ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಜನವರಿ 7 ಶನಿವಾರ ನಡೆಯಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಎರಡು ತಂಡಗಳು ಕೂಡ ತಲಾ ಒಂದು ಪಂದ್ಯ ಗೆದ್ದು ಸರಣಿ ಸಮಬಲಗೊಂಡಿದೆ. ಹೀಗಾಗಿ ಶನಿವಾರದ ಪಂದ್ಯ ಸರಣಿಯ ನಿರ್ಣಾಯಕವೆನಿಸಿದೆ. ಇನ್ನು ಈ ಮಹತ್ವದ ಪಂದ್ಯವನ್ನಾಡಲು ಟೀಮ್ ಇಂಡಿಯಾ ಈಗಾಗಲೇ ರಾಜ್‌ಕೋಟ್ ತಲುಪಿದ್ದು ಶನಿವಾರ ಅಭ್ಯಾಸ ನಡೆಸಲಿದೆ.
ಇನ್ನು ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಬದಲಾವಣೆ ಮಾಡುವುದು ಬಹುತೇಕ ಖಚಿತ. ಎರಡನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದ ಆರ್ಶ್‌ದೀಪ್ ಸಿಂಗ್ ಕಳಪೆ ಲಯವನ್ನು ಪ್ರದರ್ಶಿಸಿದ್ದರು. ಐದು ನೋಬಾಲ್ ಎಸೆದು ಅತ್ಯಂತ ದುಬಾರಿ ಎನಿಸಿದ್ದರು. ಎಸೆದ ಕೇವಲ ಎರಡು ಓವರ್‌ಗಳಲ್ಲಿ ಭಾರತದ ಪರವಾಗಿ ನೋಬಾಲ್ ಎಸೆದು ಕೆಟ್ಟ ದಾಖಲೆ ಕೂಡ ಬರೆದುಕೊಂಡಿದ್ದಾರೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಅರ್ಶ್‌ದೀಪ್ ಸಿಂಗ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆಯಿದೆ.
ಎರಡನೇ ಪಂದ್ಯದಲ್ಲಿ ಅರ್ಶ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಮಾಡಿದ ಎಡವಟ್ಟಿನ ಬಗ್ಗೆ ನಾಯಕ ಹಾರ್ದಿಕ್ ಪಾಂಡ್ಯ ಕಟುವಾಗಿ ಪ್ರತಿಕ್ರಿಯಿಸಿದ್ದರು. ಮೂಲಭೂತ ವಿಚಾರಗಳಲ್ಲಿ ತಪ್ಪೆಸಗುವುದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸರಿಯಲ್ಲ ಎಂದಿರುವ ಹಾರ್ದಿಕ್ ಪಾಂಡ್ಯ ನೋಬಾಲ್ ಎಸೆಯುವುದು ಕ್ರೈಮ್ ಎಂದಿದ್ದರು.
"ನಿಮಗೆ ಕೆಟ್ಟ ದಿನಗಳು ಇರಬಹುದು. ಆದರೆ ಮೂಲಭೂತ ಸಂಗತಿಗಳನ್ನು ನೀವು ಬಿಟ್ಟುಬಿಡಬಾರದು. ಇಂಥಾ ಹಂತದಲ್ಲಿ ಅದು ಬಹಳ ಕಠಿಣವಾಗುತ್ತದೆ" ಎಂದು ಅರ್ಶ್‌ದೀಪ್ ಸಿಂಗ್ ನೋ ಬಾಲ್ ಎಸೆದ ವಿಚಾರವಾಗಿ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ಮುಂದುವರಿದ ಹಾರ್ದಿಕ್ "ಈ ಹಿಂದೆ ಕೂಡ ಅವರು ನೋ ಬಾಲ್‌ಗಳನ್ನು ಎಸೆದಿದ್ದಾರೆ. ಇದು ಆರೋಪ ಮಾಡುವುದಲ್ಲ, ಆದರೆ ನೋ ಬಾಲ್ ಎಸೆಯುವುದು ದೊಡ್ಡ ಅಪರಾಧ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾರ್ದಿಕ್ ಪಾಂಡ್ಯ
ಇನ್ನು ಈ ಪಂದ್ಯದಲ್ಲಿ ಕೇವಲ ಎರಡು ಓವರ್‌ಗಳ ಬೌಲಿಂಗ್ ಮಾಡಿದ ಅರ್ಶ್‌ದೀಪ್ ಸಿಂಗ್ ಬರೊಬ್ಬರಿ 5 ನೋ ಬಾಲ್ ಎಸೆದಿದ್ದಾರೆ. ಈ ಮೂಲಕ ಶ್ರೀಲಂಕಾ ಬೃಹತ್ ಮೊತ್ತ ಪೇರಿಸಲು ಪ್ರಮುಖ ಕಾರಣವಾದರು. ತಮ್ಮ ಮೊದಲ ಓವರ್‌ನಲ್ಲಿಯೇ ಅರ್ಶ್‌ದೀಪ್ ಸಿಂಗ್ ಹ್ಯಾಟ್ರಿಕ್ ನೋಬಾಲ್ ಎಸೆದಿದ್ದರು. ಬಳಿಕ 19 ಓವರ್ ಎಸೆಯಲು ಬಂದ ಯುವ ಆಟಗಾರ ಈ ಹಂತದಲ್ಲಿಯೂ ಎರಡು ನೋಬಾಲ್ ಬೊಟ್ಟುಕೊಟ್ಟರು. ಇದು ಇದು ಭಾರತದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಈ ಮೂಲಜ ಟಿ20 ಸರಣಿಯೊಂದರಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ನೋಬಾಲ್ ಎಸೆದ ಬೌಲರ್ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ ಅರ್ಷ್‌ದೀಪ್. ಇನ್ನು ಈ ಪಂದ್ಯದಲ್ಲಿ ಒಟ್ಟು ಭಾರತದ ಬೌಲರ್‌ಗಳು ಒಟ್ಟು 7 ನೋಬಾಲ್ ಎಸೆದಿರುವುದು ಕೂಡ ಭಾರತದ ಕೆಟ್ಟ ದಾಖಲೆಯಾಗಿದೆ.