಷ್ಯಾದ ತಂಡವಾಗಲು ಪ್ರಯತ್ನಿಸಲಿದೆ.