ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹರಿಸಿದ ರನ್‌ ಹೊಳೆಯ ದಾಖಲೆಗಳಿವು

ಲಂಡನ್‌, ಮೇ 24: ಐಸಿಸಿ ಏಕದಿ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಇದೆ. ಈ ಬಾರಿಯ ವಿಶ್ವಕಪ್‌ನಲ್ಲಂತೂ ರನ್‌ ಹೊಳೆ ಹರಿಯುವುದು ಖಚಿತ ಎಂದು ಈಗಾಗಲೇ ಕ್ರಿಕೆಟ್‌ ಪಂಡಿತರೆಲ್ಲಾ ಭವಿಷ್ಯ ನುಡಿದಾಗಿದೆ.

ಬುಮ್ರಾ ಬೌಲಿಂಗ್‌ನಲ್ಲಿ ರನ್‌ ಗಳಿಸುವ ತಂತ್ರ ಬಿಚ್ಚಿಟ್ಟ ಬ್ರಿಯಾನ್‌ ಲಾರಾ

ಅಂದಹಾಗೆ ಕ್ರಿಕೆಟ್‌ ವಿಶ್ವಕಪ್‌ನ ಸೊಬಗೇ ಅದು. ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆಲ್ಲಾ ಒಂದೆಡೆ ಸೇರಿ ತಮ್ಮ ಬಾಹುಬಲ ಪ್ರದರ್ಶಿಸಲು ಇರುವ ಏಕಮಾತ್ರ ವೇದಿಕೆ ಇದು. ಈ ಬಾರಿಯಂತೂ ವಿರಾಟ್‌ ಕೊಹ್ಲಿ, ಜೋಸ್‌ ಬಟ್ಲರ್‌, ಡೇವಿಡ್‌ ವಾರ್ನರ್‌, ಜಾನಿ ಬೈರ್‌ಸ್ಟೋವ್‌, ಸ್ಟೀವ್‌ ಸ್ಮಿತ್‌, ಆಂಡ್ರೆ ರಸೆಲ್‌ ಹಾಗೂ ಕೇನ್‌ ವಿಲಿಯಮ್ಸನ್‌ ಅವರಂತಹ ಘಟಾನುಘಟಿಗಳಿದ್ದು, ಕ್ರಿಕೆಟ್‌ ಪ್ರಿಯರಿಗೆ ನಾನ್‌ ಸ್ಟಾಪ್‌ ಮನರಂಜನೆಯಂತೂ ನಿಶ್ಚಿತ.

ವಿಶ್ವಕಪ್‌: ಆಸ್ಟ್ರೇಲಿಯಾ ತಂಡದ ದೌರ್ಬಲ್ಯ ಬಿಚ್ಚಿಟ್ಟ ರಿಕಿ ಪಾಂಟಿಂಗ್‌!

ಅಂದಹಾಗೆ ಈ ಹಿಂದಿನ 11 ಆವೃತ್ತಿಗಳ ವಿಶ್ವಕಪ್‌ ಟೂರ್ನುಗಳಲ್ಲೂ ಬ್ಯಾಟ್ಸ್‌ಮನ್‌ಗಳ ರನ್‌ ಸುರಿಮಳೆ ಗೈದು ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಅವರಲ್ಲಿ ಐವರು ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳ ದಾಖಲೆ ಇಲ್ಲಿದೆ.

ಸಚಿನ್‌ ತೆಂಡೂಲ್ಕರ್‌

ಸಚಿನ್‌ ತೆಂಡೂಲ್ಕರ್‌

ರನ್‌: 2278

ಪಂದ್ಯ: 45

ಇನಿಂಗ್ಸ್‌: 44

ಸರಾಸರಿ: 56.95

ಅತಿ ಹೆಚ್ಚು ಶತಕ-ಅರ್ಧಶತಕ, ಅತಿ ಹೆಚ್ಚು ರನ್‌ ಹಾಗೂ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್‌ ಎಲ್ಲಾ ದಾಖಲೆಗಳು ಭಾರತದ ಬ್ಯಾಟಿಂಗ್‌ ದಂತಕತೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿದೆ. ಸಚಿನ್‌, ದಾಖಲೆ ಎಂಬಂತೆ 1992-2011ರವರೆಗೆ ಆರುವ ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿದ್ದು, ರನ್‌ ಹೊಳೆಯನ್ನೇ ಹರಿಸಿದ್ದಾರೆ.

1992ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಸಚಿನ್‌ಗೆ ಟ್ರೋಫಿ ಗೆಲುವಿನ ಕನಸು ಈಡೇರಿದ್ದು, 2011ರಲ್ಲಿ. 2003ರಲ್ಲಿ ಸಚಿನ್‌ ತಮ್ಮ ಭರ್ಜರಿ ಬ್ಯಾಟಿಂಗ್‌ ಮೂಲಕ ತಂಡವನ್ನು ಫೈನಲ್‌ ವರೆಗೆ ಕೊಂಡೊಯ್ದರಾದರೂ, ಪ್ರಶಸ್ತಿ ಗೆಲುವು ಸಾಧ್ಯವಾಗಲಿಲ್ಲ. ಇನ್ನು ವಿಶ್ವಕಪ್‌ನಲ್ಲಿ ಆಡಿದ 45 ಪಂದ್ಯಗಳಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಒಟ್ಟು 2,278 ರನ್‌ಗಳನ್ನು ಚಚ್ಚಿದ್ದಾರೆ. 1996ರಲ್ಲಿ ಕೀನಾ ವಿರುದ್ಧ ಮೊದಲ ವಿಶ್ವಕಪ್‌ ಶತಕ ಸಿಡಿಸಿದ ಸಚಿನ್‌ ಒಟ್ಟು 6 ಶತಕಗಳನ್ನು ಬಾರಿಸಿದ್ದಾರೆ.

ರಿಕಿ ಪಾಂಟಿಂಗ್‌

ರಿಕಿ ಪಾಂಟಿಂಗ್‌

ರನ್‌: 1743

ಪಂದ್ಯ: 46

ಇನಿಂಗ್ಸ್‌: 42

ಸರಾಸರಿ: 45.86

ಅತಿ ಹೆಚ್ಚುಬಾರಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ನಾಯಕರ ಸಾಲಿನಲ್ಲಿ ವೆಸ್ಟ್‌ ಇಂಡೀಸ್‌ ತಂಡದ ದಂತಕತೆ ಕ್ಲೈವ್‌ ಲಾಯ್ಡ್‌ ಅವರ ಸಾಲಿನಲ್ಲಿ ಗುರುತಿಸಿಕೊಳ್ಳುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಕೂಡ ವಿಶ್ವಕಪ್‌ನಲ್ಲಿ ರನ್‌ಗಳನ್ನು ಚಚ್ಚಿ ಬಿಸಾಡಿದ್ದಾರೆ. ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳನ್ನು ದಾಖಲಿಸಿದವರ ಪೈಕಿ ಪಾಂಟಿಂಗ್‌ 2ನೇ ಸ್ಥಾನದಲ್ಲಿದ್ದಾರೆ. 46 ಪಂದ್ಯಗಳಲ್ಲಿ 45.86ರ ಸರಾಸರಿಯಲ್ಲಿ 1743 ರನ್‌ಗಳನ್ನು ಗಳಿಸಿರುವ ಪಾಂಟಿಂಗ್‌ ಒಟ್ಟು 5 ಶತಕಗಳನ್ನೂ ಸಿಡಿಸಿದ್ದಾರೆ. 1996ರಿಂದ 2011ರವರೆಗೆ ಒಟ್ಟು 5 ವಿಶ್ವಕಪ್‌ ಟೂರ್ನಿಗಳನ್ನು ಆಡಿರುವ ಪಂಟರ್‌, 2003 ಮತ್ತು 2007ರಲ್ಲಿ ತಮ್ಮ ನಾಯಕತ್ವದಲ್ಲಿ ಆಸ್ಟ್ರೇಲಿಯಾಗೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು.

ಕುಮಾರ ಸಂಗಕ್ಕಾರ

ಕುಮಾರ ಸಂಗಕ್ಕಾರ

ರನ್‌: 1532

ಪಂದ್ಯ: 37

ಇನಿಂಗ್ಸ್‌: 35

ಸರಾಸರಿ: 56.74

ದ್ವೀಪ ರಾಷ್ಟ್ರ ಕಂಡ ಅತ್ಯದ್ಭುತ ಬ್ಯಾಟ್ಸ್‌ಮನ್‌ಗಳಲ್ಲಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕುಮಾರ ಸಂಗಕ್ಕಾರ ಒಬ್ಬರು. ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಅಗ್ರ 5 ಬ್ಯಾಟ್ಸ್‌ಮನ್‌ಗಳ ಪೈಕಿ ರಿಕಿ ಪಾಂಟಿಂಗ್‌ ಅವರಿಗಿಂತಲೂ ಕುಮಾರ ಸಂಗಕ್ಕಾರ ಅವರ ಬ್ಯಾಟಿಂಗ್‌ ಸರಾಸರಿ ಉತ್ತಮವಾಗಿದೆ. ಲಂಕಾ ಪರ ನಾಲ್ಕು ವಿಶ್ವಕಪ್‌ಗಳನ್ನು ಆಡಿರುವ ಸಂಗಕ್ಕಾರ, 37 ಪಂದ್ಯಗಳಲ್ಲಿ 56.74ರ ಸರಾಸರಿಯಲ್ಲಿ1532 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 5 ಸೊಗಸಾದ ಶತಕಗಳೂ ಸೇರಿವೆ. 2015ರ ವಿಶ್ವಕಪ್‌ ಒಂದರಲ್ಲೇ ನಾಲ್ಕು ಶತಕಗಳನ್ನು ಸಿಡಿಸಿ 541 ರನ್‌ಗಳೊಂದಿಗೆ ಮಿಂಚಿದ್ದರು. ಸಂಗಕ್ಕಾರ 7 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ.

ಬ್ರಿಯಾನ್‌ ಲಾರಾ

ಬ್ರಿಯಾನ್‌ ಲಾರಾ

ರನ್‌: 1222

ಪಂದ್ಯ: 34

ಇನಿಂಗ್ಸ್‌: 33

ಸರಾಸರಿ: 42.24

ಕ್ರಿಕೆಟ್‌ ಜಗತ್ತು ಕಂಡ ಅದ್ಭುತ ಬ್ಯಾಟ್ಸ್‌ಮನ್‌ಗಳಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಬ್ರಿಯಾನ್‌ ಚಾರ್ಲ್‌ ಲಾರಾ ಕೂಡ ಒಬ್ಬರು. ಲಾರಾ, 1992-2007ರವರೆಗೆ ಒಟ್ಟು ಐದು ಬಾರಿ ವಿಶ್ವಕಪ್‌ನಲ್ಲಿ ಆಡಿದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಮಾತ್ರ ವಿಶಾದದ ಸಂಗತಿ. ಆದರೂ ವಿಶ್ವಕಪ್‌ ಅಂಗಣದಲ್ಲಿ ಮಿಂಚು ಮೂಡಿಸಿದ್ದ ಎಡಗೈ ಬ್ಯಾಟ್ಸ್‌ಮನ್‌ ಲಾರಾ, 34 ಪಂದ್ಯಗಳಿಂದ 1225 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಲಾರಾ ಗಳಿಸಿರುವುದು 2 ಶತಕಗಳನ್ನು ಮಾತ್ರ. ಆದರೆ 7 ಅರ್ಧಶತಕಗಳೊಂದಿಗೆ ಕಂಗೊಳಿಸಿದ್ದಾರೆ. 1992ರಲ್ಲಿ ಆಡಿದ ಚೊಚ್ಚಲ ವಿಶ್ವಕಪ್‌ನಲ್ಲಿ 8 ಪಂದ್ಯಗಳಿಂದ 333 ರನ್‌ಗಳನ್ನು ಗಳಿಸಿದ್ದರು.

ಎಬಿ ಡಿ'ವಿಲಿಯರ್ಸ್‌

ಎಬಿ ಡಿ'ವಿಲಿಯರ್ಸ್‌

ರನ್‌: 1207

ಪಂದ್ಯ: 23

ಇನಿಂಗ್ಸ್‌: 22

ಸರಾಸರಿ: 63.5

ಕಳೆದ ಬಾರಿ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ಸ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಸೋತು ನಿರಾಸೆ ಅನುಭವಿಸಿತ್ತು. ಬಳಿಕ 2018ರ ಮೇನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ'ವಿಲಿಯರ್ಸ್‌ ನಿವೃತ್ತಿಯನ್ನೂ ಘೋಷಿಸಿದರು. ಆದರೂ, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪೈಕಿ ಎಬಿಡಿ 5ನೇ ಸ್ಥಾನದಲ್ಲಿ ಇದ್ದಾರೆ. 2007ರಲ್ಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಎಬಿಡಿ ಆಡಿದ 23 ಪಂದ್ಯಗಳಲ್ಲಿ63.52ರ ಸರಾಸರಿಯಲ್ಲಿ 1207 ರನ್‌ಗಳನ್ನು ಚಚ್ಚಿದ್ದಾರೆ. ಈ ಮೂಲಕ ಸನತ್‌ ಜಯಸೂರ್ಯ (1165) ಅವರ ದಾಖಲೆಯನ್ನು ಮುರಿದಿದ್ದಾರೆ. ವಿಶ್ವಕಪ್‌ನಲ್ಲಿ 4 ಶತಕಗಳನ್ನು ದಾಖಲಿಸಿರುವ ಎಬಿಡಿ, 6 ಅರ್ಧಶತಕಗಳನ್ನೂ ಗಳಿಸಿದ್ದಾರೆ. ಅದರಲ್ಲೂ ವೆಸ್ಟ್‌ ಇಂಡೀಸ್‌ ವಿರುದ್ಧ 66 ಎಸೆತಗಳಲ್ಲಿ 162 ರನ್‌ಗಳನ್ನು ಸಿಡಿಸಿರುವುದು ವಿಶ್ವಕಪ್‌ ಇತಿಹಾಸದಲ್ಲಿನ ಅದ್ಭುತ ಇನಿಂಗ್ಸ್‌ಗಳಲ್ಲಿ ಒಂದು.

For Quick Alerts
ALLOW NOTIFICATIONS
For Daily Alerts
Story first published: Friday, May 24, 2019, 22:41 [IST]
Other articles published on May 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X