2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಒಂದು ಬೆಳ್ಳಿ, ಐದು ಕಂಚಿನ ಪದಕಗಳನ್ನು ಮಾತ್ರ ಗೆಲ್ಲಲು ಭಾರತ ಶಕ್ತವಾಗಿತ್ತು. ಇದಾದ ಬಳಿಕ ಆರಂಭವಾದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತ ಪದಕಗಳ ಬೇಟೆಯಾಡಿತ್ತು. 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಗೆದ್ದು ಪ್ಯಾರಿಸ್‌ನಲ್ಲಿ ಇತಿಹಾಸ ನಿರ್ಮಿಸಿತ್ತು. ಇದೀಗ ಎರಡೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳಿಗೆ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಂತರಾಷ್ಟ್ರೀಯ ಒಲಂಪಿಕ್ ಸಮಿತಿಯ ಸದಸ್ಯೆ ನೀತಾ ಅಂಬಾನಿ ಅಭಿನಂದಿಸಲಿದ್ದಾರೆ. ಇದಕ್ಕಾಗಿ ಸೆಪ್ಟೆಂಬರ್ 29, ಭಾನುವಾರ ದಂದು ಎಲ್ಲಾ ಅಥ್ಲೀಟ್‌ಗಳಿಗೆ ನೀತಾ ಅಂಬಾನಿ ಅವರು ತಮ್ಮ ನಿವಾಸಕ್ಕೆ ಆಹ್ವಾನ ನೀಡಿದ್ದಾರೆ.
ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ಇದೇ ಮೊದಲು. ನೀತಾ ಅಂಬಾನಿ ಕ್ರೀಡಾಪಟುಗಳಿಗೆ ಕಳುಹಿಸಿದ ಆಹ್ವಾನ ಪತ್ರದಲ್ಲಿ, 'ಭಾರತದ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳನ್ನ ಗೌರವಿಸಲು ನಾನು ನಿಮ್ಮನ್ನು ನಮ್ಮ ಮನೆಗೆ ಆಹ್ವಾನಿಸುತ್ತಿರುವುದು ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ನಿಮ್ಮ ಪ್ರತಿಭೆ, ಸಂಕಲ್ಪ ಮತ್ತು ಕಠಿಣ ಪರಿಶ್ರಮ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು ಬರೆಯಲಾಗಿದೆ.
ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ 142ನೇ ಐಒಸಿ ಅಧಿವೇಶನದಲ್ಲಿ ಭಾರತದಿಂದ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯೆಯಾಗಿ ನೀತಾ ಅಂಬಾನಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನೀತಾ ಅಂಬಾನಿ 2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಐಒಸಿ ಸದಸ್ಯರಾಗಿದ್ದರು. ಐಒಸಿಯನ್ನು ತಲುಪಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನೀತಾ ಅಂಬಾನಿ ಅವರು ಸಂಘಕ್ಕಾಗಿ ಉತ್ತಮ ಕಾರ್ಯ ಮಾಡಿಕೊಂಡು ಬಂದಿರುವುದು ಹೆಮ್ಮೆಯ ವಿಶೇಷವಾಗಿದೆ.