ರೈಲ್ವೇಸ್ ವಿರುದ್ಧ ಜಯಸಿದ ಕರ್ನಾಟಕ ಕ್ವಾಟರ್‌ಫೈನಲ್‌ಗೆ

Posted By:
Karnataka wins against Railways enters quarter final

ಬೆಂಗಳೂರು, ಫೆಬ್ರವರಿ 16: ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ರೈಲ್ವೇಸ್ ತಂಡವನ್ನು ಎದುರಿಸಿದ ಕರ್ನಾಟಕ ಭರ್ಜರಿ ವಿಜಯ ಸಾಧಿಸುವ ಮೂಲಕ ಎಂಟರಘಟ್ಟ ಪ್ರವೇಶಿಸಿದೆ.

ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ರೈಲ್ವೇಸ್ ತಂಡದ ವಿರುದ್ಧ ಪಂದ್ಯದಲ್ಲಿ 16 ರನ್‌ ವಿಜಯ ಸಾಧಿಸಿದ ಕರ್ನಾಟಕ ತಂಡ ನಾಕೌಟ್ ಹಂತ ಪ್ರವೇಶಿಸಿದ್ದು, ನಾಕೌಟ್ ಪ್ರವೇಶಿಸಿದ 'ಎ' ಗುಂಪಿನ ಮೊದಲ ತಂಡವಾಗಿ ಹೊರಹೊಮ್ಮಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವನ್ನು ರೈಲ್ವೇಸ್ ಬೌಲರ್‌ಗಳು ಕಾಡಿದರು. ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್ ಅಗರ್ವಾಲ್ 94 ಬಾಲ್ ಎದುರಿಸಿ 89 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿಗಳಿದ್ದವು. ಪವನ್ ದೇಶಪಾಂಡೆ ಕೂಡ ಉತ್ತಮ ಆಟವಾಡಿ 67 ಬಾಲ್ ಎದುರಿಸಿ 65 ರನ್ ಭಾರಿಸಿದರು. ಅವರು 9 ಬೌಂಡರಿ, 1 ಸಿಕ್ಸರ್ ಸಿಡಿಸಿದರು.

ಕರಣ್ ನಾಯರ್ (13), ಸಿ.ಗೌತಮ್ (25), ಸಂಚಿತ್‌ (19), ಮೋರ್ (10) ಗಳಿಸಿದ್ದು ಬಿಟ್ಟರೆ ಇನ್ನಾರು ಎರಡು ಸಂಖ್ಯೆ ದಾಟಲಿಲ್ಲ. 48.1 ಓವರ್‌ಗಳಲ್ಲಿ 257 ರನ್‌ಗಳಿಗೆ ಆಲ್ ಔಟ್ ಆದರು.

ರೈಲ್ವೇಸ್ ಬೌಲರ್‌ಗಳ ಪರ ಅನುರೀತ್ ಸಿಂಗ್ ಮತ್ತು ಮಿಶ್ರಾ ತಲಾ 3 ವಿಕೆಟ್‌ ಗಳಿಸಿದರು. ಮಂಜೀತ್ ಸಿಂಗ್ 2 ವಿಕೆಟ್ ತೆಗೆದರು. ಯಾದವ್ ಮತ್ತು ಅವಿನಾಶ್ ಯಾದವ್ ತಲಾ 1 ವಿಕೆಟ್ ಗಳಿಸಿದರು.

257 ರನ್‌ಗಳ ಗುರಿ ಬೆನ್ನತ್ತಿದ ರೈಲ್ವೇಸ್ ತಂಡ ಆರಂಭಿಕ ಕುಸಿತ ಅನುಭವಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರೂ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಅದಾದ ನಂತರ ಬಂದ ಮೃಣಾಲ್ ದಿಲ್‌ದಾರ್‌(26), ಗೋಷ್ (19) ರನ್ ಗಳಿಸಿ ಔಟಾದರು. ಆ ನಂತರ ಬಂದ ಸೈನಿ ಸೊನ್ನೆ ಸುತ್ತಿದರು. ಆಗ ರೈಲ್ವೇಸ್ ಮೊತ್ತ 56 ರನ್‌ಗಳಿಗೆ 6 ವಿಕೆಟ್‌.

ಇನ್ನೇನು ಕರ್ನಾಟಕಕ್ಕೆ ಜಯ ಸುಲಭ ತುತ್ತು ಎಂದು ಕೊಳ್ಳುವಷ್ಟರಲ್ಲಿ ಎ.ಯಾದವ್ ಮತ್ತು ಅನುರೀತ್ ಸಿಂಗ್ ಶತಕದ ಜೊತೆಯಾಟವಾಡಿ ಕರ್ನಾಟಕ ಪಾಳಯದಲ್ಲಿ ದಿಗಿಲು ಹುಟ್ಟಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಲು ಕರ್ನಾಟಕದ ಬೌಲರ್‌ಗಳು ಯಶಸ್ವಿಯಾದರು. ಆ ನಂತರ ಬ್ಯಾಟಿಂಗ್‌ಗೆ ಬಂದ ಅವಿನಾಶ್ ಯಾದವ್ 40 ರನ್ ಗಳಿಸಿದರೆ ಮಿಶ್ರಾ 28 ರನ್‌ಗಳಿಸಿ ಕರ್ನಾಟಕದ ಬೌಲರ್‌ಗಳನ್ನು ಅಲ್ಪ ಕಾಡಿದರು.

ಮುಂಚೂಣಿ ಬೌಲರ್‌, ನಾಯಕ ವಿನಯ್‌ಕುಮಾರ್ ಇಲ್ಲದೆ ಕಣಕ್ಕಿಳಿದಿದ್ದರೂ ರಾಜ್ಯದ ಬೌಲರ್‌ಗಳು ಉತ್ತಮ ಪ್ರದರ್ಶನವನ್ನೇ ತೋರಿದರು. ಪ್ರಸಾದ್ ಕೃಷ್ಣ ಮತ್ತು ಪ್ರದೀಪ್ ತಲಾ 4 ವಿಕೆಟ್ ಗಳಿಸಿದರು. ರೋನಿತ್ ಮೋರ್ 2 ವಿಕೆಟ್ ತೆಗೆದರು.

ಕ್ವಾಟರ್‌ಫೈನಲ್ ಪ್ರವೇಶಿಸಿರುವ ಕರ್ನಾಟಕ ಮೊದಲ ಕ್ವಾಟರ್‌ಫೈನಲ್ ಪಂದ್ಯವನ್ನು ಫೆಬ್ರವರಿ 21 ರಂದು ಹೈದರಾಬಾದ್‌ ಅನ್ನು ಎದುರಿಸಲಿದೆ.

Story first published: Friday, February 16, 2018, 19:38 [IST]
Other articles published on Feb 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ