ಛತ್ತೋಗ್ರಾಮ್ ಅಂಗಳದಲ್ಲಿ ಭಾರತ ತಂಡ ನೀಡಿದ 410 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ ತಂಡವನ್ನು 182 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ 227 ರನ್‌ಗಳ ಬೃಹತ್ ಜಯ ಸಾಧಿಸಿದೆ.
ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಭಾರಿ ಜಯ ಸಾಧಿಸಿದರು ಬಾಂಗ್ಲಾದೇಶ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿದೆ. ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಾಳು ರೋಹಿತ್ ಶರ್ಮಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಇಶಾನ್ ಕಿಶನ್ ಅಬ್ಬರಿಸಿದರು.
ಶಿಖರ್ ಧವನ್ ಕೇವಲ 3 ರನ್ ಗಳಿಸಿ ಔಟಾದ ನಂತರ ಜೊತೆಯಾದ ವಿರಾಟ್ ಕೊಹ್ಲಿ 113 ರನ್ ಮತ್ತು ಇಶಾನ್ ಕಿಶನ್ 210 ರನ್ ಮೂರನೇ ವಿಕೆಟ್‌ಗೆ 290 ರನ್‌ಗಳ ಜೊತೆಯಾಟ ಆಡಿದರು. ಇಶಾನ್ ಕಿಶನ್ ತಮ್ಮ ಚೊಚ್ಚಲ ಶತಕ ಮತ್ತು ದ್ವಿಶತಕ ಸಿಡಿಸಿ ಮಿಂಚಿದರೆ, ವಿರಾಟ್ ಕೊಹ್ಲಿ 72 ನೇ ಶತಕ ದಾಖಲಿಸಿದರು.
Ishan Kishan : ಇಶಾನ್ ಕಿಶನ್ ವಿಶ್ವದಾಖಲೆಯ ದ್ವಿಶತಕ: ದಿಗ್ಗಜರ ಸಾಲಿಗೆ ಸೇರಿದ ಯುವ ಆಟಗಾರ
ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನಿಗದಿತ 50 ಒವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 409 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಟೀಂ ಇಂಡಿಯಾ 6ನೇ ಬಾರಿಗೆ ಏಕದಿನ ಪಂದ್ಯದಲ್ಲಿ 400ಕ್ಕಿಂತ ಹೆಚ್ಚಿನ ರನ್ ಗಳಿಸಿದ ಸಾಧನೆ ಮಾಡಿತು.
ಮೆಹಿದಿ ಹಸನ್ ಸರಣಿ ಶ್ರೇಷ್ಠ ಆಟಗಾರ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ ಯಾವ ಹಂತದಲ್ಲು ಭಾರತಕ್ಕೆ ಸವಾಲಾಕಲೇ ಇಲ್ಲ. ಶಕೀಬ್ ಅಲ್ ಹಸನ್ 43 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲವಾದರು. ಕಳೆದ ಎರಡು ಪಂದ್ಯಗಳಲ್ಲಿ ಹೀರೋ ಆಗಿದ್ದ ಮೆಹಿದಿ ಹಸನ್ ಮೀರಜ್ ಕೇವಲ 3 ರನ್ ಗಳಿಸಿ ಔಟಾದರು.
ಶಾರ್ದುಲ್ ಠಾಕೂರ್ 3 ವಿಕೆಟ್ ಪಡೆದು ಮಿಂಚಿದರೆ, ಅಕ್ಷರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದು, ಬಾಂಗ್ಲಾದೇಶವನ್ನು 34 ಓವರ್ ಆಗುವಷ್ಟರಲ್ಲಿ 182 ರನ್‌ಗಳಿಗೆ ಆಲೌಟ್ ಮಾಡಿದರು.
ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶದ ಗೆಲುವಿಗೆ ಕಾರಣವಾಗಿದ್ದ ಮೆಹಿದಿ ಹಸನ್ ಮೀರಜ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಮೂರನೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ ಇಶಾನ್ ಕಿಶನ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.