ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಎಂಬ ರೋಮಾಂಚನ: 35 ವರ್ಷದ ಹಿಂದಿನ ಸಂಭ್ರಮದ ಮೆಲುಕು

ಬೆಂಗಳೂರು, ಜೂನ್ 25: ಸರಿಯಾಗಿ 35 ವರ್ಷಗಳ ಹಿಂದೆ ಭಾರತದಾದ್ಯಂತ ಸಂಭ್ರಮ ಮುಗಿಲುಮುಟ್ಟಿತ್ತು. ಅತ್ತ ದೂರದ ಇಂಗ್ಲೆಂಡ್‌ನ 'ಕ್ರಿಕೆಟ್ ಕಾಶಿ' ಲಾರ್ಡ್ಸ್ ಅಂಗಳದಲ್ಲಿ ವೆಸ್ಟ್ ಇಂಡೀಸ್ ಎಂಬ ಕ್ರಿಕೆಟ್ ದೈತ್ಯರನ್ನು ಬಗ್ಗುಬಡಿದು ಅಚ್ಚರಿಯ ಗೆಲುವನ್ನು ಕಂಡ ಭಾರತ ತಂಡ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು.

ಭಾರತ ತಂಡವು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟಿ 20 ಮತ್ತು 2011ರ ವಿಶ್ವಕಪ್ ಟ್ರೋಫಿಗಳನ್ನು ಎತ್ತಿ ಹಿಡಿದಿದೆ. ಆದರೆ, ಭಾರತದ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಕಪಿಲ್ ದೇವ್ ನಾಯಕತ್ವದ ಹುಲಿಗಳು ಎಂದೆಂದಿಗೂ ಸ್ಮರಣೀಯರು.

ಕಪಿಲ್ ಡೇವಿಲ್ಸ್ ವಿಶ್ವಕಪ್ ಎತ್ತಿಹಿಡಿದ ಆಹಾ! ಎಂಥಾ ಆ ಕ್ಷಣ!ಕಪಿಲ್ ಡೇವಿಲ್ಸ್ ವಿಶ್ವಕಪ್ ಎತ್ತಿಹಿಡಿದ ಆಹಾ! ಎಂಥಾ ಆ ಕ್ಷಣ!

2011ರ ವಿಶ್ವಕಪ್ ಶ್ರೇಷ್ಠ ತಂಡವೊಂದಕ್ಕೆ ದೊರೆತ ಗೆಲುವು. ಆದರೆ, 1983ರಲ್ಲಿ ಭಾರತ ಕ್ರಿಕೆಟ್ ವಿಚಾರದಲ್ಲಿ ಇನ್ನೂ ಎಳಸು. ಆಗ ಸತತ ಎರಡು ಬಾರಿ ವಿಶ್ವಕಪ್ ಗೆದ್ದು, ಮೂರನೆಯ ಟ್ರೋಫಿಯನ್ನು ಸುಲಭವಾಗಿ ಕೊಂಡೊಯ್ಯುವ ಲೆಕ್ಕಾಚಾರದಲ್ಲಿದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತ ನೀಡಿದ್ದು ಕಪಿಲ್ ದೇವ್ ನೇತೃತ್ವದ ತಂಡ.

ವಿಶ್ವಕಪ್ ಗೆಲ್ಲುವ ರೇಸ್‌ನಲ್ಲಿಯೇ ಇರದಿದ್ದ ಭಾರತ ತಂಡ, ಈ ಗೆಲುವಿನ ಬಳಿಕ ಸಾಕಷ್ಟು ಬದಲಾಯಿತು. ಭಾರತ ಕ್ರಿಕೆಟ್ ತಂಡಕ್ಕೆ ಒಂದು ಸ್ಪಷ್ಟ ರೂಪ ದಕ್ಕತೊಡಗಿತು.

ಅಂದು ಕಪಿಲ್ ಸಿಡಿಯದಿದ್ದರೆ ವಿಶ್ವಕಪ್ ದಕ್ಕುತ್ತಿರಲಿಲ್ಲ ಅಂದು ಕಪಿಲ್ ಸಿಡಿಯದಿದ್ದರೆ ವಿಶ್ವಕಪ್ ದಕ್ಕುತ್ತಿರಲಿಲ್ಲ

1983ರ ಜೂನ್ 25ರಂದು ಕಪಿಲ್ ದೇವ್ ನಾಯಕತ್ವದ ತಂಡ ವಿಶ್ವಕಪ್ ಗೆದ್ದಾಗ ಯಾವ ಸಂಭ್ರಮವಿತ್ತು ಎಂಬುದನ್ನು ಆ ತಂಡದಲ್ಲಿದ್ದ ಕೆಲವು ಆಟಗಾರರ ಅನುಭವಗಳನ್ನು 'ಮೈಖೇಲ್' ಹಂಚಿಕೊಂಡಿದೆ.

ಕೃಷ್ಣಮಾಚಾರಿ ಶ್ರೀಕಾಂತ್

ಕೃಷ್ಣಮಾಚಾರಿ ಶ್ರೀಕಾಂತ್

ನಾವು ವಿಶ್ವಕಪ್ ಗೆದ್ದಿದ್ದು ಒಬ್ಬ ಆಟಗಾರನಿಂದ. ಅದು ಕಪಿಲ್ ದೇವ್!. ಟೂರ್ನಿಯ ಮೊದಲ ದಿನದಿಂದ ಫೈನಲ್‌ವರೆಗೂ ನಮ್ಮೆಲ್ಲರಿಗೂ ಒಂದು ಸ್ಫೂರ್ತಿ ಶಕ್ತಿಯಾಗಿ ಅವರು ಉಳಿದುಕೊಂಡಿದ್ದರು.

ಫೈನಲ್ ಪಂದ್ಯಕ್ಕೂ ಮುನ್ನ ಅವರು ಹೇಳಿದ ಮಾತೆಂದರೆ, 'ನಾವು ಒಮ್ಮೆ ವೆಸ್ಟ್ ಇಂಡೀಸ್ ಅನ್ನು ಸೋಲಿಸಲು ಸಾಧ್ಯವಾಗಿದೆ ಎಂದರೆ (ಆರಂಭಿಕ ಸುತ್ತಿನಲ್ಲಿ) ಅದನ್ನು ಮತ್ತೆ ಸಾಧಿಸಬಹುದು' ಎಂದು. ಆ ಮಾತು ನಮ್ಮನ್ನು ಉತ್ತೇಜಿಸಿತು. ಮತ್ತು ಉಳಿದಿದ್ದೆಲ್ಲ ಈಗ ಇತಿಹಾಸ.

ರೋಜರ್ ಬಿನ್ನಿ

ರೋಜರ್ ಬಿನ್ನಿ

ಅದು ನಮ್ಮೆಲ್ಲರಿಗೂ ಅದ್ಭುತ ಟೂರ್ನಿ. ಇದರಲ್ಲಿ ಕಪಿಲ್ ದೇವ್ ಒಬ್ಬ ಆಟಗಾರನಾಗಿ ಮತ್ತು ನಾಯಕನಾಗಿ ಬೆಳೆದರು. ಟನ್‌ಬ್ರಿಡ್ಜ್‌ನಲ್ಲಿ ಜಿಂಬಾಬ್ವೆ ವಿರುದ್ಧ ಸಂಕಷ್ಟದಲ್ಲಿದ್ದಾಗ (ಭಾರತದ ಸ್ಕೋರ್ 17/5) ಶತಕ ದಾಖಲಿಸಿದ್ದು, ಒಬ್ಬ ಕ್ರಿಕೆಟಿಗನಾಗಿ ಅವರ ಶ್ರೇಷ್ಠತೆಯ ಕುರಿತು ಮಾತನಾಡುತ್ತದೆ.

ನಮಗೆ ಕಪಿಲ್ ಅವರಂತಹ ಮತ್ತೊಬ್ಬ ಆಟಗಾರ ಸಿಗಲು ಸಾಧ್ಯವಿಲ್ಲ. ವಾಸ್ತವವಾಗಿ ಆ ಶತಕ ಇಲ್ಲದಿದ್ದರೆ ನಮಗೆ ಟೂರ್ನಮೆಂಟ್ ಅಂದಿಗೇ ಮುಗಿದು ಹೋಗುತ್ತಿತ್ತು. ನಾವು ವೆಸ್ಟ್ ಇಂಡೀಸ್‌ಅನ್ನು ಮ್ಯಾಂಚೆಸ್ಟರ್‌ನಲ್ಲಿಯೂ ಸೋಲಿಸಿದ್ದೆವು. ಅದು ಕೂಡ ನಮಗೆ ಆತ್ಮವಿಶ್ವಾಸ ನೀಡಿತ್ತು. ಆ ಪಂದ್ಯದಿಂದ ಪ್ರತಿಯೊಂದೂ ನಮ್ಮ ಪರವಾಗಿ ಆಗತೊಡಗಿತ್ತು.

ಮದನ್ ಲಾಲ್

ಮದನ್ ಲಾಲ್

ಆ ದಿನದಿಂದ ನಮ್ಮ ಜೀವನ ಅದೇ ರೀತಿ ಉಳಿಯಲಿಲ್ಲ. ನಮಗೆಲ್ಲರಿಗೂ ಅದು ಅದ್ಭುತ ಗಳಿಗೆ. ಕ್ರಿಕೆಟ್ ಶ್ರೇಯಾಂಕದ ಪಟ್ಟಿಯಲ್ಲಿಯೇ ಇರದಿದ್ದವರು ವಿಶ್ವ ಚಾಂಪಿಯನ್ ಆಗಿದ್ದೆವು, ಅದೂ ಎರಡು ಬಾರಿಯ ಚಾಂಪಿಯನ್ಸ್ ವೆಸ್ಟ್ ಇಂಡೀಸ್‌ಅನ್ನು ಸೋಲಿಸಿ.

ಚೆನ್ನಾಗಿ ಆಡುತ್ತಿದ್ದ ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್‌ಅನ್ನು ಕಪಿಲ್ ದೇವ್ ಹಿಡಿದಿದ್ದು, ಪಂದ್ಯವನ್ನು ನಮ್ಮ ದಿಕ್ಕಿನತ್ತ ವಾಲಿಸಿತು. ಒಂದು ವೇಳೆ ವಿವ್ ಇನ್ನಷ್ಟು ಹೊತ್ತು ನಿಂತು ಆಡಿದ್ದರೆ ವಿಂಡೀಸ್ ಪಂದ್ಯವನ್ನು ಕಿತ್ತುಕೊಳ್ಳುತ್ತಿತ್ತು. ಆದರೆ, ಕಪಿಲ್ ದೇವ್ ವಿಶ್ವಕಪ್ ಫೈನಲ್‌ನಂತಹ ಮಹತ್ವದ ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದನ್ನು ಪಡೆದುಕೊಂಡರು. ಅಲ್ಲಿಂದ ಹಿಂದೆ ನೋಡುವ ಪ್ರಸಂಗವೇ ಬರಲಿಲ್ಲ.

ಮೋಹಿಂದರ್ ಅಮರ್‌ನಾಥ್

ಮೋಹಿಂದರ್ ಅಮರ್‌ನಾಥ್

ಟೂರ್ನಮೆಂಟ್‌ನ ಕಿರೀಟ ಧರಿಸುವ ಅವಕಾಶ ನಮಗೆ ದೊರೆತಿದ್ದು ತಂಡದ ಸಂಘಟಿತ ಪ್ರಯತ್ನದ ಫಲವಾಗಿ. ಕಪಿಲ್ ದೇವ್ ತಂಡದ ನಾಯಕ, ಯಾವ ರೀತಿ ತಂಡವನ್ನು ನಡೆಸಬೇಕೋ ಅದೇ ರೀತಿ ಮುನ್ನಡೆಸಿದರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ, ಇಲ್ಲಿ ಪ್ರತಿಯೊಬ್ಬರ ಹೋರಾಟವೂ ಇದೆ- ಶ್ರೀಕಾಂತ್, ಬಿನ್ನಿ, ಸೈಯದ್ ಕೀರ್ಮಾನಿ, ಬಲ್ಬಿಂದರ್ ಸಿಂಗ್ ಸಂಧು, ಮದನ್ ಲಾಲ್, ಯಶ್ಪಾಲ್ ಶರ್ಮಾ... ನೀವು ಯಾವ ಆಟಗಾರನ ಹೆಸರು ಹೇಳಿದರೂ ವಿಶ್ವಕಪ್‌ ಉದ್ದಕ್ಕೂ ಅವರು ಮಹತ್ವದ ಕಾಣಿಕೆ ನೀಡಿರುತ್ತಾರೆ.

ಇಟೀ ಟೂರ್ನಮೆಂಟ್ ನಲ್ಲಿ ಈ ರೀತಿ ಸಂಘಟಿತ ಪ್ರಯತ್ನ ಕಾಣುವುದು ತುಂಬಾ ಅಪರೂಪ. ವೆಸ್ಟ್ ಇಂಡೀಸ್ ವಿರುದ್ಧ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದ್ದು (26 ರನ್ ಮತ್ತು 3 ವಿಕೆಟ್) ವೈಯಕ್ತಿಕ ಸಂಭ್ರಮಕ್ಕೂ ಕಾರಣವಾದ ವಿಶೇಷ ಗಳಿಗೆ. ಆದರೆ, ನಾನು ಅಂತಿಮವಾಗಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡುತ್ತೇನೆ.

ಬಲ್ವಿಂದರ್ ಸಿಂಗ್ ಸಂಧು

ಬಲ್ವಿಂದರ್ ಸಿಂಗ್ ಸಂಧು

ಈ ಮಹಾನ್ ದಿಗ್ವಿಜಯವು ತಂಡದ ಪ್ರಯತ್ನ ಹಾಗೂ ಕಪಿಲ್ ದೇವ್ ಅವರ ಹೋರಾಟದ ಛಲದಿಂದ ದೊರೆತಿದ್ದು. ಆರಂಭದಲ್ಲಿಯೇ ಗಾರ್ಡನ್ ಗ್ರೀನಿಡ್ಜ್ ಅವರ ದೊಡ್ಡ ವಿಕೆಟ್ ಅನ್ನು ನಾನು ತೆಗೆಯಲು ಸಾಧ್ಯವಾಗಿದ್ದು, ಭಾರಿ ಸಂಭ್ರಮ ಉಂಟುಮಾಡಿತ್ತು. ಅದು ಪಂದ್ಯದ ಮೇಲೆ ಹಿಡಿತ ತಂದುಕೊಟ್ಟಿತು.

ಆದರೆ, ಫೈನಲ್‌ನಲ್ಲಿ ನಮ್ಮ ಪರವಾಗಿ ಕೆಲಸ ಮಾಡಿದ ಅನೇಕ ಅಂಶಗಳಿವೆ. ಶ್ರೀಕಾಂತ್ ಬ್ಯಾಟಿಂಗ್, ಕಪಿಲ್ ದೇವ್ ಕ್ಯಾಚ್ ಮತ್ತು ಮೋಹಿಂದರ್ ಅವರ ಆಲ್‌ರೌಂಡ್ ಆಟ. ಇದು ಒಂದು ತಂಡದ ಪ್ರಯತ್ನ ಮತ್ತು ಮೈದಾನದಲ್ಲಿ ನಮ್ಮ ಗೆಲುವಿನ ಹಂಬಲದ ನಮ್ಮ ಬಯಕೆಯ ಫಲ.

Story first published: Monday, June 25, 2018, 16:47 [IST]
Other articles published on Jun 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X