ಕ್ರಿಕೆಟ್ ನಿವೃತ್ತಿ ಬಗ್ಗೆ ಯೂ ಟರ್ನ್ ಹೊಡೆದ ಲಂಕಾ ವೇಗಿ ಲಸಿತ್ ಮಾಲಿಂಗ

ಕೊಲಂಬೋ, ನವೆಂಬರ್ 20: ಶ್ರೀಲಂಕಾ ತಂಡದ ನಾಯಕ ಮತ್ತು ಅನುಭವಿ ವೇಗಿ ಲಸಿತ್ ಮಾಲಿಂಗ ನಿವೃತ್ತಿ ಬಗ್ಗೆ ತನ್ನ ನಿಲುವು ಬದಲಿಸಿದ್ದಾರೆ. ಮುಂದಿನ ವರ್ಷ ಟಿ20 ವಿಶ್ವಕಪ್ ಬಳಿಕ ತಾನು ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಮಾಲಿಂಗ ಹೇಳಿದ್ದರು. ಆದರೆ ತಾನು ಇನ್ನೊಂದೆರಡು ವರ್ಷ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಈಗ ಯೂ ಟರ್ನ್ ಹೊಡೆದಿದ್ದಾರೆ.
ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡುವುದಾಗಿ ಕಳೆದ ಮಾರ್ಚ್‌ನಲ್ಲಿ ಮಾಲಿಂಗ ಹೇಳಿಕೆ ನೀಡಿದ್ದರು. ಆದರೆ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಲಂಕಾ ತಂಡದ ನಾಯಕತ್ವ ವಹಿಸಿರುವ 36ರ ಹರೆಯದ ಲಸಿತ್, ತಾನು ಇನ್ನೂ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
'ಟಿ20ಯಲ್ಲಿ ಬೌಲಿಂಗ್‌ಗೆ ಸಿಗುವ ನಾಲ್ಕು ಓವರ್‌ಗಳಲ್ಲಿ ನಾನು ನನ್ನ ಕೌಶಲಗಳೊಂದಿಗೆ ಆಡಬಲ್ಲೆ. ಟಿ20ಯನ್ನು ನಾನೊಬ್ಬ ಬೌಲರ್ ಆಗಿ ನಿಭಾಯಿಸಬಲ್ಲೆ. ಯಾಕೆಂದರೆ ನನಗೆ ವಿಶ್ವದಗಲ ಅನೇಕ ಟಿ20 ಪಂದ್ಯಗಳನ್ನು ಆಡಿದ ಅನುಭವವಿದೆ. ಹೀಗಾಗಿ ಇನ್ನೊಂದೆರಡು ವರ್ಷಗಳ ಕಾಲ ತಾನು ಕ್ರಿಕೆಟ್‌ನಲ್ಲೇ ಮುಂದುವರೆಯಬಲ್ಲೆ,' ಎಂದು ಮಾಲಿಂಗ ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಹೇಳಿಕೊಂಡಿದ್ದಾರೆ.
ಟಿ20 ವಿಶ್ವಕಪ್ ವೇಳೆ ತಂಡವನ್ನು ಮುನ್ನಡೆಸುವ ಇಂಗಿತವೂ ಮಾಲಿಂಗ ವ್ಯಕ್ತಪಡಿಸಿದ್ದಾರೆ. 'ಶ್ರೀಲಂಕಾ ಕ್ರಿಕೆಟ್ ಬೋರ್ಡ್, ವಿಶ್ವಕಪ್‌ನಲ್ಲಿ ನಾನು ತಂಡದ ಮುಂದಾಳತ್ವ ವಹಿಸಬೇಕೆಂದು ಹೇಳಿದೆ. ಆದರೆ ಅದನ್ನು ಈಗಲೇ ಖಾತರಿಪಡಿಸುವಂತಿಲ್ಲ,' ಎಂದು ಲಸಿತ್ ತಿಳಿಸಿದರು. ಅಂದ್ಹಾಗೆ ಟಿ20ಐನಲ್ಲಿ 100 ವಿಕೆಟ್ ವಿಶ್ವದ ಏಕಮಾತ್ರ ಬೌಲರ್ ಲಸಿತ್ ಮಾಲಿಂಗ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications