ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಸರ್ಫರಾಜ್ ಖಾನ್ ತಮ್ಮ ಅತ್ಯುತ್ತಮ ಆಟ ಮುಂದುವರೆಸಿದ್ದಾರೆ. ಜನವರಿ 17 ರಿಂದ ಆರಂಭವಾದ ದೆಹಲಿ ವಿರುದ್ಧದ ರಣಜಿ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಶತಕ ಗಳಿಸಿ ಮಿಂಚಿದ್ದಾರೆ.
ದೆಹಲಿಯ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡದ ಸರ್ಫರಾಜ್ ಖಾನ್ 125 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಟಾಸ್ ಗೆದ್ದ ದೆಹಲಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ICC Test Ranking: ಐಸಿಸಿ ದೊಡ್ಡ ಎಡವಟ್ಟು: ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದ ಟೀಂ ಇಂಡಿಯಾ
ಆರಂಭಿಕ ಆಟಗಾರ ಪೃಥ್ವಿ ಶಾ 35 ಎಸೆತಗಳಲ್ಲಿ 40 ರನ್ ಗಳಿಸಿದರು. ನಂತರ ಮುಂಬೈ ದಿಢೀರ್ ಕುಸಿತ ಕಂಡಿತು. ಮುಶೀರ್ ಖಾನ್ 14 ರನ್, ಅರ್ಮಾನ್ ಜಾಫರ್ 2 ರನ್, ನಾಯಕ ಅಜಿಂಕ್ಯ ರಹಾನೆ 2 ರನ್ ಗಳಿಸಿ ಔಟಾದರು. ನಂತರ ಕ್ರೀಸ್‌ಗೆ ಬಂದ ಸರ್ಫರಾಜ್ ಖಾನ್ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರು.
155 ಎಸೆತಗಳನ್ನು ಎದುರಿಸಿದ ಸರ್ಫರಾಜ್ ಖಾನ್ 16 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 125 ರನ್ ಗಳಿಸಿದರು. ಪ್ರಸದ್ ಪವಾರ್ 25 ಮತ್ತು ಶಮ್ಸ್ ಮುಲಾನಿ 39 ರನ್ ಗಳಿಸುವ ಮೂಲಕ ಸರ್ಫರಾಜ್ ಖಾನ್‌ಗೆ ಸಾಥ್ ನೀಡಿದರು.
ಮೊದಲನೇ ದಿನದಾಟ ಮುಕ್ತಾಯದ ವೇಳೆಗೆ ಮುಂಬೈ ತಂಡ 293 ರನ್ ಗಳಿಸಿ ಆಲೌಟ್ ಆಯಿತು. ದೆಹಲಿ ಪರವಾಗಿ ಪ್ರಾಂಶು ವಿಜಯರನ್ 4 ವಿಕೆಟ್ ಪಡೆದು ಮಿಂಚಿದರು. ಯೋಗೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು. ದಿವಿಜ್ ಮೆಹ್ರಾ ಮತ್ತು ಹೃತಿಕ್ ಶೊಕೀನ್ ತಲಾ 1 ವಿಕೆಟ್ ಪಡೆದುಕೊಂಡರು.
ಭಾರತ ತಂಡಕ್ಕೆ ಆಯ್ಕೆಯಾಗದ ಸರ್ಫರಾಜ್
ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಸರ್ಫರಾಜ್ ಖಾನ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲಿಲ್ಲ. ಫೆಬ್ರವರಿ 9 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ಆಯ್ಕೆಯಾಗುವ ನಿರೀಕ್ಷೆ ಇತ್ತು.
ಆದರೆ, ಮೊದಲ ಎರಡು ಪಂದ್ಯಗಳಿಗೆ ಘೋಷಣೆಯಾದ ತಂಡದಲ್ಲಿ ಸರ್ಫರಾಜ್ ಖಾನ್ ಹೆಸರು ಇರಲಿಲ್ಲ, ಇದರಿಂದ ಕ್ರೀಡಾಭಿಮಾನಿಗಳು, ಮಾಜಿ ಕ್ರಿಕೆಟಿಗರು ಆಯ್ಕೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತ ತಂಡಕ್ಕೆ ಆಯ್ಕೆಯಾಗದಿದ್ದರೂ ಸರ್ಫರಾಜ್ ಖಾನ್ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3 ಮತ್ತು 4ನೇ ಟೆಸ್ಟ್ ಪಂದ್ಯಕ್ಕಾದರೂ ಸರ್ಫರಾಜ್ ಖಾನ್‌ರನ್ನು ಆಯ್ಕೆ ಮಾಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.