
ವಾಸಿಂ ಜಾಫರ್- ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಕೋಚ್
ಭಾರತದ ಮಾಜಿ ಟೆಸ್ಟ್ ಕ್ರಿಕೆಟಿಗ ವಾಸಿಂ ಜಾಫರ್ ಅವರು ಐಪಿಎಲ್ 2023ಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
ವಾಸಿಂ ಜಾಫರ್ ಅವರು 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ಪರವಾಗಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆ ಸರಣಿಯಲ್ಲಿ ಎಂಎಸ್ ಧೋನಿ ಭಾರತದ ನಾಯಕರಾಗಿದ್ದರು. ಆದರೆ ಎಂಎಸ್ ಧೋನಿ ಮತ್ತು ವಾಸಿಂ ಜಾಫರ್ ಐಪಿಎಲ್‌ನಲ್ಲಿ ಒಟ್ಟಿಗೆ ಯಾವುದೇ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ.

ಆಶಿಶ್ ನೆಹ್ರಾ- ಗುಜರಾತ್ ಟೈಟನ್ಸ್ ಮುಖ್ಯ ಕೋಚ್
ಭಾರತ ತಂಡದ ಮಾಜಿ ಬೌಲರ್ ಆಶಿಶ್ ನೆಹ್ರಾ ಐಪಿಎಲ್ 2022ರಲ್ಲಿ ಗುಜರಾತ್ ಟೈಟನ್ಸ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಐಪಿಎಲ್ ಟ್ರೋಫಿ ಜಯಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ 2022ರಲ್ಲಿ ಹೊಸ ತಂಡವಾಗಿ ಪ್ರವೇಶಿಸಿದ ಗುಜರಾತ್ ಟೈಟನ್ಸ್ ಚೊಚ್ಚಲ ಋತುವಿನಲ್ಲಿಯೇ ಆಶಿಸ್ ನೆಹ್ರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿತು.
ಆಶಿಶ್ ನೆಹ್ರಾ ಅವರ ವಿಶಿಷ್ಟ ತಂತ್ರಗಳು ಮತ್ತು ಡ್ರೆಸ್ಸಿಂಗ್ ರೂಂನಲ್ಲಿನ ಅವರ ಚತುರ ಸಲಹೆಗಳು ಗುಜರಾತ್ ಟೈಟನ್ಸ್ ಫ್ರಾಂಚೈಸ್ ಅಂಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಲು ನೆರವಾಯಿತು. ತವರು ಮೈದಾನದಲ್ಲಿ ನಡೆದ ಐಪಿಎಲ್ 2022ರ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು.
ಇನ್ನು 2011ರ ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಆಶಿಶ್ ನೆಹ್ರಾ ಆಡಿದ್ದನ್ನು ಭಾರತೀಯ ಅಭಿಮಾನಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರು 2016ರ ಟಿ20 ವಿಶ್ವಕಪ್‌ನಲ್ಲಿಯೂ ಸಹ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡದ ಭಾಗವಾಗಿದ್ದರು ಎಂಬುದು ಗಮನಾರ್ಹ ಸಂಗತಿ.

ಡ್ವೇನ್ ಬ್ರಾವೋ- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್
ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಹಲವು ಐಪಿಎಲ್ ಋತುವಿನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದಾರೆ. ಅವರು ಐಪಿಎಲ್ 2022ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಆಡಿದ್ದರು.
ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕನೂ ಆಗಿರುವ ಡ್ವೇನ್ ಬ್ರಾವೋ ಅವರು ಶುಕ್ರವಾರ(ನವೆಂಬರ್ 2) ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರು 2023ರ ಐಪಿಎಲ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಸ್ಟೀಫನ್ ಫ್ಲೆಮಿಂಗ್- ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರು ದೀರ್ಘಕಾಲದವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಆದರೂ, ಮಾಜಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ 2008ರ ಉದ್ಘಾಟನಾ ಐಪಿಎಲ್ ಋತುವಿನಲ್ಲಿ ಎಂಎಸ್ ಧೋನಿ ನಾಯಕತ್ವದಡಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದಾರೆ.
ಕೋಚ್ ಮತ್ತು ನಾಯಕನಾಗಿ ಸ್ಟೀಫನ್ ಫ್ಲೆಮಿಂಗ್ ಮತ್ತು ಎಂಎಸ್ ಧೋನಿ ಉತ್ತಮ ಕೆಲಸದ ಬಾಂಧವ್ಯವನ್ನು ಹೊಂದಿದ್ದಾರೆ. 2023ರ ಐಪಿಎಲ್‌ನಲ್ಲಿಯೂ ಈ ಜೋಡಿಯ ಪಾಲುದಾರಿಕೆ ಮುಂದುವರಿಯಲಿದೆ.

ಮೈಕಲ್ ಹಸ್ಸಿ- ಸಿಎಸ್‌ಕೆ ಬ್ಯಾಟಿಂಗ್ ಕೋಚ್
ಒಂದು ಕಾಲದಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಿ, ಇದೀಗ ಐಪಿಎಲ್ ತಂಡದ ಕೋಚ್ ಆಗಿರುವವರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮತ್ತೊಬ್ಬ ಸಿಎಸ್‌ಕೆ ಕೋಚ್ ಮೈಕಲ್ ಹಸ್ಸಿ. ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಎಂಎಸ್ ಧೋನಿ ನಾಯಕತ್ವದಡಿಯಲ್ಲಿ 2008ರಿಂದ 2013ರವರೆಗೆ ಮತ್ತು ನಂತರ 2015ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದಾರೆ.
ಮೈಕಲ್ ಹಸ್ಸಿ ಅವರು ಐಪಿಎಲ್ ಟೂರ್ನಿಯ ಆರೆಂಜ್ ಕ್ಯಾಪ್ ವಿಜೇತರು. ಸದ್ಯ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.