ಕೇಪ್‌ಟೌನ್‌ ಕಷ್ಟಕ್ಕೆ ಸಹಾಯ ಹಸ್ತ ಚಾಚಿದ ಟೀಂ ಇಂಡಿಯಾ

Posted By:
Indian cricket team donates money for Capetown's water crisis

ಕೇಪ್‌ಟೌನ್, ಫೆಬ್ರವರಿ 28: ದಕ್ಷಿಣ ಆಫ್ರಿಕಾದಲ್ಲಿ ಏಕದಿನ, ಟಿ20 ಸರಣಿ ಜಯಿಸಿ ಮೆಚ್ಚುಗೆಗೆ ಪಾತ್ರವಾಗಿರುವ ಭಾರತ ಕ್ರಿಕೆಟ್ ತಂಡ ಸದ್ದಿಲ್ಲದೆ ಇನ್ನೂ ಒಂದು ಉತ್ತಮ ಕಾರ್ಯವೊಂದನ್ನು ದ.ಆಫ್ರಿಕಾ ನೆಲದಲ್ಲಿ ಮಾಡಿದೆ ದ.ಆಫ್ರಿಕಾ ಜನರ ಮನ ಗೆದ್ದಿದೆ.

ಭೀಕರ ನೀರಿನ ಸಮಸ್ಯೆ ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ನಗರಕ್ಕೆ ವಿರಾಟ್‌ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಧನಸಹಾಯ ಮಾಡಿದೆ.

ಕೇಪ್‌ಟೌನ್ ನಗರದಲ್ಲಿ ನೀರಿನ ಬಾಟಲಿಗಾಗಿ ಹಾಗೂ ಕೊಳವೆ ಬಾವಿ ತೋಡಿಸಲೆಂದು ಭಾರತ ಕ್ರಿಕೆಟ್‌ ತಂಡ 'ದಿ ಗಿಫ್ಟ್ ಆಫ್ ಗಿವರ್ಸ್' ಪ್ರತಿಷ್ಠಾನಕ್ಕೆ 5.5 ಲಕ್ಷ ರೂಪಾಯಿ ಧನಸಹಾಯ ಮಾಡಿದೆ. ದ.ಆಫ್ರಿಕಾ ತಂಡದ ನಾಯಕ ಫಾಪ್ ಡು ಪ್ಲಿಸಿಸ್ ಸಹ ತಮ್ಮ ತಂಡದ ಪರವಾಗಿ ದೇಣಿಗೆ ನೀಡಿದ್ದಾರೆ.

ಪ್ರಪಂಚದಲ್ಲಿ ನೀರಿನ ಲಭ್ಯತೆ ಕಡಿಮೆ ಇರುವ ನಗರಗಳಲ್ಲಿ ಕೇಪ್‌ಟೌನ್‌ ಮೊದಲ ಪಟ್ಟಿಯಲ್ಲಿದೆ. ಕಳೆದ ತಿಂಗಳು ಕೇಪ್‌ಟೌನ್ ನಿವಾಸಿಗಳಿಗೆ ದಿನಕ್ಕೆ ಕೇವಲ 50 ಲೀಟರ್ ನೀರು ಮಾತ್ರ ಬಳಕೆ ಮಾಡಲು ನಗರದ ಆಯುಕ್ತರು ಕರೆ ನೀಡಿದ್ದರು.

ಕೇಪ್‌ಟೌನ್ ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ನಡೆದ ಪಂದ್ಯವೊಂದರ ವೇಳೆ ಟೀಂ ಇಂಡಿಯಾದ ಆಟಗಾರರಿಗೂ 2 ನಿಮಿಷಕ್ಕಿಂತ ಕಡಿಮೆ ಸಮಯ ಸ್ನಾನ ಮಾಡುವಂತೆ ಮನವಿ ಮಾಡಲಾಗಿತ್ತು. ಅಲ್ಲಿನ ನೀರಿನ ಬವಣೆಯ ಬಗ್ಗೆ ಅರಿವು ಪಡೆದ ಟೀಂ ಇಂಡಿಯಾ ತಂಡ ಹಣ ಸಹಾಯ ಮಾಡಿದೆ.

ಟೀಂ ಇಂಡಿಯಾದ ಈ ಸಹಾಯ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಕಾರಣವಾಗಿದ್ದು, ದ.ಆಫ್ರಿಕಾದ ಜನರೂ ಕೂಡ ಭಾರತ ತಂಡದ ಸಮಾಜ ಸೇವೆಯನ್ನು ಕೊಂಡಾಡಿದ್ದಾರೆ.

Story first published: Wednesday, February 28, 2018, 19:27 [IST]
Other articles published on Feb 28, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ