
ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಚಾರ್ಟರ್ಡ್ ವಿಮಾನದ ಮೂಲಕ ದುಬೈಗೆ ಬಂದಿಳಿದಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿನ್ನಾಡಿದ ಮ್ಯಾಂಚೆಸ್ಟರ್ ನಗರದಿಂದ ನೇರವಾಗಿ ದುಬೈಗೆ ವಿಶೇಷ ವಿಮಾನದ ಮೂಲಕ ಹಾರಿದ್ದಾರೆ.
ಟಿ20 ಹಾಗೂ ಏಕದಿನ ಸರಣಿಯನ್ನಾಡುವ ಹಿನ್ನೆಲೆಯಲ್ಲಿ ಎರಡೂ ತಂಡಗಳು ಬಯೋ ಸೆಕ್ಯೂರ್ ಬಬಲ್‌ನಲ್ಲಿ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಿದ್ದವು. ಈಗ ಈ ಆಟಗಾರರು ಐಪಿಎಲ್ ಬಯೋ ಸೆಕ್ಯೂರ್ ಬಬಲ್‌ಗೆ ಸೇರಿಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ಆಟಗಾರರು 36 ಗಂಟೆಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಬೇಕಿದೆ.
ಈ ಆಟಗಾರರು ದುಬೈಗೆ ಬಂದಿಳಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಾಗೂ ಪ್ಯಾಟ್ ಕಮ್ಮಿನ್ಸನ್ ಸಂಪೂರ್ಣ ದೇಹವನ್ನು ಪಿಪಿಇ ಕಿಟ್‌ನಿಂದ ಮುಚ್ಚಿಕೊಂಡಿದ್ದಾರೆ. ಈ ಮೂಲಕ ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ದುಬೈ ಸೇರಿಕೊಂಡಿದ್ದಾರೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡದ 21 ಆಟಗಾರರು ದುಬೈ ಗೆ ಬಂದಿಳಿದಿದ್ದಾರೆ. ಈಗಾಗಲೇ ತಮ್ಮ ಹೋಟೆಲ್‌ಗೆ ಸೇರಿಕೊಂಡಿರುವ ಈ ಆಟಗಾರರು ಮುಂದಿನ 36 ಗಂಟೆಗಳ ಕಾಲ ಪ್ರತ್ಯೇಕವಾಗಿರಲಿದ್ದಾರೆ. ಬಳಿಕ ತಮ್ಮ ತಂಡಗಳ ಬಯೋ ಸೆಕ್ಯೂರ್ ಬಬಲ್‌ನಲ್ಲಿ ಸೇರಿಕೊಳ್ಳಲಿದ್ದಾರೆ.
ಇತರ ಎಲ್ಲಾ ಆಟಗಾರರು ದುಬೈನಲ್ಲಿ 6 ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿತ್ತು. ಆದರೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು ಈಗಾಗಲೇ ಒಂದು ವಯೋ ಸೆಕ್ಯೂರ್ ಬಬಲ್‌ನಲ್ಲಿ ಇದ್ದು ಇನ್ನೊಂದು ಬಬಲ್‌ಗೆ ಸೇರ್ಪಡೆಗೊಳಿಸಲು ಸಂಪೂರ್ಣ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿತ್ತು. ವಿಶೇಷ ಚಾರ್ಟರ್ಡ್ ವಿಮಾನದ ವ್ಯವಸ್ಥಗಳನ್ನು ಮಾಡಿಕೊಳ್ಳುವ ತೀರ್ಮಾನದ ಮಾಡಿಕೊಂಡ ಕಾರಣ ಈ ಕ್ವಾರಂಟೈನ್ ಅವಧಿಯನ್ನು 36 ಗಂಟೆಗಳಿಗೆ ಕಡಿತಗೊಳಿಸಲಾಗಿದೆ.