ಎಬಿ ಡಿ'ವಿಲಿಯರ್ಸ್ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!

ಜೊಹಾನ್ಸ್‌ಬರ್ಗ್, ಜೂನ್ 06: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಎಬಿ ಡಿ'ವಿಲಿಯರ್ಸ್ ನಿವೃತ್ತಿಯಿಂದ ಹೊರಬಂದು ವಿಶ್ವಕಪ್‌ನಲ್ಲಿ ತಂಡ ಸೇರಿಕೊಳ್ಳುವ ಇಂಗಿತ ವ್ಯಕ್ತ ಪಡಿಸಿದ್ದರೂ ಅದನ್ನು ತಿರಸ್ಕರಿಸಿದ್ದೇಕೆ ಎಂಬುದನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬಹಿರಂಗ ಪಡಿಸಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ 35 ವರ್ಷದ ಅನುಭವಿ ಬ್ಯಾಟ್ಸ್‌ಮನ್ ಡಿ'ವಿಲಿಯರ್ಸ್, ಈ ಬಾರಿಯ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡುವ ಇಂಗಿತ ವ್ಯಕ್ತ ಪಡಿಸಿದದ್ದರೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ (ಕ್ರಿಕೆಟ್ ಸೌತ್ ಆಫ್ರಿಕಾ) ಅದಕ್ಕೆ ಅವಕಾಶ ನೀಡಲಿಲ್ಲ ಎಂಬ ಸುದ್ದಿ ಗುರುವಾರ ಕಾಳ್ಗಿಚ್ಚಿನಂತೆ ಹಬ್ಬಿತ್ತು.
ಈ ವಿಚಾರವವಾಗಿ ಕೂಡಲೇ ಪತ್ರಿಕಾಗೋಷ್ಠಿ ನಡೆಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಡಿ'ವಿಲಿಯರ್ಸ್ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣ ಕೊಟ್ಟಿದೆ. ಎಬಿಡಿ ವಿಶ್ವಕಪ್ ತಂಡದ ಆಯ್ಕೆ ಸಲುವಾಗಿ ನಡೆಸಲಾದ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧದ ಸರಣಿಗಳಲ್ಲಿ ಆಡಲು ಒಲವು ತೋರಲಿಲ್ಲ. ಹೀಗಾಗಿ ಅವರ ಸೇವೆ ತಿರಸ್ಕರಿಸಲಾಯಿತು ಎಂದು ಕ್ರಿಕೆಟ್ ಸೌತ್ ಆಫ್ರಿಕಾದ ಆಯ್ಕೆ ಸಮಿತಿಯ ಸಂಚಾಲಕ ಲಿಂಡಾ ಝೊಂಡಿ ತಿಳಿಸಿದ್ದಾರೆ.
"2018ರಲ್ಲಿ ನಿವೃತ್ತಿ ಘೋಷಿಸದಂತೆ ಎಬಿಡಿ ಅವರಲ್ಲಿ ಅಂಗಲಾಚಿದ್ದೆ. ಈ ಸಂದರ್ಭದಲ್ಲಿ ಆವರು ಅಗತ್ಯವಿದಲ್ಲಿ ಆಡಲಿದ್ದಾರೆಂಬ ಗಾಳಿ ಸುದ್ದಿಗಳು ಹಬ್ಬಿದ್ದವು. ಇವೆಲ್ಲವೂ ಸುಳ್ಳು. ಹೀಗಿದ್ದರೂ ಅವರಿಗೆ ವಿಶ್ವಕಪ್ ಹೊತ್ತಿಗೆ ತಂಡ ಸೇರಿಕೊಳ್ಳುವ ಅವಕಾಶದ ಬಾಗಿಲು ತೆರೆದಿದ್ದೆವು. ವಿಶ್ವಕಪ್ ತಂಡದ ಆಯ್ಕೆಗೆ ಪರಿಗಣಿಸಲು ಅವರು ತವರಿನಲ್ಲಿ ನಡೆದ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧದ ಸರಣಿಗಳಲ್ಲಿ ಆಡಬೇಕಿತ್ತು ಅಷ್ಟೇ. ಆದರೆ, ಇದರ ಬದಲಾಗಿ ಪಾಕಿಸ್ತಾನ ಸೂಪರ್ ಲೀಗ್ ಮತ್ತು ಬಾಂಗ್ಲಾ ಪ್ರೀಮಿಯರ್ ಲೀಗ್‌ಗಳಲ್ಲಿ ಆಡಲು ಮುಂದಾದರು. ನಿವೃತ್ತಿ ದಿನಗಳನ್ನು ಆನಂದಿಸುತ್ತಿರುವುದಾಗಿ ಹೇಳಿದ ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದರು,'' ಎಂದು ಝೊಂಡಿ ಹೇಳಿದ್ದಾರೆ.
"ನಾಯಕ ಫಾಫ್ ಮತ್ತು ಕೋಚ್ ಒಟಿಸ್ ಗಿಬ್ಸನ್ ವಿಶ್ವಕಪ್ ತಂಡದಲ್ಲಿ ಎಬಿ ಡಿ'ವಿಲಿಯರ್ಸ್ ಸೇರಲು ಬಯಸುತ್ತಿದ್ದಾರೆ ಎಂಬ ಮಾಹಿತಿ ನೀಡಿದರು. ಇದು ಆಯ್ಕೆ ಸಮಿತಿಗೆ ಅಚ್ಚರಿ ತಂದೊಡ್ಡಿತ್ತು. ಏಪ್ರಿಲ್ 18ರಂದು ತಂಡ ಪ್ರಕಟಿಸಿದ ದಿನದಂದು ಈ ಮಾಹಿತಿ ನಮಗೆ ತಿಳಿಯಿತು. ಎಬಿ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ತಂಡದಲ್ಲಿ ಅವರ ಸ್ಥಾನ ತುಂಬಬಲ್ಲ ಆಟಗಾರರ ಕೊರತೆ ದೊಡ್ಡದಾಗಿತ್ತು. ಈ ಸ್ಥಾನ ತುಂಬಲು ನಮಗೆ ಒಂದು ವರ್ಷವೇ ಬೇಕಾಯಿತು. ಈ ಸ್ಥಾನಕ್ಕಾಗಿ ಹಲವು ಆಟಗಾರರು ಶ್ರಮವಹಿಸಿದ್ದಾರೆ. ಆದ್ದರಿಂದಲೇ ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿದೆ. ಹೀಗಾಗಿ ಅವರಿಗೆ ಮೋಸವಾಗಬಾರದು. ಕ್ರಿಕೆಟ್‌ನ ತತ್ವಗಳ ಅನುಗುಣವಾಗಿ ಡಿ'ವಿಲಿಯರ್ಸ್ ಸೇವೆ ನಿರಾಕರಿಸಲಾಯಿತು,'' ಎಂದು ಎಬಿಡಿ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡದೇ ಇರುವುದಕ್ಕೆ ಕಾರಣವನ್ನು ಝೊಂಡಿ ವಿವರಿಸಿದ್ದಾರೆ.
"ಎಬಿ ಡಿ'ವಿಲಿಯರ್ಸ್ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬುದರಲ್ಲಿ ಬೇರೆ ಮಾತಿಲ್ಲ. ಆದರೆ, ಅವರು ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಹೀಗಾಗಿ ನೀತಿ ನಿಯಮಗಳಿಗೆ ಬದ್ಧವಾಗಿ, ಯಾವ ಆಟಗಾರರಿಗೂ ಮೋಸವಾಗದಂತೆ ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ. ಇದರಲ್ಲಿ ವಿಷಾದದ ಮಾತೇ ಇಲ್ಲ,'' ಎಂದು ಹೇಳಿದ್ದಾರೆ.
ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಸತತ ಮೂರು ಸೋಲುಂಡು ಹೀನಾಯ ಸ್ಥಿತಿಯಲ್ಲಿದೆ. ಇತ್ತೀಚೆಗೆ ತಂಡದ ಅನುಭವಿ ವೇಗಿ ಡೇಲ್ ಸ್ಟೇನ್ ಕೂಡ ಗಾಯಗೊಂಡು ಟೂರ್ನಿಯಿಂದಲೇ ನಿರ್ಗಮಿಸುವಂಥಾಗಿರುವುದು ತಂಡಕ್ಕೆ ಭಾರಿ ಹೊಡೆತವನ್ನೇ ನೀಡಿದೆ.

ಎಬಿಡಿ ಟೆಸ್ಟ್ ಸಾಧನೆ
114 ಪಂದ್ಯ
8765 ರನ್
278* ಗರಿಷ್ಠ
50.66 ಸರಾಸರಿ
22 ಶತಕ
46 ಅರ್ಧಶತಕ

ಒಡಿಐನಲ್ಲಿ ಡಿ'ವಿಲಿಯರ್ಸ್ ಪ್ರದರ್ಶನ
228 ಪಂದ್ಯ
9577 ರನ್
176 ಗರಿಷ್ಠ
53.50 ಸರಾಸರಿ
25 ಶತಕ
53 ಅರ್ಧಶತಕ

ಅಂತಾರಾಷ್ಟ್ರೀಯ ಟಿ20ಯಲ್ಲಿ ಎಬಿ ಸಾಧನೆ
78 ಪಂದ್ಯ
1672 ರನ್
79* ಗರಿಷ್ಠ
26.12 ಸರಾಸರಿ
135.16 ಸ್ಟ್ರೈಕ್‌ರೇಟ್
10 ಅರ್ದಶತಕ

ಇಂಡಿಯನ್ ಪ್ರೀಮಿಯರ್ ಲೀಗ್ ಸಾಧನೆ
154 ಪಂದ್ಯ
4395 ರನ್
133* ಗರಿಷ್ಠ
39.95 ಸರಾಸರಿ
151.23 ಸ್ಟ್ರೈಕ್‌ರೇಟ್
03 ಶತಕ
33 ಅರ್ಧಶತಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications