ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಏಕದಿನ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ನೀಡಿದ ಅಮೋಘ ಪ್ರದರ್ಶನ ಕಿವೀಸ್ ಪಡೆಗೆ ಭಾರೀ ಆಘಾತ ನೀಡಿತ್ತು. ಅದರಲ್ಲೂ ಅನುಭವಿ ವೇಗಿ ಮೊಹಮ್ಮದ್ ಶಮಿ ಆರಂಭದಲ್ಲಿಯೇ ನ್ಯೂಜಿಲೆಂಡ್ ತಂಡಕ್ಕೆ ಕಂಟಕವಾಗುವ ಮೂಲಕ ಭಾರತ ತಂಡದ ಮೇಲುಗೈಗೆ ಕಾರಣವಾಗಿದ್ದರು.
ಮೊಹಮ್ಮದ್ ಶಮಿ ನೀಡಿದ ಈ ಪ್ರದರ್ಶನಕ್ಕೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಶಮಿ ಪ್ರದರ್ಶನದ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದು ರಾಯ್‌ಪುರದಲ್ಲಿ ನೀಡಿದ ಪ್ರದರ್ಶನ ಮನಗೆದ್ದಿದೆ ಎಂದಿದ್ದಾರೆ. ಈ ಪಂದ್ಯದಲ್ಲಿ ಶಮಿ ಒಟ್ಟು ಮೂರು ವಿಕೆಟ್ ಪಡೆದು ಮಿಂಚಿದ್ದು ಈ ಅದ್ಭುತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಈ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಗೆದ್ದಿದ್ದು ಮಾತ್ರವಲ್ಲದೆ 2-0 ಅಂತರದಿಂದ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
4 ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡ ಇಶಾನ್ ಕಿಶನ್: ಖಡಕ್ ವಾರ್ನಿಂಗ್ ಕೊಟ್ಟ ರೆಫರಿ
"ಮೊಹಮ್ಮದ್ ಶಮಿ ಅವರ ಪ್ರದರ್ಶನ ನಿಜಕ್ಕೂ ಮನಗೆದ್ದಿದೆ. ಯಾಕೆಂದರೆ ಮೊದಲ ಓವರ್‌ನಲ್ಲಿ ಮೊದಲ ವಿಕೆಟ್ ಪಡೆಯಲು ಅವರು ಸಿದ್ಧಪಡಿಸಿಕೊಂಡ ರೀತಿ, ಎಲ್ಲವೂ ಅಲ್ಲಿಂದಲೇ ಆರಂಭವಾಗಿತ್ತು. ಬಳಿಕ ಬೌಲಿಂಗ್‌ನಲ್ಲಿನ ಏರಿಳಿತಗಳು ಅತ್ಯಂತ ಪರಿಣಾಮಕಾರಿಯಾಗಿತ್ತು" ಎಂದಿದ್ದಾರೆ ಇರ್ಫಾನ್ ಪಠಾಣ್.
"ಪರಿಸ್ಥಿತಿಗೆ ತಕ್ಕಂತೆ ಬ್ರೇಸ್‌ವೆಲ್ ವಿರುದ್ಧ ಬೌಲಿಂಗ್ ನಡೆಸಿದ ರೀತಿ ಅದ್ಭುತವಾಗಿತ್ತು. ಇನ್ನು ಪಿಚ್ಚನ್ನು ಅವರು ಅದ್ಭುತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಇದರಿಂದಾಗಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪ್ರತಿಯೊಂದು ವಿಕೆಟ್ ಕೂಡ ಬಹಳ ಮಹತ್ವದ್ದಾಗಿತ್ತು. ಈ ವಿಕೆಟ್‌ಗಳು ಬಹಳ ಅಗತ್ಯವಾಗಿದ್ದು. ಕಳೆದ ಎಳೆಂಟು ಪಂದ್ಯಗಳಲ್ಲಿ ಅವರ ಪ್ರದರ್ಶನ ಗಮನಾರ್ಹವಾಗಿರಲಿಲ್ಲ" ಎಂದಿದ್ದಾರೆ ಇರ್ಫಾನ್ ಪಠಾಣ್.
"ನಾನು ವೈಯಕ್ತಿಕವಾಗಿ ಇಂಥಾ ಪ್ರದರ್ಶನ ಮುಂದುವರಿಯುವುದನ್ನು ಮತ್ತಷ್ಟು ನೋಡಲು ಬಯಸುತ್ತೇನೆ. ಯಾವುದೇ ಪಿಚ್‌ಗಳಲ್ಲಿಯೂ ಉತ್ತಮ ಪ್ರದರ್ಶನ ಈಡಬಲ್ಲ ಇಬ್ಬರು ಬೌಲರ್‌ಗಳನ್ನು ನಾವು ಹೊಂದಿದ್ದೇವೆ. ತಮ್ಮ ವೇಗ ಹಾಗೂ ಏರಿಳಿತಗಳೊಂದಿದ ಅದ್ಭುತ ಕೌಶಲ್ಯಗಳನ್ನು ಹೊಂದಿದ್ದಾರೆ. ಇನ್ನು ತಂಡದ ಮ್ಯಾನೇಜ್‌ಮೆಂಟ್ ಮತ್ತು ಆಯ್ಕೆದಾರರು ಹಾಗೂ ನಾಯಕ ರೋಹಿತ್ ಶರ್ಮಾ ಎಲ್ಲರು ಕೂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ" ಎಂದು ಪಠಾಣ್ ಹೇಳಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಸರಣಿಯ ಅಂತಿಮ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಜನವರಿ 24 ಮಂಗಳವಾರ ನಡೆಯಲಿದೆ.