
ಜೈಪುರ, ಜನವರಿ 1: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡ್ ರೀತಿಯಲ್ಲಿ ಔಟ್ ಮಾಡಿದ್ದರು. ಈ ಘಟನೆಯನ್ನು ರಾಜಸ್ಥಾನ್ ರಾಯಲ್ಸ್ ಸದ್ಯಕ್ಕೆ ಮರೆಯುವಂತಿಲ್ಲ. ಮಂಕದ್ ವಿಚಾರವನ್ನು ಮುಂದಿಟ್ಟುಕೊಂಡು ಆರ್ ಆರ್, ಅಶ್ವಿನ್ ಅವರ ಕಾಲೆಳೆದಿದೆ.
ರಾಜಸ್ಥಾನ್-ಪಂಜಾಬ್ ಮುಖಾಮುಖಿಯೊಂದರಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬಟ್ಲರ್ ಆರ್‌ಆರ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವುದರಲ್ಲಿದ್ದರು. ಆದರೆ ತಂಡದ ಗೆಲುವಿನ ಪಣ ತೊಟ್ಟಿದ್ದ ಅಶ್ವಿನ್, ಬಟ್ಲರ್ ಅವರನ್ನು ಮಂಕಡ್ ರೀತಿಯಲ್ಲಿ ಔಟ್ ಮಾಡಿದ್ದರು. ಪರಿಣಾಮ ರಾಜಸ್ಥಾನ್ ತಂಡ ಪಂದ್ಯವನ್ನು ಸೋತಿತ್ತು.
ಆಟದ ವೇಳೆ ಅಶ್ವಿನ್ ಅವರ ಈ ನಡೆ ಅನೇಕರ ಟೀಕೆಗೂ ಗುರಿಯಾಗಿತ್ತು. ಆದರೆ ಅಶ್ವಿನ್ ತಾನು ಮಾಡಿದ್ದನ್ನು ಪ್ರತೀಸಾರಿಯೂ ಸಮರ್ಥಿಸಿಕೊಂಡಿದ್ದರು. ಇತ್ತೀಚೆಗೆ ಕ್ರಿಕೆಟ್ ಅಭಿಮಾನಿಯೊಬ್ಬರು ಅಶ್ವಿನ್ ಅವರಲ್ಲಿ, 'ಈ ಐಪಿಎಲ್‌ನಲ್ಲಿ ನೀವು ಮಂಕಡ್ ಮಾಡಬಹುದಾದ ಸಂಭಾವ್ಯ ಬ್ಯಾಟ್ಸ್‌ಮನ್‌ಗಳು ಯಾರು?' ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು.
ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದ ಅಶ್ವಿನ್, 'ಅದು ಕ್ರೀಸ್‌ನಿಂದ ಹೊರಗೆ ಹೋಗುವ ಯಾರಾದರೂ ಆಗಿರಬಹುದು,' ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ಯಶ್ ರಾನೆ ಎಂಬವರು 'ಈ ಕ್ರಿಸ್‌ಮಸ್‌ಗೆ ಆರ್ ಅಶ್ವಿನ್‌ಗೆ ನನ್ನ ಉಡುಗೊರೆ ಇದು ಎಂದು 'ಮಂಕಡ್' ಪ್ರಿಂಟ್ ಇರುವ ಚೆಂಡುಗಳ (ಎಡಿಟೆಡ್) ಫೋಟೋ ಹಾಕಿಕೊಂಡಿದ್ದರು.
ರಾನೆ ಟ್ವೀಟನ್ನು ರೀ ಟ್ವೀಟ್ ಮಾಡಿರುವ ಆರ್‌ಆರ್, 'ಈ ಚೆಂಡುಗಳಿಗೆ ಯಾರು ಬಲಿಯಾಗಲಿದ್ದಾರೋ ಊಹಿಸಲು ಸಾಧ್ಯವಿಲ್ಲ' ಎಂಬರ್ಥದಲ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದೆ. ಅಂದ್ಹಾಗೆ ಕಳೆದ ವರ್ಷ ಪಂಜಾಬ್ ತಂಡದಲ್ಲಿದ್ದ ಸ್ಪಿನ್ನರ್ ಅಶ್ವಿನ್ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿಸಿದೆ.