ಹೊಸ ಕ್ರಿಕೆಟ್ ತಾರೆ ಶುಬ್‌ಮನ್‌ ಗಿಲ್ ಬಗ್ಗೆ ಒಂದಷ್ಟು ಸಂಗತಿ

Posted By:

ಬೆಂಗಳೂರು, ಫೆಬ್ರವರಿ 12: ನಿನ್ನೆ ನಡೆದ ಪಂಜಾಬ್-ಕರ್ನಾಟಕ ನಡುವಿನ ವಿಜಯ್ ಹಜಾರೆ ಟೂರ್ನಿಯ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಕರ್ನಾಟಕ ಸೋತರೂ ಕೂಡ ಆಲೂರು ಮೈದಾನದಲ್ಲಿ ನೆರೆದಿದ್ದ ಕ್ರೀಡಾಪ್ರೇಮಿಗಳಿಗೆ ಹೆಚ್ಚು ಬೇಸರವೇನೂ ಆಗಲಿಲ್ಲ. ಕಾರಣ ಪಂದ್ಯದಲ್ಲಿದ್ದ ರೋಚಕತೆ ಮತ್ತು ಯುವ ಆಟಗಾರನೊಬ್ಬನ ಸೊಗಸಾದ ಇನ್ನಿಂಗ್ಸ್‌.

ಹೌದು, ನಿನ್ನೆ ನಡೆದ ಪಂದ್ಯದಲ್ಲಿ ಎರಡೂ ತಂಡದ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದರು. ಆದರೆ ಹೆಚ್ಚು ಗಮನ ಸೆಳೆದದ್ದು ಪಂಜಾಬ್‌ನ 18ರ ಹರೆಯದ ಶುಬ್‌ಮನ್‌ ಗಿಲ್ ಗಳಿಸಿದ ಅತ್ಯುತ್ತಮ ಶತಕ. ಅವರ ಶತಕದ ಮುಂದೆ ಕೆ.ಎಲ್.ರಾಹುಲ್ ಶತಕ ಮಂಕಾಗಿಬಿಟ್ಟಿತು. ಹಾಗಿತ್ತು ಅವರ ಇನ್ನಿಂಗ್ಸ್‌.

ಇತ್ತೀಚೆಗಷ್ಟೆ ನ್ಯೂಜಿಲೆಂಡ್‌ನಲ್ಲಿ ನಡೆದ ಅಂಡರ್‌19 ವಿಶ್ವಕಪ್‌ ತಂಡದಲ್ಲಿ ಆಡಿ ಗೆದ್ದು, ತನ್ನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದ ಶುಬ್‌ಮನ್‌ ಗಿಲ್ ಅವರು ನಿನ್ನೆ ಹಿರಿಯರ ಬೌಲಿಂಗ್‌ಗೆ ಎದೆಗುಂದದೆ ಬ್ಯಾಟ್ ಬೀಸಿದರು. 122 ಚೆಂಡು ಎದುರಿಸಿ 123 ರನ್ ಭಾರಿಸಿದರು. ಕರ್ನಾಟಕದ ಬೌಲರ್‌ಗಳ ಬೆವರಿಳಿಸಿದ 18ರ ಈ ಪೋರ 8 ಬೌಂಡರಿ, 6 ಸಿಕ್ಸರ್‌ ಭಾರಿಸಿದರು.

ಆರಂಭಿಕ ಬ್ಯಾಟ್ಸಮನ್‌ ಆಗಿ ಅಂಗಳಕ್ಕಿಳಿದ ಅವರು, ಮೊದಲ ಓವರ್‌ ಮುಗಿಯುವ ಮುಂಚೆಯೇ ತಮ್ಮ ಜೊತೆಗಾರ ಆಟಗಾರನನ್ನು ಕಳೆದುಕೊಂಡರು. ಪಂಜಾಬ್‌ 0 ರನ್‌ಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು, ಆಗ ಇನ್ನಿಂಗ್ಸ್‌ ಸಂಭಾಳಿಸಿದ ಅವರು ಮೊದಲಿಗೆ ನಿಧಾನಗತಿಯ ಆಟವಾಡಿದರು. ಆದರೆ ನಂತರ ಭಿರುಸಿನ ಹೊಡೆತಗಳನ್ನು ಭಾರಿಸಿ ಬೌಲಿಂಗ್ ಮಾಡಿದ ಎಲ್ಲರಿಗೂ ಸಿಕ್ಸರ್ ರುಚಿ ತೋರಿಸಿದರು. ಪಂಜಾಬ್‌ ಇನ್ನಿಂಗ್ಸ್‌ ಮುಗಿಯುವವರೆಗೆ ಸ್ಕ್ರೀಸ್‌ನಲ್ಲಿದ್ದ ಅವರನ್ನು ಕರ್ನಾಟಕದ ಬೌಲರ್‌ಗಳು ಔಟ್ ಮಾಡಲು ಆಗಲೇ ಇಲ್ಲ.

ಎಳವೆಯಲ್ಲೇ ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನು ಎದುರಿಸಿ ಮೆರೆದ ಶುಬ್‌ಮನ್‌ ಗಿಲ್‌ ಬಗ್ಗೆ ಎಲ್ಲೆಡೆ ಮೆಚ್ಚುಗೆ ಮಹಾಪೂರ ಹರಿದು ಬರುತ್ತಿವೆ. ಅವರ ಕುರಿತು ಕೆಲವು ಸಂಗತಿಗಳು ಇಲ್ಲಿವೆ ಕಣ್ಣಾಡಿಸಿ...

ಪಂಜಾಬ್‌ನ ಹೊಸ 'ಯುವರಾಜ್'

ಪಂಜಾಬ್‌ನ ಹೊಸ 'ಯುವರಾಜ್'

ಶುಬ್‌ಮನ್‌ ಗಿಲ್ ಅವರು ಯುವರಾಜ್ ಸಿಂಗ್ ಅವರ ಪಕ್ಕಾ ಅಭಿಮಾನಿ. ಬೆಂಗಳೂರಿನ ನ್ಯಾಷನಲ್‌ ಅಕಾಡೆಮಿ ಆಫ್ ಕ್ರಿಕೆಟ್‌ನಲ್ಲಿ ಅವರು ಯುವರಾಜ್‌ ಅವರಿಂದ ಸಾಕಷ್ಟು ಕ್ರಿಕೆಟ್ ಪಾಠ ಕಲಿತಿದಿದ್ದಾರೆ ಕೂಡ. ಅಂಡರ್‌19 ವಿಶ್ವಕಪ್‌ ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ ನಂತರ ಯುವರಾಜ್ ಸಿಂಗ್ ಅವರನ್ನು ನೆನೆಸಿಕೊಂಡ ಶುಬ್‌ಮನ್‌ ಅವರು 'ಯುವರಾಜ್ ಅವರು ಹೇಳಿಕೊಟ್ಟ ಪಾಠಗಳು ನನಗೆ ನೆರವಾದವು' ಎಂದರು.

1.80 ಕೋಟಿಗೆ ಸೇಲ್

1.80 ಕೋಟಿಗೆ ಸೇಲ್

ಅಂಡರ್‌19 ವರ್ಲ್ಡ್‌ಕಪ್‌ ಟೂರ್ನಿಯಲ್ಲಿ ಆಡುತ್ತಿರಬೇಕಾದರೆಯೇ ಇಲ್ಲಿ ಐಪಿಎಲ್ 2018ಕ್ಕೆ ಹರಾಜು ಪ್ರಕ್ರಿಯೆ ನಡೆಯುತಿತ್ತು. ಕೊಲ್ಕತ್ತಾ ನೈಟ್‌ರೈಡರ್ಸ್ ತಂಡ ಈ ಯುವ ಆಟಗಾರನನ್ನು 1.80 ಕೋಟಿ ನೀಡಿ ಖರೀದಿಸಿತು. ಆಗಿನ್ನೂ ಮೂರು ಅರ್ಧಶತಕ ಮಾತ್ರ ಗಳಿಸಿದ್ದ ಶುಬ್‌ಮನ್‌, ಕೊಲ್ಕತ್ತಾ ತಂಡ ಖರೀದಿಸಿದ ನಂತರ ಸೆಂಚುರಿ ಭಾರಿಸಿ ಆಯ್ಕೆದಾರರ ಆಯ್ಕೆ ಸರಿ ಎಂಬುದನ್ನು ಸಾಬೀತು ಮಾಡಿದರು.

ಬಿಸಿಸಿಐ ಪ್ರಶಸ್ತಿ ಕೂಡ ಗಳಿಸಿದ್ದಾರೆ

ಬಿಸಿಸಿಐ ಪ್ರಶಸ್ತಿ ಕೂಡ ಗಳಿಸಿದ್ದಾರೆ

ಶುಬ್‌ಮನ್‌ ಗಿಲ್ ಇನ್ನೂ 16 ವರ್ಷದವರಾಗಿದ್ದಾಗಲೇ ವಿಜಯ್ ಮರ್ಚೆಂಟ್‌ ಟೂರ್ನಿಯಲ್ಲಿ ದ್ವಿಶತಕ ಭಾರಿಸಿದ್ದರು. ಅದೂ ಪಂಜಾಬ್‌ ಪರ ಅವರ ಮೊದಲ ಪಂದ್ಯವಾಗಿತ್ತು. ಅತ್ಯುತ್ತಮ ಆಟದಿಂದ ಆಗಲೇ ಬಿಸಿಸಿಐ ಗಮನ ಸೆಳೆದಿದ್ದ ಅವರು ಬಿಸಿಸಿಐ ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದರು.

ಯುವರಾಜ್ ಸಿಂಗ್ ಅವರ ಪಡಿಯಚ್ಚು

ಯುವರಾಜ್ ಸಿಂಗ್ ಅವರ ಪಡಿಯಚ್ಚು

2000 ರಲ್ಲಿ ಭಾರತ ಮೊದಲ ಭಾರಿಗೆ ಅಂಡರ್‌19 ವಿಶ್ವಕಪ್ ಗೆದ್ದಾಗ ಯುವರಾಜ್‌ ಸಿಂಗ್‌ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು. ಆ ನಂತರ ಅವರು ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಿ ಹೊರಹೊಮ್ಮಿದ್ದು ಆ ನಂತರ ವಿಶ್ವಕಪ್‌ನಲ್ಲೂ ಸರಣಿ ಶ್ರೇಷ್ಠರಾಗಿದ್ದು ಈಗ ಇತಿಹಾಸ. ಯುವರಾಜ್ ಅವರು ಅಭಿಮಾನಿ ಆಗಿರುವ ಶುಬ್‌ಮನ್‌ ಕೂಡಾ ಅಂಡರ್‌19ರಲ್ಲಿ ಸರಣಿ ಶ್ರೇಷ್ಠ ಆಗಿದ್ದಾರೆ. ಅವರ ಆಟವೂ ಕೂಡ ಯುವರಾಜ್ ಅವರ ಶೈಲಿಯನ್ನೇ ಹೋಲುತ್ತದೆ ಎನ್ನುತ್ತಾರೆ ಹಿರಿಯ ಕ್ರಿಕೆಟಿಗರು. ಪಂಜಾಬ್‌ ರಾಜ್ಯದಿಂದ ಮತ್ತೊಬ್ಬ ಯುವರಾಜ್ ಸಿಂಗ್ ಉದಯವಾಗಿದೆ ಎನ್ನುತ್ತಿದ್ದಾರೆ ಪಂಜಾಬ್‌ ಕ್ರಿಕೆಟ್‌ ಪ್ರಿಯರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, February 12, 2018, 16:50 [IST]
Other articles published on Feb 12, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ