ತಂಡಕ್ಕೆ ಆಯ್ಕೆಯಾಗದ ಬೇಸರ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಅಂಬಾಟಿ ರಾಯುಡು

ICC World Cup 2019 : ರಾಯುಡು ದಿಢೀರ್ ನಿರ್ಧಾರದ ಹಿಂದಿದೆ ಬಹುದೊಡ್ಡ ಕಾರಣ..!|Ambati Rayudu|Oneindia Kannada
indian cricketer Ambati Rayudu announces retirement from international cricket

ನವದೆಹಲಿ, ಜುಲೈ 3: ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶ ಸಿಗದೆ ಹತಾಶರಾಗಿದ್ದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ನಲ್ಲಿ ಆಡಲು ಅವಕಾಶ ಸಿಗುವ ಬಗ್ಗೆ ಅಂಬಾಟಿ ರಾಯುಡು ವಿಶ್ವಾಸ ಹೊಂದಿದ್ದರು. ಆದರೆ, ಅಂತಿಮ ತಂಡ ಪ್ರಕಟಿಸಿದಾಗ ಅವರ ಹೆಸರು ಇರಲಿಲ್ಲ. ಈ ಬಗ್ಗೆ ಅವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡು ತಂಡದಿಂದ ಹೊರಬಿದ್ದಾಗ ರಾಯುಡುಗೆ ಬುಲಾವ್ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಅವರ ಬದಲು ಆಯ್ಕೆ ಸಮಿತಿ ರಿಷಬ್ ಪಂತ್ ಅವರನ್ನು ಆಯ್ದುಕೊಂಡಿತ್ತು. ಆಲ್‌ರೌಂಡರ್ ವಿಜಯ್ ಶಂಕರ್ ಕೂಡ ಗಾಯಗೊಂಡು ಭಾರತಕ್ಕೆ ಮರಳಿದಾಗಲೂ ರಾಯುಡು ಅವರನ್ನು ಕಡೆಗಣಿಸಿ ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಅವರನ್ನು ಪರಿಗಣಿಸಲಾಗಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕೆಚ್ಚೆದೆಯ ಬ್ಯಾಟ್ಸ್ಮನ್ ಯುವರಾಜ್ ನಿವೃತ್ತಿ!?

ವಿಶ್ವಕಪ್‌ನಲ್ಲಿ ಆಡುವ ಮಹದಾಸೆ ಇಟ್ಟುಕೊಂಡಿದ್ದ ಅಂಬಾಟಿ ರಾಯುಡು ಅವರಿಗೆ ಆಯ್ಕೆ ಸಮಿತಿ ತಮ್ಮನ್ನು ನಿರ್ಲಕ್ಷಿಸಿರುವುದು ಅಘಾತ ತಂದಿದೆ. ರಾಯುಡು ಅವರು ವ್ಯಂಗ್ಯವಾಗಿ ಮಾಡಿದ್ದ ಟ್ವೀಟ್ ಕೂಡ ಅವರನ್ನು ತಂಡಕ್ಕೆ ಆಯ್ಕೆ ಮಾಡದಿರಲು ಕಾರಣ ಎನ್ನಲಾಗಿದೆ. ಭಾರತ ತಂಡ ಎದುರಿಸುತ್ತಿದ್ದ ನಾಲ್ಕನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ನ ಕೊರತೆಯನ್ನು ರಾಯುಡು ತುಂಬಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಹಲವು ಪಂದ್ಯಗಳಲ್ಲಿ ಅವರು ಈ ಕ್ರಮಾಂಕದಲ್ಲಿ ಆಡಿದ್ದರು. ಆದರೂ ತಂಡಕ್ಕೆ ಆಯ್ಕೆ ಮಾಡದೆ ಇರುವುದು ಅವರಲ್ಲಿ ಬೇಸರ ತಂದಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ತೊರೆಯಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಉತ್ತಮ ಆಟಗಾರ ಎಂಬ ಮೆಚ್ಚುಗೆ ಗಳಿಸಿದ್ದರೂ ಅಂಬಾಟಿ ರಾಯುಡು ವಿವಾದಾತ್ಮಕ ವ್ಯಕ್ತಿಯಾಗಿದ್ದರು. ಕ್ರಿಕೆಟಿಗರೊಂದಿಗೆ, ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿ ಹಲವು ಬಾರಿ ಛೀಮಾರಿ ಹಾಕಿಸಿಕೊಂಡಿದ್ದರು. ಅವರ ಈ ವರ್ತನೆಯೇ ಕ್ರಿಕೆಟ್ ಬದುಕಿಗೂ ಮಾರಕವಾಯಿತು ಎಂದು ಹೇಳಲಾಗಿದೆ.

ಐಪಿಎಲ್‌ನಲ್ಲಿ ಆಡುತ್ತೇನೆ

ಐಪಿಎಲ್‌ನಲ್ಲಿ ಆಡುತ್ತೇನೆ

ತಮ್ಮ ನಿವೃತ್ತಿಯ ದಿಢೀರ್ ನಿರ್ಧಾರಕ್ಕೆ ಅಂಬಾಟಿ ರಾಯುಡು ಸೂಕ್ತ ಕಾರಣ ನೀಡಿಲ್ಲ. ಆದರೆ, ದೇಶಿ ಟಿ20 ಟೂರ್ನಿಯಾದ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಮಗೆ ಅವಕಾಶ ಸಿಗುವುದಿಲ್ಲ ಎಂದು ಅರಿತಿದ್ದ ರಾಯುಡು, ಏಕದಿನದ ಮೇಲೆ ಗಮನ ಹರಿಸುವ ಸಲುವಾಗಿ ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಈ ನಡುವೆ ಅವರಿಗೆ ಬೇರೊಂದು ದೇಶದಿಂದ ಪೌರತ್ವದ ಅವಕಾಶ ದೊರೆತಿದೆ ಎಂದು ವರದಿಯಾಗಿದೆ. ರಾಯುಡು ಅವರು ಹಠಾತ್ ನಿವೃತ್ತಿ ನಿರ್ಧಾರಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ.

ನಾಲ್ಕು ತಂಡಗಳಲ್ಲಿ ರಣಜಿ

ನಾಲ್ಕು ತಂಡಗಳಲ್ಲಿ ರಣಜಿ

33 ವರ್ಷದ ರಾಯುಡು ಆಂಧ್ರಪ್ರದೇಶದಲ್ಲಿ ಗುಂಟೂರಿನಲ್ಲಿ ಜನಿಸಿದ್ದರು. ತಮ್ಮ 2001-02ನೇ ಸಾಲಿನಲ್ಲಿ 16ನೇ ವಯಸ್ಸಿನಲ್ಲಿ ಅವರು ಹೈದರಾಬಾದ್ ರಣಜಿ ತಂಡದ ಮೂಲಕ ಪ್ರಥಮದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ಸಿಟ್ಟಿಗೆದ್ದಿದ್ದ ಅವರು ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಗೆ ಸೇರಿಕೊಂಡಿದ್ದರು. ಅಲ್ಲಿಂದ ಅವರು ಬರೋಡಾ ಮತ್ತು ವಿದರ್ಭ ತಂಡಗಳನ್ನು ಸಹ ರಣಜಿಯಲ್ಲಿ ಪ್ರತಿನಿಧಿಸಿದ್ದರು. ನಂತರ ಹೈದರಾಬಾದ್‌ ತಂಡಕ್ಕೆ ಮರಳಿದ್ದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಕಳೆದ ವರ್ಷದ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮುಗಿದ ಬಳಿಮ ರಾಯುಡು, ಹೈದರಾಬಾದ್ ರಣಜಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದು ನಿವೃತ್ತಿ ಘೋಷಿಸಿದ್ದರು.

ಜಗತ್ತಿನ ಮನಗೆದ್ದ ಈ ಉತ್ಸಾಹಿ 'ಯುವ' ಅಭಿಮಾನಿ ಯಾರು ಗೊತ್ತೇ?

ರಾಷ್ಟ್ರೀಯ ತಂಡದಲ್ಲಿ ರಾಯುಡು ಸಾಧನೆ

ರಾಷ್ಟ್ರೀಯ ತಂಡದಲ್ಲಿ ರಾಯುಡು ಸಾಧನೆ

ಭಾರತ ತಂಡದ ಪರವಾಗಿ ರಾಯುಡು 55 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 50 ಇನ್ನಿಂಗ್ಸ್‌ಗಳಲ್ಲಿ 47.05ರ ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು ಹತ್ತು ಅರ್ಧಶತಕಗಳು ಸೇರಿವೆ. ಬೌಲಿಂಗ್ ಕೂಡ ನಿರ್ವಹಿಸಿದ್ದ ಅವರು ಒಟ್ಟು ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಜತೆಗೆ 6 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಇದರಲ್ಲಿ ಹೆಚ್ಚು ಮಿಂಚಿಲ್ಲ. ಐದು ಇನ್ನಿಂಗ್ಸ್‌ಗಳಿಂದ 10.50 ಸರಾದಸರಿಯಲ್ಲಿ ಕೇವಲ 42 ರನ್ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಾಯುಡು ಇನ್ನು ಬೌಲಿಂಗ್ ಮಾಡುವಂತಿಲ್ಲ!

ಪ್ರಥಮದರ್ಜೆಯಲ್ಲಿ ಸಾಧನೆ

ಪ್ರಥಮದರ್ಜೆಯಲ್ಲಿ ಸಾಧನೆ

ಸುಮಾರು 17 ವರ್ಷ ಪ್ರಥಮದರ್ಜೆ ಕ್ರಿಕೆಟ್ ಆಡಿರುವ ಅಂಬಾಟಿ ರಾಯುಡು 97 ಪಂದ್ಯಗಳಲ್ಲಿ 45.56ರ ಸರಾಸರಿಯಲ್ಲಿ 6,151 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 16 ಶತಕ ಮತ್ತು 34 ಅರ್ಧಶತಕಗಳಿವೆ. ಬೌಲಿಂಗ್‌ನಲ್ಲಿ ಒಟ್ಟು ಹತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಥಮದರ್ಜೆ ಏಕದಿನದಲ್ಲಿ 160 ಪಂದ್ಯಗಳನ್ನು ಆಡಿದ್ದು, 40.82 ಸರಾಸರಿಯಲ್ಲಿ 5,103 ರನ್ ಬಾರಿಸಿದ್ದಾರೆ. ಒಟ್ಟಾರೆ ಟಿ20ಗಳಲ್ಲಿ 216 ಪಂದ್ಯಗಳಲ್ಲಿ 26.04ರ ಸರಾಸರಿಯಲ್ಲಿ 4584 ರನ್ ಗಳಿಸಿದ್ದಾರೆ.

ಈ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಯಾರೆಂದು ಊಹಿಸಿದ ಯುವರಾಜ್ ಸಿಂಗ್

ಐರ್ಲೆಂಡ್‌ ಪರ ಆಡಲಿದ್ದಾರೆಯೇ ರಾಯುಡು?

ಐರ್ಲೆಂಡ್‌ ಪರ ಆಡಲಿದ್ದಾರೆಯೇ ರಾಯುಡು?

ಅಂಬಾಟಿ ರಾಯುಡು ಅವರ ನಿವೃತ್ತಿ ನಿರ್ಧಾರಕ್ಕೆ ತಂಡದಿಂದ ಕೈಬಿಟ್ಟಿರುವುದು ಅಲ್ಲದೆ, ಬೇರೊಂದು ಪ್ರಬಲ ಕಾರಣವೂ ಇದೆ ಎನ್ನಲಾಗಿದೆ. ವರದಿಗಳ ಪ್ರಕಾರ ಅಂಬಾಟಿ ರಾಯುಡು ಅವರು ಐರ್ಲೆಂಡ್‌ನಿಂದ ಪೌರತ್ವದ ಆಫರ್ ಪಡೆದುಕೊಂಡಿದ್ದಾರೆ. ಭಾರತ ತಂಡ ರಾಯುಡು ಅವರನ್ನು ಕಡೆಗಣಿಸಿರುವ ಅವಕಾಶವನ್ನು ಬಳಸಿಕೊಂಡಿರುವ ಐರ್ಲೆಂಡ್ ಕ್ರಿಕೆಟ್, ಟ್ವಿಟ್ಟರ್‌ನಲ್ಲಿ ರಾಯುಡು ಅವರಿಗೆ ಬಹಿರಂಗ ಆಹ್ವಾನ ನೀಡಿತ್ತು.

ಬನ್ನಿ, ನಮ್ಮನ್ನು ಸೇರಿಕೊಳ್ಳಿ

ಭಾರತವು ಗಾಯಾಳು ವಿಜಯ್ ಶಂಕರ್ ಅವರ ಬದಲಿಗೆ ಮಯಾಂಕ್ ಅಗರವಾಲ್ ಅವರನ್ನು ಆಯ್ಕೆ ಮಾಡಿರುವುದನ್ನು ಮತ್ತು ರಾಯುಡು ಅವರು ತಾವು ಥ್ರೀಡಿ ಕನ್ನಡಕ ಹಾಕಿಕೊಂಡು ಪಂದ್ಯ ನೋಡುವುದಾಗಿ ಮಾಡಿದ್ದ ಟ್ವೀಟ್ಅನ್ನು ತಮಾಷೆಯಾಗಿ ಬಳಸಿಕೊಂಡಿರುವ ಐರ್ಲೆಂಡ್ ಕ್ರಿಕೆಟ್, ರಾಯುಡು ಅವರಿಗೆ ತನ್ನ ಪೌರತ್ವ ನೀಡುವ ದಾಖಲೆಯನ್ನು ಪ್ರಕಟಿಸಿದೆ. 'ಅಗರವಾಲ್ ವೃತ್ತಿಪರ ಕ್ರಿಕೆಟ್‌ನಲ್ಲಿ 72.33ರ ಸರಾಸರಿಯಲ್ಲಿ ಮೂರು ವಿಕೆಟ್ ಪಡೆದಿದ್ದಾರೆ. ಹೀಗಾಗಿ ಈಗಲಾದರೂ ರಾಯುಡು ಅಂಬಾಟಿ ಅವರು ತಮ್ಮ 3ಡಿ ಕನ್ನಡಕವನ್ನು ಬದಿಗಿರಿಸಬಹುದು. ನಾವು ಅವರಿಗಾಗಿ ಸಿದ್ಧಪಡಿಸಿರುವ ದಾಖಲೆಗಳನ್ನು ಓದಲು ಅವರಿಗೆ ಸಾಮಾನ್ಯ ಕನ್ನಡಕಗಳು ಸಾಕು. ಬನ್ನಿ ನಮ್ಮೊಂದಿಗೆ ಸೇರಿಕೊಳ್ಳಿ' ಎಂದು ಐರ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಆಹ್ವಾನ ನೀಡಿದೆ.

ಸದಾ ವಿವಾದಗಳಲ್ಲಿದ್ದ ರಾಯುಡು

ಸದಾ ವಿವಾದಗಳಲ್ಲಿದ್ದ ರಾಯುಡು

ರಾಯುಡು ತಮ್ಮ ತಾರುಣ್ಯದ ದಿನಗಳಿಂದಲೂ ಅತ್ಯುತ್ತಮ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದರು. ಆದರೆ, ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿದ್ದು ತೀರಾ ತಡವಾಗಿ. ಅದಕ್ಕೆ ಅವರ ದುಡುಕಿನ ಮತ್ತು ಮುಂಗೋಪದ ವರ್ತನೆಗಳು ಕಾರಣ ಎನ್ನಲಾಗಿದೆ.

ಬಿಸಿಸಿಐ ಆಕ್ಷೇಪವಿದ್ದರೂ, ಬಂಡಾಯವಾಗಿ ಹುಟ್ಟುಹಾಕಿದ್ದ ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ ರಾಯುಡು ಆಡಿದ್ದರು.ಅದರಿಂದಾಗಿ ಅವರನ್ನು ಕೆಲ ಸಮಯ ನಿಷೇಧಿಸಲಾಗಿತ್ತು. ಕರ್ನಾಟಕದ ವಿರುದ್ಧ ದೇಶಿ ಪಂದ್ಯದಲ್ಲಿ ಅಂಪೈರ್ ಜತೆ ಜಗಳವಾಡಿ ಎರಡು ಪಂದ್ಯ ನಿಷೇಧಕ್ಕೆ ಒಳಗಾಗಿದ್ದರು. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದ ಅವರು ಹರ್ಭಜನ್ ಸಿಂಗ್ ಜತೆ ಮೈದಾನದಲ್ಲಿಯೇ ಜಗಳವಾಡಿದ್ದರು.

ರಣಜಿಯಲ್ಲಿಯೂ ಹೊಡೆದಾಡಿಕೊಂಡಿದ್ದರು

ರಣಜಿಯಲ್ಲಿಯೂ ಹೊಡೆದಾಡಿಕೊಂಡಿದ್ದರು

ರಣಜಿ ಪಂದ್ಯವೊಂದರಲ್ಲಿ ತಮ್ಮದೇ ತಂಡದಲ್ಲಿದ್ದ ಹೈದರಾಬಾದ್‌ನ ಅರ್ಜುನ್ ಯಾದವ್ ಜತೆ ಜಗಳವಾಡಿದ್ದರು. ಇಬ್ಬರೂ ಕೈಕೈ ಮಿಲಾಯಿಸಿಕೊಂಡಿದ್ದರು. ಆಗ ಎಚ್‌ಸಿಎ ಕಾರ್ಯದರ್ಶಿಯಾಗಿದ್ದ ಮಾಜಿ ಕ್ರಿಕೆಟಿಗ ಮತ್ತು ಅರ್ಜುನ್ ಯಾದವ್ ತಂದೆ ಶಿವಲಾಲ್ ಯಾದವ್, ಅಂಬಾಟಿ ಅವರನ್ನು ತಂಡದಿಂದ ಹೊರಹಾಕಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಔಟ್ ಕೊಟ್ಟಿದ್ದಕ್ಕೆ ಬ್ಯಾಟ್ ಎತ್ತಿ ಅಂಪೈರ್ ಅವರನ್ನು ಹೊಡೆಯುವಂತೆ ಕೋಪ ವ್ಯಕ್ತಪಡಿಸಿದ್ದರು. ಹೈದರಾಬಾದ್‌ನಲ್ಲಿ ಕಾರ್‌ನಲ್ಲಿ ತೆರಳುತ್ತಿದ್ದ ವೇಳೆ ಸಣ್ಣ ಅಪಘಾತದಿಂದ ಸಿಟ್ಟಿಗೆದ್ದಿದ್ದ ರಾಯುಡು, ಹಿರಿಯ ವ್ಯಕ್ತಿಯೊಬ್ಬರಿಗೆ ಅವಾಚ್ಯವಾಗಿ ಬೈದು ಅಕ್ರೋಶಕ್ಕೆ ಒಳಗಾಗಿದ್ದರು.

ತ್ರೀಡಿ ಕನ್ನಡಕದ ಟ್ವೀಟ್

ವಿಶ್ವಕಪ್‌ನಲ್ಲಿ ತಮ್ಮನ್ನು ಕೈಬಿಟ್ಟು ಅಲ್‌ರೌಂಡರ್ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಬಿಸಿಸಿಐ ವಿರುದ್ಧ ರಾಯುಡು ವ್ಯಂಗ್ಯದ ಟ್ವೀಟ್ ಮಾಡಿದ್ದರು. 'ವಿಶ್ವಕಪ್ ನೋಡಲು ಈಗಷ್ಟೇ 3ಡಿ ಗ್ಲಾಸ್‌ಗಳ ಹೊಸ ಸೆಟ್‌ಗೆ ಆರ್ಡರ್ ಮಾಡಿದ್ದೇನೆ' ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ರಾಯುಡು ಅವರ ಪರ ಹಾಗೂ ವಿರುದ್ಧವಾಗಿ ಅನೇಕ ಹೇಳಿಕೆಗಳು ಬಂದಿದ್ದವು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, July 3, 2019, 14:21 [IST]
Other articles published on Jul 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more