
ಭುವನೇಶ್ವರ್, ಜುಲೈ 5: ಕೇವಲ 8 ವರ್ಷಗಳ ಹಿಂದಷ್ಟೇ ಭಾರತ ಫುಟ್ಬಾಲ್ ತಂಡದಲ್ಲಿದ್ದು, ಎದುರಾಳಿ ತಂಡದ ಗೋಲ್ ಪ್ರಯತ್ನಗಳಿಗೆ ತಡೆಯೊಡ್ಡುತ್ತಿದ್ದ ಆಟಗಾರ್ತಿ ಈಗ ಜೀವನೋಪಾಯಕ್ಕಾಗಿ ಊರಿನಲ್ಲಿ ಅವರಿವರ ಮನೆಯ ಆಡು ಮೇಯಿಸುವ ಕಾಯಕ ನಡೆಸುತ್ತಿದ್ದಾರೆ. ಇದು ಒಡಿಶಾದ ತನುಜಾ ಭಾಗೆ ಅವರ ಕತೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಒಡಿಶಾ ರಾಜ್ಯದ ಝಾರ್ಸುಗುಡ ಜಿಲ್ಲೆಯ ದೇಬಾದಿಹಿ ಗ್ರಾಮದಲ್ಲಿ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ತನುಜಾ ಭಾಗೆ ಅವರು 2011ರ ವರೆಗೂ ಫುಟ್ಬಾಲ್ ಆಟಗಾರ್ತಿಯಾಗಿ ಗಮನ ಸೆಳೆದಿದ್ದವರು. ಆದರೆ ಮನೆಯ ಬಡತನ ಅವರನ್ನು ಕ್ರೀಡೆಯಲ್ಲಿ ಮುಂದುವರೆಯಲು ಬಿಡಲಿಲ್ಲ. ಈಗ ತನುಜಾ ಅವರು ಹೊಟ್ಟೆಪಾಡಿಗಾಗಿ ಊರಿನ ಅವರಿವರ ಆಡು ಕಾಯುವ ಕೆಲಸ ಮಾಡುತ್ತಿದ್ದಾರೆ.
2003ರಲ್ಲಿ ವೇದಾಂತ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ತರಬೇತಿಯಲ್ಲಿ ಪಾಲ್ಗೊಂಡಿದ್ದಾಗ ತನಿಜಾ ತನ್ನ ಕ್ರೀಡಾ ಪ್ರತಿಭೆ ತೋರಿಕೊಂಡಿದ್ದರು. ಆಗ ಭಾಗೆಗಿನ್ನೂ 14ರ ಹರೆಯ. ಫುಟ್ಬಾಲ್ ಆಡೋದನ್ನು ಚುರುಕಾಗಿ ಕಲಿತರು. ಅನಂತರ ಭಾಗೆ, ಒಡಿಶಾ ರಾಜ್ಯ ತಂಡ ಸೇರಿಕೊಂಡವನ್ನು ಸೇರಿಕೊಂಡರು. ಒಂದೊಮ್ಮೆ ಭಾರತ ತಂಡದಲ್ಲೂ ಆಡಿದ್ದರು.
ಫುಟ್ಬಾಲ್ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಭಾಗೇಗೆ ಸಾಲು ಸಾಲು ಟ್ರೋಫಿಗಳು, ಪದಕಗಳು, ಪ್ರಶಸ್ತಿ ಪತ್ರಗಳು ಲಭಿಸಿದವು. ಕೆಲ ವರ್ಷಗಳಿಗೆ ಹಿಂದೆ ಝಾರ್ಸುಗುಡ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೋಮ್ ಗಾರ್ಡ್ ಕೆಲಸವೂ ಲಭಿಸಿತ್ತು. ಆದರೆ ಅಲ್ಲಿ ಸಿಗುತ್ತಿದ್ದ ತೀರಾ ಕಡಿಮೆ ಸಂಬಳದಿಂದ ಕುಟುಂಬ ನಡೆಸೋದೇ ಕಷ್ಟವಾಗಿದ್ದರಿಂದ ತನುಜಾ ಆ ಕೆಲಸ ತೊರೆಯಬೇಕಾಯಿತು.
'ಒಡಿಶಾ ಪ್ರತಿನಿಧಿಸಿ ಬಿಹಾರ, ಘತ್ತೀಸ್‌ಗಢ, ಝಾರ್ಖಂಡ್ ಮತ್ತು ಬೆಂಗಾಲ್ ರಾಜ್ಯಗಳಲ್ಲಿ ನಾನು ಆಡಿದ್ದೇನೆ. ಇದರಲ್ಲಿ ಮಣಿಪುರ ವಿರುದ್ಧ ನಾವು ಫೈನಲ್‌ನಲ್ಲಿ ಸೋತೆವು. ಪ್ರದರ್ಶನ ಪಂದ್ಯವೊಂದರಲ್ಲಿ ಭಾರತ ತಂಡದಲ್ಲಿ ನಾನು ಗೋಲ್ ಕೀಪರ್ ಆಗಿ ಆಡಿದ್ದೆ. ಆವತ್ತು ನೇಪಾಳ ವಿರುದ್ಧ ನಾವು ಗೆದ್ದಿದ್ದೆವು' ಎಂದು ತನುಜಾ ತನ್ನ ಬದುಕಿನ ಕ್ರೀಡಾ ದಿನಗಳನ್ನು ಸ್ಮರಿಸಿಕೊಂಡರು.
ಮಾತು ಮುಂದುವರೆಸಿದ ಭಾಗೆ, 'ಆ ಕ್ರೀಡಾ ಕ್ಷಣಗಳು ಈಗ ಮುಗಿದಿದೆ. ಮತ್ತೆ ಇದನ್ನೆಲ್ಲಾ ನೆನಪಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ' ಎಂದು ವಿಷಾದದಿಂದ ನುಡಿದರು. ಜೀವನ ನಡೆಸಲು ಸರ್ಕಾರದಿಂದ ಏನಾದರೂ ಪ್ರೋತ್ಸಾಹ ಲಭಿಸಬಹುದು ಎಂದು ಕಾದು ಸೋತಿರುವ ಈ ಬಡ ಕ್ರೀಡಾಪಟುವಿನ ಕುಟುಂಬಕ್ಕೆ ಒಡಿಶಾ ಸರ್ಕಾರ ನೆರವಾಗಬಹುದೇ ನೋಡಬೇಕಿದೆ.