World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ವಿಶ್ವಕಪ್ ನಲ್ಲಿ ರನ್ ಹೊಳೆ ಹರಿಯೋದು ಪಕ್ಕಾ..!
Top 10 power hitters who can take the World Cup by storm

ಬೆಂಗಳೂರು, ಮೇ 17: ಬಹು ನಿರೀಕ್ಷಿತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನು 12 ದಿನಗಳು ಮಾತ್ರವೇ ಬಾಕಿ ಉಳಿದಿದೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯಲಿರುವ ವಿಶ್ವ ಸಮರ ಮೇ 30ರಂದು ಚಾಲನೆ ಪಡೆಯಲಿದೆ.

ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!

ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಸದ್ಯ ಬಿಸಿಯ ತಾಪಮಾನ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವಕಪ್‌ಗೆ ಬ್ಯಾಟಿಂಗ್‌ ಸ್ನೇಹಿ ಪಿಚ್‌ಗಳು ಲಭ್ಯವಾಗಲಿದೆ ಎಂದು ಈಗಾಗಲೇ ವರದಿಯಾಗಿದೆ. ಇನ್ನು ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಕ್ರಿಕೆಟ್‌ ಜಗತ್ತಿನ ಬ್ಯಾಟಿಂಗ್‌ ದಿಗ್ಗಜರೆಲ್ಲಾ ಇಂಗ್ಲಿಷ್‌ ಪಿಚ್‌ಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ವರ್ಗವಾಗಲಿವೆ ಎಂದೇ ಭವಿಷ್ಯ ನುಡಿದಿದ್ದಾರೆ.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

ಅಂದಹಾಗೆ ಈ ಬ್ಯಾಟ್ಸ್‌ಮನ್‌ ಸ್ನೇಹಿ ಪಿಚ್‌ಗಳಲ್ಲಿ ವಿಶ್ವ ಶ್ರೇಷ್ಠ ಬೌಲರ್‌ಗಳಿಗೂ ಸಿಂಹ ಸ್ವಪ್ನವಾಗಬಲ್ಲ ಬಿಗ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌ಗಳ ಟಾಪ್‌ 10 ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಹಾರ್ದಿಕ್‌ ಪಾಂಡ್ಯ

ಬ್ಯಾಟಿಂಗ್‌ ಜೊತೆಗೆ ವೇಗದ ಬೌಲಿಂಗ್‌ ದಾಳಿ ಸಂಘಟಿಸಬಲ್ಲ ಆಲ್‌ರೌಂಡರ್‌ಗಾಗಿ ಬಹಳ ವರ್ಷಗಳಿಂದ ಹುಡುಕಾಟದಲ್ಲಿದ್ದ ಟೀಮ್‌ ಇಂಡಿಯಾಗೆ ಸಿಕ್ಕಿದ್ದು ಹಾರ್ದಿಕ್‌ ಪಾಂಡ್ಯ. ಇನಿಂಗ್ಸ್‌ ಮಧ್ಯದಲ್ಲಿ ಅಗತ್ಯದ ಓವರ್‌ಗಳನ್ನು ಮಾಡಬಲ್ಲ ಸಾಮರ್ಥ್ಯ ಮಾತ್ರವಲ್ಲ, ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ ತಮ್ಮ ದೊಡ್ಡ ಹೊಡೆತಗಳ ಮೂಲಕ ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆ ಸೇರಿಸಬಲ್ಲ ಆಟಗಾರ. ಕಳೆದ ವರ್ಷ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 46 ಎಸೆತಗಳಲ್ಲಿ 76 ರನ್‌ ಮತ್ತುಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ 66 ಎಸೆತಗಳಲ್ಲಿ 83 ರನ್‌ಗಳನ್ನು ಸಿಡಿಸಿದ್ದು ಒಡಿಐ ಕ್ರಿಕೆಟ್‌ನಲ್ಲಿ ಅವರ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನಗಳು. ಇನ್ನು ಇತ್ತೀಚಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಮುಂಬೈ ಇಂಡಿಯನ್ಸ್‌ ಪರ ಆಡಿದ 16 ಪಂದ್ಯಗಳಿಂದ 402 ರನ್‌ಗಳನ್ನು ಚಚ್ಚಿ ಬೌಲರ್‌ಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಜೊತೆಗೆ ಎಂ.ಎಸ್‌ ಧೋನಿ ಅವರ ಸಿಗ್ನೇಚರ್‌ ಹೆಲಿಕಾಪ್ಟರ್‌ ಶಾಟ್‌ಗಳ ಮೂಲಕವೂ ಕಂಗೊಳಿಸಿದ್ದಾರೆ. 25 ವರ್ಷದ ಸ್ಟಾರ್‌ ಆಲ್‌ರೌಂಡರ್‌ ಏಕದಿನ ಕ್ರಿಕೆಟ್‌ನಲ್ಲಿ 116ರ ಸ್ಟ್ರೈಕ್‌ ರೇಟ್‌ ಹೊಂದಿದ್ದು, ಟೀಮ್‌ ಇಂಡಿಯಾದ ಮ್ಯಾಚ್ ವಿನ್ನಿಂಗ್‌ ಅಟಗಾರನಾಗಿದ್ದಾರೆ.

ಜೋಸ್‌ ಬಟ್ಲರ್‌

ಇತ್ತೀಚೆಗೆ ಜಾಗತಿಕ ಕ್ರಿಕೆಟ್‌ನಲ್ಲಿ ಡೆತ್‌ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಹೆಸರುವಾಸಿಯಾದವರು ಇಂಗ್ಲೆಂಡ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌. 2015ರ ವಿಶ್ವಕಪ್‌ ಬಳಿಕ ಒಡಿಐನಲ್ಲಿ ಬಟ್ಲರ್‌ ಅಂತಿಮ 10 ಓವರ್‌ಗಳಲ್ಲಿ ಸರಾಸರಿ 181.2ರ ಸ್ಟ್ರೈಕ್‌ರೇಟ್‌ ಹೊಂದಿದ್ದಾರೆ. ವಿಶ್ವದ ಬೇರಾವ ಬ್ಯಾಟ್ಸ್‌ಮನ್‌ಗಳು ಕೊನೆಯ ಹತ್ತು ಓವರ್‌ಗಳಲ್ಲಿ ಬಟ್ಲರ್‌ ಅವರ ಈ ಸ್ಟ್ರೈಕ್‌ ರೇಟ್‌ನ ಸಮೀಪವೂ ಇಲ್ಲ. ಇನ್ನು ಸದ್ಯ ಚಾಲ್ತಿಯಲ್ಲಿರುವ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯ 2ನೇ

ಪಂದ್ಯದಲ್ಲಿ ಬಟ್ಲರ್‌ ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು. ಇದು ಅವರ ವಿಸ್ಫೋಟಕ ಬ್ಯಾಟಿಂಗ್‌ಗೆ ಹಿಡಿದ ಕೈಗನ್ನಡಿಯಾಗಿದೆ. ಜೊತೆಗೆ ಇಂಗ್ಲೆಂಡ್‌ ಪರ ಒಡಿಐನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆಯೂ ಬಟ್ಲರ್‌ ಹೆಸರಿನಲ್ಲಿದೆ.

ಡೇವಿಡ್‌ ವಾರ್ನರ್‌

13 ತಿಂಗಳ ನಿಷೇಧದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಹಿಂದಿರುಗಿರುವ ಸ್ಫೋಟಕ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ವಿಶ್ವಕಪ್‌ ಕಣದಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವಂತಾಗಿ ಅದರ ಜಿಗುಪ್ಸೆಯೆಲ್ಲವನ್ನೂ ಇತ್ತೀಚೆಗೆ ಅಂತ್ಯಗೊಂಡ ಐಪಿಎಲ್‌ ಟೂರ್ನಿಯಲ್ಲಿ ಹೊರಹಾಕಿದ ಆಸೀಸ್‌ ಬ್ಯಾಟ್ಸ್‌ಮನ್‌, ಸನ್‌ರೈಸರ್ಸ್‌ ಹೈದರಾಬಾದ್‌ ಪರ 12 ಪಂದ್ಯಗಳನ್ನಾಡಿ 692 ರನ್‌ಗಳನ್ನು ಚಚ್ಚುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿ ಆರೆಂಜ್‌ ಕ್ಯಾಪ್‌ ಗೌರವ ಪಡೆದುಕೊಂಡರು. ಇದರೊಂದಿಗೆ ವಿಶ್ವಕಪ್‌ ಅಖಾಡಕ್ಕೆ ಸಂಪೂರ್ಣ ಸಜ್ಜಾಗಿ ಕಣಕ್ಕಿಳಿಯುತ್ತಿರುವ ವಾರ್ನರ್‌, ಆಸ್ಟ್ರೇಲಿಯಾ ತಂಡಕ್ಕೆ ತನ್ನ ಚಾಂಪಿಯನ್ಸ್‌ ಪಟ್ಟ ಉಳಿಸಿಕೊಳ್ಳುವ ಕಡೆಗೆ ಶ್ರಮಿಸಲಿದ್ದಾರೆ.

ಆಂಡ್ರೆ ರಸೆಲ್‌

ತಮ್ಮ ವಿಸ್ಫೋಟಕ ಬ್ಯಾಟಿಂಗ್‌ ಮೂಲಕ ಇತ್ತೀಚಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈತ ಮನುಷ್ಯನಲ್ಲ ಅನ್ಯಗ್ರಹದಿಂದ ಬಂದಿರುವವವನು ಎಂದೆಲ್ಲಾ ಕರೆಸೆಕೊಂಡ ವೆಸ್ಟ್‌ ಇಂಡೀಸ್‌ನ ದೈತ್ಯ ಆಲ್‌ರೌಂಡರ್‌ ಆಂಡ್ರೆ ರಸೆಲ್‌, ವಿಶ್ವಕಪ್‌ನಲ್ಲಿ ವಿಂಡೀಸ್‌ ತಂಡ ಮರಳಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಪ್ರಮುಖ ಕಾರಣವಾಗಲಿದ್ದಾರೆ.

ಮೈದಾನ ಎಷ್ಟೇ ದೊಡ್ಡದಿದ್ದರೂ, ಚೆಂಡನ್ನು ಕ್ರೀಡಾಂಗಣದಿಂದಲೇ ಹೊರಗಟ್ಟುವ ಸಾಮರ್ಥ್ಯ ಹೊಂದಿರುವ 'ಡ್ರೇ ರಸ್‌' ಖ್ಯಾತಿಯ ರಸೆಲ್‌, ಈ ಬಾರಿಯ ವಿಶ್ವಕಪ್‌ನಲ್ಲಿ ಪ್ರಮುಖ ಆಕರ್ಷಣೆಯ ಬ್ಯಾಟ್ಸ್‌ಮನ್‌ ಕೂಡ. ಬ್ಯಾಟಿಂಗ್‌ ದಿಗ್ಗಜರಾದ ವೀರೇಂದ್ರ ಸೆಹ್ವಾಗ್‌ ಮತ್ತು ಆಡಮ್‌ ಗಿಲ್‌ಕ್ರಿಸ್ಟ್‌ ಅವರಂತೆ ಕಿಂಚಿತ್ತೂ ಭಯವಿಲ್ಲದೆ ಬೌಲರ್‌ಗಳನ್ನು ಬೆಂಡೆತ್ತಬಲ್ಲ ಆಟಗಾರ ರಸೆಲ್‌. ಇದಕ್ಕೆ ಸಾಕ್ಷಿ ಎಂಬಂತೆ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಅವರು 14 ಪಂದ್ಯಗಳಿಂದ 204ರ ಸ್ಟ್ರೈಕ್ ರೇಟ್‌ನಲ್ಲಿ 510 ರನ್‌ಗಳನ್ನು

ಚಚ್ಚಿದ್ದರು. ಜೊತೆಗೆ ಟೂರ್ನಿಯಲ್ಲಿ ಬರೋಬ್ಬರಿ 52 ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದ್ದರು. ಕ್ರಿಸ್‌ ಗೇಲ್‌ ಬಳಿಕ ಐಪಿಎಲ್‌ ಟೂರ್ನಿಯ ಆವೃತ್ತಿಯೊಂದರಲ್ಲಿ 50 ಹೆಚ್ಚು ಸಿಕ್ಸರ್‌ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಆಂಡ್ರೆ ರಸೆಲ್‌.

ಜಾನಿ ಬೈರ್‌ ಸ್ಟೋವ್‌

ತ್ರೀ ಲಯನ್ಸ್‌ ಖ್ಯಾತಿಯ ಇಂಗ್ಲೆಂಡ್‌ ತಂಡ ಈ ಬಾರಿಯ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದು. ಕಾರಣ ತಂಡದ ಬಲಿಷ್ಠ ಬ್ಯಾಟಿಂಗ್‌ ವಿಭಾಗ. ಅಗ್ರ ಕ್ರಮಾಂಕದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ಕೀಪರ್‌ ಜಾನಿ ಬೈರ್‌ಸ್ಟೋವ್‌ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿ ಕೊಡಬಲ್ಲರು. ಆರಂಭಿಕರಾಗಿ ಅಂತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್‌ಮನ್‌ಗಳಲ್ಲಿ ಬೈರ್‌ಸ್ಟೋವ್‌ ಕೂಡ ಒಬ್ಬರು. ಇತ್ತೀಚಿನ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಬಾರಿ ಆಡಿದ ಜಾನಿ, ಸನ್‌ರೈಸಸರ್ಸ್‌ ಹೈದರಾಬಾದ್‌ ಪರ 10 ಪಂದ್ಯಗಳಲ್ಲಿ 442 ರನ್‌ಗಳನ್ನು ಬಾರಿಸಿದ್ದರು. ಇದರೊಂದಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ ವರ್ಷದಲ್ಲೇ ಅತ್ಯಧಿಕ ರನ್‌ಗಳಿಸಿದ ದಾಖಲೆಯೇ ಜಾನಿ ಮುಡಿಗೇರಿತ್ತು. ಇಂಗ್ಲೆಂಡ್‌ ಪರ 62 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವ ಅವರು, 106ರ ಸ್ಟ್ರೈಕ್‌ರೇಟ್‌ನಲ್ಲಿ 2297 ರನ್‌ಗಳನ್ನು ಗಳಿಸಿದ್ದಾರೆ.

ಕ್ರಿಸ್ಟೋಫರ್‌ ಹೆನ್ರಿ ಗೇಲ್‌

ವೆಸ್ಟ್‌ ಇಂಡೀಸ್‌ ತಂಡದ ಪರ ದಶಕ ಕಾಲ ರನ್‌ ಮಷೀನ್‌ ಎನಿಸಿರುವ ಅನುಭವಿ ಬ್ಯಾಟ್ಸ್‌ಮನ್‌ 'ದಿ ಯೂನಿವರ್ಸ್‌ ಬಾಸ್‌' ಎಂದೇ ಖ್ಯಾತಿ ಪಡೆದಿರುವ ಕ್ರಿಸ್‌ ಗೇಲ್‌ ಅವರಿಗೆ ಈ ಬಾರಿಯ ವಿಶ್ವಕಪ್‌ ಕೊನೆಯದ್ದಾಗಿದೆ. 40 ವರ್ಷದ ದೈತ್ಯ ಎಡಗೈ ಬ್ಯಾಟ್ಸ್‌ಮನ್‌, ಕ್ರಿಕೆಟ್‌ ಜಗತ್ತಿನ ಯಾವುದೇ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಈ ವರ್ಷ ಕ್ರಿಸ್‌ ಗೇಲ್‌ ಅದ್ಭುತ ಲಯದಲ್ಲಿದ್ದು, ಆಡಿದ 5 ಒಡಿಐಗಳಲ್ಲಿ 424 ರನ್‌ಗಳನ್ನು ಕೆಚ್ಚಿ ಕೆಡವಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ. ಇತ್ತೀಚೆಗೆ ಅಂತ್ಯಗೊಂಡ ಐಪಿಎಲ್‌ ಟೂರ್ನಿಯಲ್ಲೂ ಗುಡುಗಿದ್ದ ಗೇಲ್‌, 150ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ 34 ಸಿಕ್ಸರ್‌ಗಳೊಂದಿಗೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ 13 ಪಂದ್ಯಗಳಿಂದ 490 ರನ್‌ಗಳನ್ನು ಸಿಡಿಸಿದ್ದರು. ತಮ್ಮ ಬಾಹುಬಲದಿಂದಲೇ ಚೆಂಡನ್ನು ಬೌಂಡರಿಗೆರೆ ದಾಟಿಸಬಲ್ಲ ಖ್ಯಾತಿ ಗೇಲ್‌ ಅವರದ್ದು.

ಎಂ.ಎಸ್‌ ಧೋನಿ

ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಫಿನಿಷರ್‌ ಎಂದೇ ಖ್ಯಾತಿ ಪಡೆದಿರುವ ಭಾರತ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಈ ಬಾರಿಯ ವಿಶ್ವಕಪ್‌ನಲ್ಲಿ ಕೇಂದ್ರ ಬಿಂದುವಾಗಿದ್ದಾರೆ. ತಮ್ಮ ಬಾಹುಬಲದೊಂದಿಗೆ ಚೆಂಡನ್ನು ಮೈದಾನದಿಂದ ಆಚೆಗಷ್ಟಬಲ್ಲ ಧೋನಿ, ಪಂದ್ಯದ ಗತಿಗೆ ತಕ್ಕಂತೆ ಆಟವಾಡಬಲ್ಲ ಅತ್ಯಂತ ಚತುರ ಆಟಗಾರ. ಇನ್ನು ಡೆತ್‌ ಓವರ್‌ಗಳಲ್ಲೂ ಧೋನಿ ಎತ್ತಿದ ಕೈ. ವಯಸ್ಸು 37 ಆದರೂ ಬ್ಯಾಟಿಂಗ್‌ ಅಬ್ಬರದಲ್ಲಿ ಕಿಂಚಿತ್ತೂ ತಡವರಿಸದ ಧೋನಿ, ಇತ್ತೀಚೆಗೆ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ

ಬ್ಯಾಟಿಂಗ್‌ ನಡೆಸಿದ್ದಾರೆ. 2019ರ ಐಪಿಎಲ್‌ನಲ್ಲೂ ತಮ್ಮ ಧಮಾಕಾ ಪ್ರದರ್ಶಿಸಿರುವ ಧೋನಿ, 15 ಪಂದ್ಯಗಳಿಂದ 416 ರನ್‌ಗಳನ್ನು ಬಾರಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ವಿಶ್ವಕಪ್‌ನಲ್ಲಿ ಧೋನಿ ಹೆಲಿಕಾಪ್ಟರ್‌ ಹೊಡೆತಗಳು ಶುರುವಾದರೆ ಎದುರಾಳಿ ತಂಡ ಹಾರಿಹೋಗುವುದಂತೂ ನಿಶ್ಚಿತ.

ಡೇವಿಡ್‌ ಮಿಲ್ಲರ್‌

29 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್‌ ದಕ್ಷಿಣ ಆಫ್ರಿಕಾ ತಂಡ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬೆನ್ನೆಲುಬು. ಯಾವುದೇ ಬೌಲಿಂಗ್‌ ದಾಳಿ ಎದುರು ಸ್ಫೋಟಕ ಬ್ಯಾಟಿಂಗ್‌ ನಡೆಸುವ ಸಾಮರ್ಥ್ಯದಿಂದಲೇ ಕ್ರಿಕೆಟ್‌ ಜಗತ್ತಿನಲ್ಲಿ ಕಿಲ್ಲರ್‌ ಮಿಲ್ಲರ್‌ ಎಂದು ಖ್ಯಾತಿ ಪಡೆದುಕೊಂಡಿದ್ದಾರೆ. ವೇಗದ ಬೌಲಿಂಗ್‌ ಎದುರು ಭರ್ಜರಿ ಆಟವಾಡುವ ಮಿಲ್ಲರ್‌ ಸ್ಪಿನ್ನರ್‌ಗಳ ಎದುರು ಅಷ್ಟೇ ದೊಡ್ಡ ಹೊಡೆತಗಳನ್ನು ತರಬಲ್ಲ ಹರಿಣ ಪಡೆಯ ಕೆಲವೇ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಮಿಲ್ಲರ್‌ ತಮ್ಮ

ಶ್ರೇಷ್ಠ ಲಯದಲ್ಲಿ ಕಾಣಿಸಿಕೊಳ್ಳದೇ ಇದ್ದರೂ, ವಿಶ್ವಕಪ್‌ನಲ್ಲಿ ಯಾವುದೇ ತಂಡದ ಎದುರು ಅಬ್ಬರಿಸುವ ಬ್ಯಾಟ್ಸ್‌ಮನ್‌ ಎಂದರೆ ತಪ್ಪಾಗಲಾರದು.

ಕಾಲಿನ್‌ ಮನ್ರೊ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೂರು ಶತಕಗಳನ್ನು ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಪಡೆದಿರುವ ಕಿವೀಸ್‌ ಬ್ಯಾಟ್ಸ್‌ಮನ್‌ ಕಾಲಿನ್‌ ಮನ್ರೊ, ಪಿಚ್ ಯಾವುದೇ ಇರಲಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲವರು. ತಮ್ಮ ಲಯ ಕಂಡುಕೊಂಡರೆ ಯಾವುದೇ ಬೌಲರ್‌ ಎದುರು ಫೋರ್‌-ಸಿಕ್ಸರ್‌ಗಳ ಸುರಿಮಳೆ ಗೈಯುವ ಸಾಮರ್ಥ್ಯ ಹೊಂದಿದ್ದಾರೆ. ನ್ಯೂಜಿಲೆಂಡ್‌ ಪರ 50 ಏಕದಿನ ಪಂದ್ಯಗಳನ್ನು ಆಡಿರುವ ಮನ್ರೊ, 105.5ರ ಸ್ಟ್ರೈಕ್‌ ರೇಟ್‌ ಕಾಯ್ದುಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ತಂಡ ಚೊಚ್ಚಲ ವಿಶ್ವಕಪ್‌ ಎತ್ತಿ ಹಿಡಿಯಬೇಕಾದರೆ, ಅಗ್ರ ಕ್ರಮಾಂಕದಲ್ಲಿ ಮನ್ರೊ ಮಿಂಚಬೇಕಿದೆ.

ಫಖರ್‌ ಝಮಾನ್‌

ಪಾಕಿಸ್ತಾನದ ಸೇನೆಯಲ್ಲೂ ಸೇವೆ ಸಲ್ಲಿಸಿರುವ ಸೈನಿಕ ಮತ್ತು ಕ್ರಿಕೆಟಿಗ ಫಖರ್‌ ಝಮಾನ್‌ ಪಾಕ್‌ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಶಕ್ತಿಯಲ್ಲಿ ಒಬ್ಬರು. ಆರಂಭಿಕ ಎಡಗೈ ಬ್ಯಾಟ್ಸ್‌ಮನ್‌ ಬಾಕಿಸ್ತಾನ ಪರ ಒಡಿಐನಲ್ಲಿ ದ್ವಿಶತಕ ಸಿಡಿಸಿದ ಮೊತ್ತ ಮೊದಲ ಆಟಗಾರ ಕೂಡ. 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ವಿರುದ್ಧ ಶತಕ ದಾಖಲಿಸಿ ತಂಡದ ಗೆಲುವಿನ ರೂವಾರಿಯಾಗಿದ್ದರು. 29 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ಇಂಗ್ಲೆಂಡ್‌ ಪಿಚ್‌ಗಳಲ್ಲಿ ಉತ್ತಮ ದಾಖಲೆ ಹೊಂದಿದ್ದು, ಈ ಬಾರಿಯ ವಿಶ್ವಕಪ್‌ನಲ್ಲೂ ಪಾಕಿಸ್ತಾನ ಪರ ಆರ್ಭಟಿಸಲು ಎದುರು ನೋಡುತ್ತಿದ್ದಾರೆ. ಪಾಕ್‌ ಪರ 34 ಒಡಿಐಗಳಲ್ಲಿ ಆಡಿರುವ ಫಖರ್‌, 1585 ರನ್‌ಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲೂ 84 ಎಸೆತಗಳಲ್ಲಿ ಶತಕ ಬಾರಿಸಿ ಎದುರಾಳಿ ತಂಡಗಳಿಗೆ ದಿಟ್ಟ ಸಂದೇಶವನ್ನೂ ರವಾನಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, May 17, 2019, 14:44 [IST]
Other articles published on May 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more