ಪದಕ ಗೆಲ್ಲದಿದ್ದರೂ ನೀವು ಕೋಟ್ಯಂತರ ಹೃದಯ ಗೆದ್ದಿದ್ದೀರಿ: ಕೋಚ್ ಪ್ರಶಂಸೆ

ಟೋಕಿಯೋ, ಆಗಸ್ಟ್ 6: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಕಡೇಯ ಕ್ಷಣದಲ್ಲಿ ವಿಫಲವಾಗಿದೆ. ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಶ್ರೇಷ್ಟ ಪ್ರತಿರೋಧವನ್ನು ಒಡ್ಡಿತ್ತು. ಗೆಲುವು ಸಾಧಿಸುವ ಭರವಸೆಯನ್ನು ಕೂಡ ಮೂಡಿಸಿತ್ತು. ಆದರೆ ಅಂತಿಮವಾಗಿ ಗೆಲುವು ಸಾಧ್ಯವಾಗಲಿಲ್ಲ. ಆದರೆ ಭಾರತೀಯ ಮಹಿಳೆಯರ ಹಾಕಿ ತಂಡ ನೀಡಿದ ಪ್ರದರ್ಶನಕ್ಕೆ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ.

ಇನ್ನು ಮಹಿಳಾ ಹಾಕಿ ತಂಡ ಪ್ಲೇಆಫ್‌ನಲ್ಲಿ ಸೋಲು ಅನುಭವಿಸಿದ ಬಳಿಕ ತಂಡದ ಕೋಚ್ ಜೋರ್ಡ್ ಮರಿಜ್ನೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಮಹಿಳಾ ತಂಡ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲಲು ವಿಫಲವಾದರು ಕೂಡ ದೇಶದ ಕೋಟ್ಯಂತರ ಜನರ ಹೃದಯವನ್ನು ಗೆಲ್ಲುವಲ್ಲಿ ಸಫಲವಾಗಿದೆ ಎಂದಿದ್ದಾರೆ.

ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಅನುಭವಿಸಿದ ಆಘಾತಕಾರಿ ಸೋಲಿನ ಬಳಿಕ ಭಾರತೀಯ ಹಾಕಿ ತಂಡದ ಸದಸ್ಯರನ್ನು ಕೋಚ್ ಜೋರ್ಡ್ ಮರಿಜ್ನೆ ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ಅವರು ತಂಡ ಈ ಹಂತದಲ್ಲಿ ಸೋಲು ಕಂಡಿದ್ದರೂ ಕೂಡ ಈವರೆಗೆ ತಲುಪಿದ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದೆ ಎಂದು ಆಟಗಾರ್ತಿಯರಿಗೆ ಹುರುಪು ಮೂಡಿಸಿದರು.

ಟೋಕಿಯೋ ಒಲಿಂಪಿಕ್ಸ್: ರಸ್ಲರ್ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶಟೋಕಿಯೋ ಒಲಿಂಪಿಕ್ಸ್: ರಸ್ಲರ್ ಭಜರಂಗ್ ಪೂನಿಯಾ ಸೆಮಿಫೈನಲ್‌ಗೆ ಪ್ರವೇಶ

ಈಗಾಗಲೇ ಭಾರತೀಯ ಮಹಿಳಾ ಹಾಕಿ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆಯುವ ಮೂಲಕ ನಿರೀಕ್ಷೆಯನ್ನು ಮೀರಿದ ಪ್ರದರ್ಶನ ನೀಡುವಲ್ಲಿ ಸಫಲವಾಗಿದ್ದಾರೆ. ಟೂರ್ನಿಯ ಆರಂಭಿಕ ಹಂತದಲ್ಲಿ ಹಿನ್ನೆಡೆ ಅನುಭವಿಸಿದರೂ ಬಳಿಕ ಕ್ವಾರ್ಟರ್‌ಫೈನಲ್‌ಗೇರಿದ್ದ ವನಿತೆಯರ ತಂಡ ಬಳಿಕ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಹಿಂದೆಂದೂ ತಲುಪಲು ಸಾಧ್ಯವಾಗದ ಘಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಆದರೆ ಸೆಮಿಫಯನಲ್‌ನಲ್ಲಿ ಸೋಲು ಕಂಡಿದ್ದ ಮಹಿಳಾ ತಂಡಕ್ಕೆ ಕಂಚಿನ ಪದಕ ಗೆಲ್ಲಲು ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಬೇಕಾಗಿತ್ತು.

2016ರ ರಿಯೋ ಒಲಿಂಪಿಕ್ಸ್‌ನ ಚಾಂಪಿಯನ್ ತಂಡವಾಗಿರುವ ಗ್ರೇಟ್ ಬ್ರಿಟನ್ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡ ಅಮೋಘ ಹೋರಾಟವನ್ನು ನೀಡಿತು. ಒಂದು ಹಂತದಲ್ಲಿ 1-3 ಅಂತರದಿಂದ ಹಿನ್ನೆಡೆಯಲ್ಲಿದ್ದ ಭಾರತ ಬಳಿಕ 3-3 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಗ್ರೇಟ್ ಬ್ರಿಟನ್ ಮತ್ತೊಂದು ಗೋಲು ಗಳಿಸುವ ಮೂಲಕ ಪಂದ್ಯದಲ್ಲಿ ಮತ್ತೆ ಮುನ್ನಡೆ ಸಾಧಿಸಿತು. ಇದನ್ನು ಸಮಬಲಗೊಳಿಸಲು ಭಾರತೀಯ ಮಹಿಳಾ ತಂಡ ಸರ್ವಪ್ರಯತ್ನವನ್ನು ಪಟ್ಟಿತ್ತು. ಆದರೆ ಅದರಲ್ಲಿ ವಿಫಲವಾಗಿ ಸೋಲು ಕಂಡಿದೆ.

ಭಾರತ ಮಹಿಳೆಯರ ಹಾಕಿ ತಂಡ ಈವರೆಗೆ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದು ಅತ್ಯುನ್ನತ ಸಾಧನೆಯಾಗಿತ್ತು. 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದಿತ್ತು. ಆದರೆ ಆಗ ಸೆಮಿಫೈನಲ್ ಹಂತದ ಸ್ಪರ್ಧೆಗಳು ಇರಲಿಲ್ಲ. ರೌಂಡ್ ರಾಬಿನ್ ಮಾದರಿಯ ಸ್ಪರ್ಧೆಯಲ್ಲಿ ಕೇವಲ ಆರು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅಗ್ರ ಎರಡು ತಂಡಗಳು ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದಿದ್ದವು. ಹೀಗಾಗಿ ಭಾರತ ನಾಲ್ಕನೇ ಸ್ಥಾನಿಯಾಗಿ ಅಂದಿನ ಟೂರ್ನಿಯಲ್ಲಿ ಹೊರಬಿದ್ದಿತ್ತು. ಅದೇ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಕೊನೆಯ ಬಾರಿ ಚಿನ್ನದ ಪದಕವನ್ನು ಗೆದ್ದು ಬೀಗಿತ್ತು.

ಇದಕ್ಕೂ ಮುನ್ನ ಗುರುವಾರ ನಡೆದ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕಕ್ಕಾಗಿ ನಡೆಸಿದ ಹೋರಾಟದಲ್ಲಿ ಗೆದ್ದು ಬೀಗಿತ್ತು. ಈ ಮೂಲಕ 41 ವರ್ಷಗಳ ಬಳಿಕ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಗೆಲ್ಲಲು ಯಶಸ್ವಿಯಾದಂತಾಗಿತ್ತು. ಮಹಿಳಾ ಹಾಗೂ ಪುರುಷ ಹಾಕಿ ತಂಡ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ನೀಡಿದ ಪ್ರದರ್ಶನದಿಂದಾಗಿ ಇಡೀ ದೇಶ ಸಂಭ್ರಮಿಸುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Friday, August 6, 2021, 12:50 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X