ಕರ್ನಾಟಕ ರಣಜಿ ಕ್ರಿಕೆಟಿಗನಿಗೂ ಹೊಡೆದಿದ್ದನೇ ನಲಪಾಡ್‌?

Posted By:

ಬೆಂಗಳೂರು, ಫೆಬ್ರವರಿ 23: ವಿದ್ವತ್‌ ಮೇಲೆ ಹಲ್ಲೆ ನಡೆಸಿ ಜೈಲುಪಾಲಾಗಿರುವ ಮೊಹಮ್ಮದ್‌ ನಲಪಾಡ್‌ನ ಹಳೆಯ ಪಾಪದ ಕೃತ್ಯಗಳು ಈಗ ಒಂದೊಂದಾಗಿ ಹೊರಗೆ ಬರುತ್ತಿವೆ.

ನಲಪಾಡ್‌ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಮಹಿಳೆಯೊಬ್ಬರು ನಲಪಾಡ್‌ ತನ್ನನ್ನು ಹೇಗೆ ಹೆದರಿಸಿದ್ದ ಎಂಬುದರ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು, ಇದೀಗ ನಲಪಾಡ್ ಈ ಹಿಂದೆ ಕರ್ನಾಟಕ ರಣಜಿ ತಂಡದ ಆಟಗಾರನೊಬ್ಬನಿಗೆ ಹೊಡೆದಿದ್ದ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆರು ತಿಂಗಳ ಹಿಂದೆ ಸ್ಟಾರ್ ಹೊಟೆಲ್ ಒಂದರಲ್ಲಿ ರಾಜ್ಯದ ರಣಜಿ ಕರ್ನಾಟಕ ತಂಡದ ಆಟಗಾರನೊಬ್ಬನ ಮೇಲೆ ಬಿಯರ್ ಬಾಟಲಿಯಿಂದ ಮೊಹಮ್ಮದ್ ನಲಪಾಡ್ ಹಲ್ಲೆ ಮಾಡಿದ್ದ ಎಂದು ಹೊಟೇಲ್ ಸಿಬ್ಬಂದಿ ಹೇಳಿದುದಾಗಿ ಪತ್ರಕರ್ತರು ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Nalapad allegedly beaten a Karntaka Ranaji player 6 months ago

ಇದೇ ಮೊಹಮ್ಮದ್ ನಲಪಾಡ್ ಪತ್ರಕರ್ತರ ಮೇಲೂ ಹಲ್ಲೆಗೆ ಯತ್ನಿಸಿದ್ದ ಎಂಬ ವಿಷಯವು ಇದೀಗ ಬೆಳಕಿಗೆ ಬಂದಿದೆ. ಅಷ್ಟೆ ಅಲ್ಲದೆ ಪತ್ರಕರ್ತರ ಮೇಲೆ ಕಾರು ಹತ್ತಿಸಿ ಅಪಘಾತ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದೆ.

ವರ್ಷದ ಹಿಂದೆ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಮೊಹಮ್ಮದ್ ನಲಪಾಡ್ ಕೂಡಾ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಮೋದಿ ಪ್ರತಿಕೃತಿ ಸುಡುವ ಸಮಯದಲ್ಲಿ ಕಾಂಗ್ರೆಸ್ ಕಾರ್ಯತೆಯೊಬ್ಬರಿಗೆ ಬೆಂಕಿ ಹತ್ತಿಕೊಂಡಿತು. ಇದನ್ನು ಮಾಧ್ಯಮದವರು ಚಿತ್ರೀಕರಿಸಿಕೊಳ್ಳಲು ಪ್ರಯತ್ನಿಸಿದರು.

ಆಗ ಪತ್ರಕರ್ತರ ಮೇಲೆ ಸಿಟ್ಟಾದ ಮೊಹಮ್ಮದ್ ನಲಪಾಡ್ ಹಲ್ಲೆಗೆ ಮುಂದಾದ ಆದರೆ ಪತ್ರಕರ್ತರೂ ತಿರುಗಿಬಿದ್ದ ಕಾರಣ ಕೂಡಲೇ ತನ್ನ ಬೆಂಜ್ ಕಾರು ಏರಿ ಪತ್ರಕರ್ತರತ್ತ ನುಗ್ಗಿ ಬಂದ ಅಂದು ಕೆಲವು ಪತ್ರಕರ್ತರು ಸ್ವಲ್ಪದರಲ್ಲಿ ಬಚಾವಾದರು ಎಂದು ಪ್ರತ್ಯಕ್ಷ ದರ್ಶಿ ಪತ್ರಕರ್ತರೊಬ್ಬರು ಹೇಳಿದ್ದಾರೆ.

ಘಟನೆಯಿಂದ ಕೋಪಗೊಂಡ ಪತ್ರಕರ್ತರು ನಲಪಾಡ್ ಬಹಿರಂಗ ಕ್ಷಮೆ ಕೇಳುವವರೆಗೂ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ ನಲಪಾಡ್‌ ನಿಂದ ಪತ್ರಕರ್ತರಿಗೆ ಕ್ಷಮೆ ಕೇಳಿಸಲಾಗಿತ್ತು.

Story first published: Friday, February 23, 2018, 12:56 [IST]
Other articles published on Feb 23, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ