
ಬೇ ಓವಲ್(ನ್ಯೂಜಿಲೆಂಡ್), ಜನವರಿ 16: ವಿಶ್ವಕಪ್ ಅಂಡರ್ 19 ಟೂರ್ನಮೆಂಟ್ ನಲ್ಲಿ ಟೀಂ ಇಂಡಿಯಾ ಸತತ ಎರಡು ಗೆಲುವಿನ ಮೂಲಕ ನಾಕೌಟ್ ಹಂತ ಪ್ರವೇಶಿಸಿದೆ. ಮಂಗಳವಾರದಂದು ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ಪಪುವಾ ನ್ಯೂ ಗಿನಿ ವಿರುದ್ಧ ದೈತ್ಯ ಪಡೆ ಭಾರತ ಸುಲಭ ಜಯ ದಾಖಲಿಸಿದೆ.
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 100ರನ್ ಗಳ ಅಂತರದ ಜಯ ಗಳಿಸಿದ್ದ ಭಾರತ, ಇಂದು ಈ ಗೆಲುವು ಪಡೆದು ಮುಂದಿನ ಹಂತಕ್ಕೆ ಅರ್ಹತೆ ಗಳಿಸಿದೆ.
65 ರನ್ ಗಳ ಗುರಿ ಬೆನ್ನು ಹತ್ತಿದ ಭಾರತ ತಂಡವು 8 ಓವರ್ ಗಳಲ್ಲೇ ಗುರಿಯನ್ನು ಮುಟ್ಟಿ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ ನಾಯಕ ಪೃಥ್ವಿ ಶಾ ಅವರು ಆಕರ್ಷಕ 57ರನ್ ಗಳಿಸಿ ಅಜೇಯರಾಗಿ ಉಳಿದು, ಜಯದ ರನ್ ಬಾರಿಸಿದರು.
38 ಎಸೆತಗಳಲ್ಲಿ 50ರನ್ ಪೂರೈಸಿದ ಪೃಥ್ವಿ ಅವರು ಮೊದಲ ಪಂದ್ಯದಲ್ಲಿ 94ರನ್ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ನ್ಯೂ ಗಿನಿ ತಂಡವನ್ನು 64ರನ್ನಿಗೆ ಭಾರತದ ಬೌಲರ್ ಗಳು ನಿಯಂತ್ರಿಸಿದರು. ಭಾರತದ ಪರ ಸ್ಪಿನ್ನರ್ ಅನುಕುಲ್ ರಾಯ್ 5/14 ಗಳಿಸಿ ಗಮನ ಸೆಳೆದರು.
ಜನವರಿ 13ರಿಂದ ಫೆಬ್ರವರಿ 03ರ ತನಕ ವಿಶ್ವಕಪ್ ಟೂರ್ನಮೆಂಟ್ ಪಂದ್ಯಗಳು ನಿಗದಿಯಾಗಿವೆ. ಕ್ರೈಸ್ಟ್ ಚರ್ಚ್, ಕ್ವೀನ್ಸ್ ಟೌನ್, ಟಾರಂಗ ಹಾಗೂ ವಾಂಗರಾಯಿ ನಗರಗಳ 7 ಮೈದಾನಗಳಲ್ಲಿ 16 ತಂಡಗಳು ಸೆಣಸಲಿವೆ. ಜನವರಿ 28ರಂದು ಕ್ರೈಸ್ಟ್ ಚರ್ಚ್ ನ ಬರ್ಟ್ ಸುಕ್ಲಿಫ್ ಓವಲ್ ನಲ್ಲಿ ಅಂತಿಮ ಹಣಾಹಣಿ ನಡೆಯಲಿದೆ.