ಇಂಗ್ಲೆಂಡ್ ಟೆಸ್ಟ್ ಸರಣಿ : ಭಾರತದ ಆಟಗಾರರ ರಿಪೋರ್ಟ್ ಕಾರ್ಡ್

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕೇವಲ ಒಂದರಲ್ಲಿ ಗೆದ್ದು ಹಾಗೂಹೀಗೂ ವೈಟ್ ವಾಷ್ ಆಗುವುದನ್ನು ತಪ್ಪಿಸಿಕೊಂಡಿರುವ ಭಾರತೀಯ ಟೆಸ್ಟ್ ಕ್ರಿಕೆಟ್ ಪಟುಗಳು, ವಿದೇಶಿ ನೆಲದಲ್ಲಿ ತಮ್ಮ ಸಾಮರ್ಥ್ಯ ತೋರುವ ಗೋಲ್ಡನ್ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ.

ಏಷ್ಯಾಕಪ್ 2018 ಕದನ ಮುನ್ನೋಟ, ಎಲ್ಲಾ ತಂಡಗಳ ವಿವರ

ಬೌಲರ್ ಗಳು ಒಂದು ಮಟ್ಟಕ್ಕೆ ಯಶಸ್ವಿಯಾದರೂ, ಬ್ಯಾಟ್ಸ್ ಮನ್ ಗಳು 'ಸ್ವಿಂಗ್'ಗೆ ತಕ್ಕಂತೆ ಆಡುವಲ್ಲಿ ತಾವೆಷ್ಟು ದುರ್ಬಲರು ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಭಾರತೀಯರಿಂದ ಇಂಥ ಕಳಪೆ ಆಟ ಅನಿರೀಕ್ಷಿತವಾಗಿತ್ತು, ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ತವರು ನೆಲದಲ್ಲಿ ಮತ್ತು ಕೆಲ ವಿದೇಶಿ ನೆಲದಲ್ಲಿ ಅತ್ಯುತ್ತಮವಾಗಿಯೇ ಆಡುತ್ತಿದ್ದರು.

ಸರಣಿಯಲ್ಲಿ 0-2ರಿಂದ ಹಿಂದುಳಿದ ಮೇಲೆ ಮೂರನೇ ಟೆಸ್ಟನ್ನು ಗೆದ್ದು ವಿರಾಟ್ ಕೊಹ್ಲಿ ಪಡೆ, ತಮ್ಮಲ್ಲಿಯೂ ಗೆಲ್ಲುವ ಸಾಮರ್ಥ್ಯ ಇದೆ ಎಂದು ತೋರಿ ಭಾರೀ ಆಶಾಭಾವನೆ ಹುಟ್ಟುಹಾಕಿದ್ದರು. ಆಗ ಭಾರತದ ತಂಡದ ಮೇಲೆ ಪ್ರಶಂಸೆಯ ಸುರಿಮಳೆಯಾಗಿತ್ತು. ಆದರೆ, ನಂತರ ಇನ್ನೆರಡು ಟೆಸ್ಟ್ ಗಳಲ್ಲಿ ನಡೆದದ್ದು ಆಘಾತಕರ ಅಷ್ಟೇ ಅಲ್ಲ, ತೀರ ನಿರಾಶಾದಾಯಕ.

ಐಸಿಸಿ Ranking: ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಸ್ಥಾನದಲ್ಲಿ ವಿರಾಟ್ ಕೊಹ್ಲಿ

ನಾಲ್ಕನೇ ಟೆಸ್ಟ್ ನಲ್ಲಿ ಸೋತು ಸರಣಿಯನ್ನು ಇಂಗ್ಲೆಂಡಿಗೆ ಒಪ್ಪಿಸಿದ ನಂತರ ಐದನೇ ಟೆಸ್ಟ್ ನಲ್ಲಿ ಯಾವುದೇ ಉತ್ಸಾಹ ಉಳಿದಿರಲಿಲ್ಲ. ಆದರೆ, ಕನಿಷ್ಠ ಕಡೆಯ ಟೆಸ್ಟನ್ನಾದರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳಲು, ಭಾರತೀಯ ಕ್ರಿಕೆಟ್ ಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಿಸಲಿ, ಸರಣಿಯನ್ನು ಸ್ವಲ್ಪವಾದರೂ ತೃಪ್ತಿಕರವಾಗಿ ಮುಗಿಸಲಿ ಎಂದು ನಿರೀಕ್ಷಿಸಲಾಗಿತ್ತು.

ಆದಿದ್ದೇನು? ಅದೇ ರಾಗ, ಅದೇ ಹಾಡು. ಕಡೆಯ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಮತ್ತು ರಿಶಬ್ ಪಂತ್ ಅದ್ಭುತವಾಗಿ ಆಡಿ, ದ್ವಿಶತಕ ಭಾಗೀದಾರಿಕೆಯಲ್ಲಿ ಹಲವಾರು ದಾಖಲೆಗಳನ್ನು ಧೂಳಿಪಟ ಮಾಡಿದರೂ ಭಾರತವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಇನ್ನೇನು ಗೆದ್ದೇ ಬಿಡುತ್ತಾರೆ ಎಂಬ ಆಸೆ ಹುಟ್ಟಿಸಿದ್ದರೂ ಕಡೆಗೆ 118 ರನ್ ಗಳಿಂದ ಸೋಲುವಂತಾಯಿತು. ವಿರಾಟ್ ಕೊಹ್ಲಿ ಅವರನ್ನು ಹೊರತುಪಡಿಸಿ ಬೇರೆ ಯಾವ ಆಟಗಾರನೂ ನಿರೀಕ್ಷಿತ ಮಟ್ಟದಲ್ಲಿ ಆಡಲಿಲ್ಲ.

ಇಂಗ್ಲೆಂಡ್ ಎದುರು ಟೆಸ್ಟ್ ಸರಣಿ ಸೋತರೂ Rankingನಲ್ಲಿ ಭಾರತವೇ ನಂ.1

ಭಾರತ ತಂಡದ ಎಲ್ಲ ಆಟಗಾರರ ಪ್ರೊಗ್ರೆಸ್ ರಿಪೋರ್ಟ್ ಇಲ್ಲಿದೆ.

ಶಿಖರ್ ಧವನ್ : 4 ಪಂದ್ಯ, 8 ಇನ್ನಿಂಗ್ಸ್, 162 ರನ್, 44 ಗರಿಷ್ಠ, 20.25 ಸರಾಸರಿ

ಶಿಖರ್ ಧವನ್ : 4 ಪಂದ್ಯ, 8 ಇನ್ನಿಂಗ್ಸ್, 162 ರನ್, 44 ಗರಿಷ್ಠ, 20.25 ಸರಾಸರಿ

ಈ ಸರಣಿಗಿಂತ ಮೊದಲು ಅತ್ಯುತ್ತಮ ಲಯ ಕಂಡುಕೊಂಡಿದ್ದ ಎಡಗೈ ದಾಂಡಿಗ ಶಿಖರ್ ಧವನ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ದಕ್ಷಿಣ ಆಫ್ರಿಕಾದ ವಿರುದ್ಧ ಅವರು ತಮ್ಮ ಫಾರಂ ಕಂಡುಕೊಂಡಿದ್ದರು. ಐಪಿಎಲ್ 2018ರಲ್ಲಿ ಸಾಕಷ್ಟು ರನ್ ಗಳಿಸಿ, ಈ ಸರಣಿಗೂ ಮೊದಲಿನ ಅಫ್ಘಾನಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದರು ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಶಿಖರ್. ಆದರೆ, ಇಡೀ ಇಂಗ್ಲೆಂಡ್ ಸರಣಿಯಲ್ಲಿ ಅವರು ತಮ್ಮತನ ಕಂಡುಕೊಳ್ಳಲೇ ಇಲ್ಲ. ಏಕದಿನ ಸರಣಿಯಲ್ಲಿ ಸೋತಿದ್ದಲ್ಲದೆ, ಟೆಸ್ಟ್ ನಲ್ಲಿಯೂ ವಿಫಲರಾದರು.

ಸೌದಂಪ್ಟನ್ ನಲ್ಲಿ ನಡೆದ 4ನೇ ಟೆಸ್ಟ್ ನಲ್ಲಿ ಕೆಎಲ್ ರಾಹುಲ್ ಜೊತೆ 50 ರನ್ ಜೊತೆಯಾಟ ಆಡಿದ್ದು ಬಿಟ್ಟರೆ, ಶಿಖರ್ ಧವನ್ ತಲೆತಗ್ಗಿಸಿಕೊಂಡು ಬೇಗನೆ ಪೆವಿಲಿಯನ್ನಿಗೆ ಮರಳಿದ್ದೇ ಹೆಚ್ಚು. ಇದರಿಂದಾಗಿ ಮುಂದಿನ ಮಹತ್ವದ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾದ ವಿರುದ್ಧದ ಸರಣಿಗೆ ಇವರನ್ನು ಪರಿಗಣಿಸುವ ಮುನ್ನ ಆಯ್ಕೆದಾರರು ವಿಚಾರ ಮಾಡುವಂತಾಗಿದೆ.

ಕೆಎಲ್ ರಾಹುಲ್ : 5 ಪಂದ್ಯ, 10 ಇನ್ನಿಂಗ್ಸ್, 299 ರನ್, 149 ಗರಿಷ್ಠ, 29.90 ಸರಾಸರಿ

ಕೆಎಲ್ ರಾಹುಲ್ : 5 ಪಂದ್ಯ, 10 ಇನ್ನಿಂಗ್ಸ್, 299 ರನ್, 149 ಗರಿಷ್ಠ, 29.90 ಸರಾಸರಿ

ಕಡೆಯ ಟೆಸ್ಟ್ ಪಂದ್ಯದ ಕಡೆಯ ಇನ್ನಿಂಗ್ಸ್ ನಲ್ಲಿ, ಕರ್ನಾಟಕದ ಪರ ಆಡುವ ಕೆಎಲ್ ರಾಹುಲ್ ಅವರು 149 ರನ್ ಬಾರಿಸಿರದಿದ್ದರೆ ಶಿಖರ್ ಧವನ್ ಗಿಂತಲೂ ಕಳಪೆಯಾಗಿ ಆಡಿದ ಕುಖ್ಯಾತಿಗೆ ಗುರಿಯಾಗಬೇಕಾಗಿತ್ತು. ಇಡೀ ಟೂರ್ ನಲ್ಲಿ 9 ಇನ್ನಿಂಗ್ಸ್ ಗಳಲ್ಲಿ ಅವರು ಗಳಿಸಿದ್ದು ಕೇವಲ 150 ರನ್ ಮಾತ್ರ. ಕಡೆಯ ಇನ್ನಿಂಗ್ಸ್ ನಿಂದಾಗಿ ಅವರ ಮೇಲೆ ಆಶಾಭಾವನೆ ಇಟ್ಟುಕೊಳ್ಳುವಂತಾಗಿದೆ.

ಆರಂಭಿಕರಾದ ಶಿಖರ್ ಧವನ್, ವಿಜಯ್ ಮುರಳಿಯಂತೆ ಸ್ವಿಂಗ್ ಆಗುತ್ತಿದ್ದ ವೇಗದ ಬೌಲ್ ಗಳನ್ನು ಎದುರಿಸುವಲ್ಲಿ ಕೆಎಲ್ ರಾಹುಲ್ ಭಾರೀ ತಿಣುಕಾಡಿದ್ದಾರೆ ಮತ್ತು ಉತ್ತಮ ಆರಂಭ ಒದಗಿಸುವಲ್ಲಿ ಸೋತಿದ್ದಾರೆ. ಅವರ ಸ್ಕೋರ್ ಗಳು ಹೀಗಿವೆ : 4, 13, 8, 10, 23, 36, 19, 0, 37 ಮತ್ತು 149. ಮ್ಯಾಂಚೆಸ್ಟರ್ ನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಅಜೇಯ 101 ರನ್ ಗಳಿಸಿದ್ದ ರಾಹುಲ್ ತಮ್ಮ ಮೇಲೆ ಇಟ್ಟಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾರೆ.

ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ!

ಮುರಳಿ ವಿಜಯ್ : 2 ಪಂದ್ಯ, 4 ಇನ್ನಿಂಗ್ಸ್, 26 ರನ್, 20 ಗರಿಷ್ಠ, 6.50 ಸರಾಸರಿ

ಮುರಳಿ ವಿಜಯ್ : 2 ಪಂದ್ಯ, 4 ಇನ್ನಿಂಗ್ಸ್, 26 ರನ್, 20 ಗರಿಷ್ಠ, 6.50 ಸರಾಸರಿ

ತಾಂತ್ರಿಕವಾಗಿ ಉತ್ತಮವಾಗಿ ಆಡುವ ಮುರಳಿ ವಿಜಯ್ ಅವರು ಈ ಸರಣಿಯನ್ನು ಜೀವಮಾನದಲ್ಲಿ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ, ಆದರೆ, ಅವರ ಅಭಿಮಾನಿಗಳೂ ಮರೆಯುವುದಿಲ್ಲ. ಎರಡು ಟೆಸ್ಟ್ ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 26 ರನ್, ಅದರಲ್ಲಿ ಇನ್ನಿಂಗ್ಸೊಂದರಲ್ಲಿ ಗಳಿಸಿದ ಗರಿಷ್ಠ ಮೊತ್ತ 20. ಭಾರತಕ್ಕೆ ಉತ್ತಮ ಆರಂಭ ಸಿಗದಿರುವುದಕ್ಕೆ ವಿಜಯ್ ಮುರಳಿ ಅವರ ಹೀನಾಯ ಫಾರಂ ಕೂಡ ಕಾರಣವಾಯಿತು.

ಈ ಕಾರಣದಿಂದಾಗಿ ಅವರನ್ನು ಮೂರನೇ ಟೆಸ್ಟ್ ಗೆ ವಿಶ್ರಾಂತಿ ಕೊಟ್ಟಿದ್ದು ಮಾತ್ರವಲ್ಲ, ಇನ್ನುಳಿದ ಸರಣಿಗೆ ಅವರನ್ನು ಗಣನೆಗೆ ಕೂಡ ತೆಗೆದುಕೊಳ್ಳಲಿಲ್ಲ. ವಿಜಯ್ ಮುರಳಿ ಅವರು ಪ್ರಾದೇಶಿಕ ಕ್ರಿಕೆಟ್ ಗೆ ಮರಳಿ ತಮ್ಮ ಲಯವನ್ನು ಮರುಪಡೆದುಕೊಳ್ಳುವುದು ಒಳಿತು.

ಕನ್ನಡಿಗ ಕರುಣ್ ನಾಯರ್‌ ಮಾಡಿದ ತಪ್ಪೇನು?: ಅವಕಾಶ ನೀಡದ್ದಕ್ಕೆ ಗವಾಸ್ಕರ್ ಕಿಡಿ

ಚೇತೇಶ್ವರ ಪೂಜಾರಾ : 4 ಪಂದ್ಯ, 8 ಇನ್ನಿಂಗ್ಸ್, 278 ರನ್, 132* ಗರಿಷ್ಠ, 39.71 ಸರಾಸರಿ

ಚೇತೇಶ್ವರ ಪೂಜಾರಾ : 4 ಪಂದ್ಯ, 8 ಇನ್ನಿಂಗ್ಸ್, 278 ರನ್, 132* ಗರಿಷ್ಠ, 39.71 ಸರಾಸರಿ

ಮೊದಲ ಟೆಸ್ಟ್ ನಲ್ಲಿ ಕೇವಲ 31ರನ್ ಗಳಿಂದ ಭಾರತ ಸೋತ ನಂತರ, ಕೌಂಟಿಯಲ್ಲಿ ಆಡಿ ಅದ್ಭುತ ಲಯ ಕಂಡುಕೊಂಡಿದ್ದ ಸೌರಾಷ್ಟ್ರದ ಚೇತೇಶ್ವರ ಪೂಜಾರಾ ಅವರನ್ನು ಆಯ್ಕೆ ಮಾಡದಿದ್ದಕ್ಕೆ ವಿರಾಟ್ ಕೊಹ್ಲಿ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಕಾರಣದಿಂದಾಗಿ ಅವರನ್ನು ಎರಡನೇ ಟೆಸ್ಟ್ ಗೆ ಆಯ್ಕೆ ಮಾಡಲಾಯಿತು. ಆದರೆ, ಅವರು ಮೊದಲ ಇನ್ನಿಂಗ್ಸ್ ನಲ್ಲಿ ದುರಾದೃಷ್ಟಕರ ರೀತಿಯಲ್ಲಿ ರನೌಟ್ ಆದರು.

ಮುಂದಿನೆರಡು ಇನ್ನಿಂಗ್ಸ್ ಗಳಲ್ಲಿ ಅತ್ಯುತ್ತಮವಾಗಿ ಆಡದಿದ್ದರೂ, ನಾಟಿಂಗ್ಹ್ಯಾಮ್ ಟೆಸ್ಟ್ ನಲ್ಲಿ 72 ರನ್ ಗಳಿಸಿ, ತಾವೆಂಥ ನಂಬಿಗಸ್ತ ಬ್ಯಾಟ್ಸ್ ಮನ್ ಎಂದು ತೋರಿಸಿಕೊಟ್ಟರು. ಆ ಪಂದ್ಯವನ್ನು ಭಾರತ 203 ರನ್ ಗಳಿಂದ ಗೆದ್ದುಕೊಂಡಿತು. ಅದೇ ಫಾರಂ ಮುಂದುವರಿಸಿದ ಅವರು ಸೌದಂಪ್ಟನ್ ಟೆಸ್ಟ್ ನಲ್ಲಿ ಭರ್ಜರಿ ಅಜೇಯ ಶತಕ (132) ಗಳಿಸಿ, ತಮ್ಮ ಮೇಲಿಟ್ಟಿದ್ದ ನಂಬಿಕೆ ಉಳಿಸಿಕೊಂಡರು. ಆದರೆ, ದುರಾದೃಷ್ಟವಶಾತ್ ಆ ಪಂದ್ಯವನ್ನು ಭಾರತ ಸೋತಿತು. ಕಡೆಯ ಟೆಸ್ಟ್ ನಲ್ಲಿ ಅವರು ಮತ್ತೆ ವಿಫಲರಾದರು.

ವಿರಾಟ್ ಕೊಹ್ಲಿ : 5 ಪಂದ್ಯ, 10 ಇನ್ನಿಂಗ್ಸ್, 593 ರನ್, 149 ಗರಿಷ್ಠ, 59.30 ಸರಾಸರಿ

ವಿರಾಟ್ ಕೊಹ್ಲಿ : 5 ಪಂದ್ಯ, 10 ಇನ್ನಿಂಗ್ಸ್, 593 ರನ್, 149 ಗರಿಷ್ಠ, 59.30 ಸರಾಸರಿ

ಇಡೀ ಸರಣಿಯನ್ನು ಪರಿಗಣಿಸಿದರೆ ನಾಯಕ ವಿರಾಟ್ ಕೊಹ್ಲಿ ಅವರಿಗೆ ನಿರಾಶಾದಾಯಕವಾಗಿದ್ದರೂ, ಹಲವಾರು ನಿರ್ಧಾರಗಳಿಂದಾಗಿ ಅವರು ಟೀಕೆಗೆ ಗುರಿಯಾಗಿದ್ದರೂ, ವೈಯಕ್ತಿಕವಾಗಿ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಮಾನಸಿಕ ಸ್ಥೈರ್ಯದಿಂದ ಎದುರಿಸಿದವರು ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತ್ರ.

2014ರಲ್ಲಿ ವಿಫಲರಾಗಿದ್ದರಿಂದ ಎಲ್ಲರ ಗಮನ ವಿರಾಟ್ ಕೊಹ್ಲಿ ಮೇಲಿತ್ತು. ಇಂಗ್ಲೆಂಡ್ ನ ಗುಣಮಟ್ಟದ ಬೌಲಿಂಗ್ ಅನ್ನು ಅತ್ಯಂತ ಚಾಕಚಕ್ಯತೆಯಿಂದ ಎದುರಿಸಿ ಆಕ್ರಮಣಕಾರಿಯಾಗಿ ಆಟವಾಡಿದ ವಿರಾಟ್ ತಮ್ಮ ಟೀಕಾರಾರರ ಬಾಯಿಯನ್ನು ಮುಚ್ಚಿಸುವಲ್ಲಿ ಸಫಲರಾದರು. ಆದರೆ, ನಾಯಕರಾಗಿ ತಂಡವನ್ನು ಮುನ್ನಡೆಸುವಲ್ಲಿ ವಿಫಲರಾದರು ಎಂಬ ಟೀಕೆಗಳು ಕೇಳಿಬರುತ್ತಿವೆ.

ಹೆಚ್ಚೂಕಡಿಮೆ 600 ರನ್ ಗಳಿಸಿದ ವಿರಾಟ್, ಎರಡು ಸೆಂಚುರಿ ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಎಲ್ಲಕ್ಕಿಂತ ಹೆಚ್ಚಾಗಿ, ಈ ಸರಣಿಯನ್ನು ಜೇಮ್ಸ್ ಆಂಡರ್ಸನ್ ಮತ್ತು ವಿರಾಟ್ ಕೊಹ್ಲಿ ನಡುವಿನ ಕದನವೆಂದೇ ಪರಿಗಣಿಸಲಾಗಿತ್ತು. ಆದರೆ, ಇಬ್ಬರ ನಡುವಿನ ಈ ಯುದ್ಧವನ್ನು ಗೆದ್ದವರು ವಿರಾಟ್ ಕೊಹ್ಲಿ. ಜೇಮ್ಸ್ ಆಂಡರ್ಸನ್ ಅವರಿಗೆ ಯಾವುದೇ ಇನ್ನಿಂಗ್ಸ್ ನಲ್ಲಿಯೂ ವಿರಾಟ್ ವಿಕೆಟ್ ಒಪ್ಪಿಸಲಿಲ್ಲ.

ಅಜಿಂಕ್ಯಾ ರಹಾನೆ : 5 ಪಂದ್ಯ, 10 ಇನ್ನಿಂಗ್ಸ್, 257 ರನ್, 81 ಗರಿಷ್ಠ, 25.70 ಸರಾಸರಿ

ಅಜಿಂಕ್ಯಾ ರಹಾನೆ : 5 ಪಂದ್ಯ, 10 ಇನ್ನಿಂಗ್ಸ್, 257 ರನ್, 81 ಗರಿಷ್ಠ, 25.70 ಸರಾಸರಿ

ವಿದೇಶಿ ಮಣ್ಣಿನಲ್ಲಿ ತಮ್ಮ ತಾಂತ್ರಿಕ ಕೌಶಲ್ಯದಿಂದ ಉತ್ತಮವಾಗಿ ಆಡುವ ಅಜಿಂಕ್ಯಾ ರಹಾನೆ ಅವರ ಕಳಪೆ ಸಾಧನೆಯಿಂದಾಗಿ ಈ ಬಾರಿ ಭಾರೀ ನಿರಾಶೆ ಮೂಡಿಸಿದ್ದಾರೆ. ಈ ಬಾರಿ ಯಾವುದೇ ಸಾಧನೆ ತೋರದೆ, ಇನ್ನಿಂಗ್ಸ್ ಕಟ್ಟುವಲ್ಲಿ ಹೀನಾಯವಾಗಿ ಸೋತಿದ್ದಾರೆ ಅಜಿಂಕ್ಯಾ. ಭಾರತಕ್ಕೆ ಯಶ ಸಿಗಬೇಕಾದರೆ ಅಜಿಂಕ್ಯಾ ರಹಾನೆ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಅವರ ಮೇಲೆ ಭಾರೀ ವಿಶ್ವಾಸವನ್ನೂ ಇಟ್ಟುಕೊಳ್ಳಲಾಗಿತ್ತು. ಗರಿಷ್ಠ 81 ರನ್ ಸೇರಿದಂತೆ ಎರಡು ಅರ್ಧ ಸೆಂಚುರಿ ಬಾರಿಸಿದರೂ, ಭಾರತ ಗೆಲ್ಲುವಂತೆ ಯಾವ ಇನ್ನಿಂಗ್ಸ್ ನಲ್ಲಿಯೂ ಅವರು ಆಟವಾಡಲಿಲ್ಲ.

ಹಾರ್ದಿಕ್ ಪಾಂಡ್ಯ : 4 ಪಂದ್ಯ, 10 ಇನ್ನಿಂಗ್ಸ್, 164 ರನ್, 52* ಗರಿಷ್ಠ, 23.42 ಸರಾಸರಿ, 10 ವಿಕೆಟ್

ಹಾರ್ದಿಕ್ ಪಾಂಡ್ಯ : 4 ಪಂದ್ಯ, 10 ಇನ್ನಿಂಗ್ಸ್, 164 ರನ್, 52* ಗರಿಷ್ಠ, 23.42 ಸರಾಸರಿ, 10 ವಿಕೆಟ್

ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದಾಗಿ ಹಲವಾರು ಬಾರಿ ಗಮನ ಸೆಳೆದಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಈ ಸರಣಿಯನ್ನು ನಿರಾಶೆ ಮೂಡಿಸಿದ್ದಾರೆ. ಭಾರತ ಗೆದ್ದ ಮೂರನೇ ಟೆಸ್ಟ್ ನಲ್ಲಿ 5 ವಿಕೆಟ್ ಮತ್ತು ಅರ್ಧ ಸೆಂಚುರಿ ಬಾರಿಸಿದ್ದೇ ಅವರ ಅತ್ಯುತ್ತಮ ಸಾಧನೆ. ಇದಕ್ಕಾಗಿ ಅವರಿಗೆ ಪಂದ್ಯದ ಪುರುಷೋತ್ತಮ ಪ್ರಶಸ್ತಿ ಸಿಗಬೇಕಾಗಿತ್ತು. ಆದರೆ, ಅದು ವಿರಾಟ್ ಕೊಹ್ಲಿ ಪಾಲಾಯಿತು.

ಉಳಿದ ಪಂದ್ಯಗಳಲ್ಲಿ ಅವರು ಬೌಲರ್ ಆಗಿಯೂ ಮಿಂಚಲಿಲ್ಲ, ಬ್ಯಾಟಿಂಗ್ ನಲ್ಲಿಯೂ ಅಂತಹ ಸಾಧನೆ ತೋರಲಿಲ್ಲ. ಫಿಫ್ತ್ ಡೌನ್ ಕ್ರಮಾಂಕದಲ್ಲಿ 6ನೇ ಬ್ಯಾಟ್ಸ್ ಮನ್ ಆಗಿ ಕ್ರೀಸ್ ಗೆ ಇಳಿಯುವ ಹಾರ್ದಿಕ್ ಪಾಂಡ್ಯ, ತಂಡಕ್ಕೆ ತೀರ ಅವಶ್ಯಕತೆ ಇದ್ದಾಗ ಯಾವ ಇನ್ನಿಂಗ್ಸ್ ನಲ್ಲಿಯೂ ಉತ್ತಮವಾಗಿ ಆಡಲೇ ಇಲ್ಲ. ಈ ಕಾರಣದಿಂದಾಗಿ ಅವರ ಬದಲಿಗೆ ಹನುಮ ವಿಹಾರಿಯನ್ನು ಆಡಿಸಲಾಯಿತು. ಅವರು ಮೊದಲ ಪಂದ್ಯದಲ್ಲೇ ಅರ್ಧ ಸೆಂಚುರಿ ಬಾರಿಸಿ ಗಮನ ಸೆಳೆದರು.

ಹನುಮ ವಿಹಾರಿ : 1 ಪಂದ್ಯ, 2 ಇನ್ನಿಂಗ್ಸ್, 56 ರನ್, 56 ಗರಿಷ್ಠ, 28 ಸರಾಸರಿ, 3 ವಿಕೆಟ್

ಹನುಮ ವಿಹಾರಿ : 1 ಪಂದ್ಯ, 2 ಇನ್ನಿಂಗ್ಸ್, 56 ರನ್, 56 ಗರಿಷ್ಠ, 28 ಸರಾಸರಿ, 3 ವಿಕೆಟ್

ಟೆಸ್ಟ್ ಕರಿಯರ್ ನ ಪ್ರಥಮ ಪಂದ್ಯದಲ್ಲೇ ಅರ್ಧ ಸೆಂಚುರಿ ಬಾರಿಸಿ ಹನುಮ ವಿಹಾರಿ ಅವರು ಮಿಂಚಿದ್ದಾರೆ. ವಿಶ್ವದ ಅತ್ಯುನ್ನತ ಬೌಲರ್ ಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟಾರ್ಟ್ ಬ್ರಾಡ್ ಅವರು ಒಬ್ಬೊಬ್ಬರನ್ನೇ ಪೆವಿಲಿಯನ್ನಿಗೆ ಅಟ್ಟುತ್ತಿದ್ದಾಗ ಕ್ರೀಸ್ ಮೇಲೆ ಗಟ್ಟಿಯಾಗಿ ನಿಂತು ದಿಟ್ಟತನದಿಂದ ಆಡಿದವರು ಹನುಮ ವಿಹಾರಿ.

ಎರಡನೇ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್ ಕೂಡ ಕಬಳಿಸಿದ ಅವರು, ಅಲಸ್ಟೇರ್ ಕುಕ್ ಮತ್ತು ಜೋ ರೂಟ್ ಅವರ ಸುದೀರ್ಘ ಇನ್ನಿಂಗ್ಸ್ ಕೂಡ ಕೊನೆಗೊಳಿಸಿದರು. ಹನುಮ ವಿಹಾರಿಯಿಂದಾಗಿ ಹಾರ್ದಿಕ್ ಪಾಂಡ್ಯ ತಮ್ಮ ಆಟವನ್ನು ಉತ್ತಮಪಡಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ, ಬೆಂಚ್ ನಲ್ಲಿ ಕೂಡ ಬೇಕಾಗುತ್ತದೆ ಅಥವಾ ಫಾರಂ ಕಂಡುಕೊಳ್ಳಲು ಡೊಮೆಸ್ಟಿಕ್ ಕ್ರಿಕೆಟ್ ಗೆ ಮರಳಬೇಕಾಗುತ್ತದೆ.

5ನೇ ಟೆಸ್ಟ್ ಗೆ ಭಾರತ ತಂಡ ಸೇರಿಕೊಂಡರಲ್ಲ, ಯಾರೀ ಹನುಮ ವಿಹಾರಿ?

ಆರ್ ಅಶ್ವಿನ್ : 4 ಪಂದ್ಯ, 8 ಇನ್ನಿಂಗ್ಸ್, 126 ರನ್, 33 ಗರಿಷ್ಠ, 21 ಸರಾಸರಿ, 11 ವಿಕೆಟ್

ಆರ್ ಅಶ್ವಿನ್ : 4 ಪಂದ್ಯ, 8 ಇನ್ನಿಂಗ್ಸ್, 126 ರನ್, 33 ಗರಿಷ್ಠ, 21 ಸರಾಸರಿ, 11 ವಿಕೆಟ್

ಇತ್ತೀಚಿನ ವರ್ಷಗಳಲ್ಲಿ ರವಿಚಂದ್ರನ್ ಅಶ್ವಿನ್ ಅವರು ಬೌಲರ್ ಆಗಿ ಮಾತ್ರವಲ್ಲ, ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿಯೂ ಆಸರೆಯಾಗಿದ್ದಾರೆ. ಆದರೆ, ಈ ಸರಣಿಯಲ್ಲಿ ಅವರು ಅಲ್ಲಲ್ಲಿ ಮಿಂಚಿದರೂ, ಯಾವುದೇ ಪಂದ್ಯ ಗೆಲ್ಲಿಸಿಕೊಡುವ ಹಾಗಿ ಆಡಲೇ ಇಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ವಿಫಲವಾಗಿ ಭಾರೀ ನಿರಾಶೆ ಮೂಡಿಸಿದರು. ಅವರು ಒಟ್ಟಾರೆ 8 ಇನ್ನಿಂಗ್ಸ್ ಗಳಲ್ಲಿ ಕೇವಲ 11 ವಿಕೆಟ್ ಕಿತ್ತಿದ್ದರೆ, ಗಳಿಸಿದ್ದು ಬರೀ 126 ರನ್.

ಮೊದಲ ಪಂದ್ಯದಲ್ಲಿ 62 ರನ್ ನೀಡಿ 4 ವಿಕೆಟ್ ಕಬಳಿಸಿದ್ದ ಆರ್ ಅಶ್ವಿನ್ ತಮ್ಮ ಸಾಧನೆಯನ್ನು ಇಡೀ ಟೂರ್ನಿಪೂರ್ತಿ ತೋರುತ್ತಾರೆಂದು ಭಾವಿಸಲಾಗಿತ್ತು. ಆದರೆ, ಮುಂದೆ ಆಗಿದ್ದೇ ಬೇರೆ. ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಅಶ್ವಿನ್ ಅವರನ್ನು ದಿಟ್ಟತನದಿಂದ ಎದುರಿಸಿದರಲ್ಲದೆ, ಬ್ಯಾಟಿಂಗ್ ನಲ್ಲಿಯೂ ಮಿಂಚಲು ಇಂಗ್ಲೆಂಡ್ ಬೌಲರ್ ಗಳು ಅವಕಾಶ ಕೊಡಲಿಲ್ಲ.

ರವೀಂದ್ರ ಜಡೇಜ : 1 ಪಂದ್ಯ, 2 ಇನ್ನಿಂಗ್ಸ್, 99 ರನ್, 86* ಗರಿಷ್ಠ, 49 ಸರಾಸರಿ, 7 ವಿಕೆಟ್

ರವೀಂದ್ರ ಜಡೇಜ : 1 ಪಂದ್ಯ, 2 ಇನ್ನಿಂಗ್ಸ್, 99 ರನ್, 86* ಗರಿಷ್ಠ, 49 ಸರಾಸರಿ, 7 ವಿಕೆಟ್

ರವಿಚಂದ್ರನ್ ಅಶ್ವಿನ್ ಅವರು ಇದ್ದಿದ್ದರಿಂದ ರವೀಂದ್ರ ಜಡೇಜ ಅವರನ್ನು ವಿರಾಟ್ ಕೊಹ್ಲಿ ಕಡೆಗಣಿಸಿದ್ದರು. ಆದರೆ, ಅಶ್ವಿನ್ ವಿಫಲರಾಗಿದ್ದರಿಂದ ರವೀಂದ್ರ ಜಡೇಜ ಅವರನ್ನು ತೆಗೆದುಕೊಂಡ ಪಂದ್ಯದಲ್ಲಿಯೇ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದರು. ಕಡೆಯ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 86 ರನ್ ಗಳಿಸಿ ಗರಿಷ್ಠ ರನ್ ಗಳಿಸಿದ ಭಾರತದ ಆಟಗಾರ ಅನಿಸಿದರು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಜಡೇಜ 7 ವಿಕೆಟ್ ಕೂಡ ಕಬಳಿಸಿದರು.

ಇಶಾಂತ್ ಶರ್ಮಾ : 5 ಪಂದ್ಯ, 10 ಇನ್ನಿಂಗ್ಸ್, 151 ಓವರ್ಸ್, 18 ವಿಕೆಟ್, 5/51 ಅತ್ಯುತ್ತಮ

ಇಶಾಂತ್ ಶರ್ಮಾ : 5 ಪಂದ್ಯ, 10 ಇನ್ನಿಂಗ್ಸ್, 151 ಓವರ್ಸ್, 18 ವಿಕೆಟ್, 5/51 ಅತ್ಯುತ್ತಮ

ವೇಗದ ಪಿಚ್ ಗಳ ಲಾಭವನ್ನು ಪಡೆದ ಲಂಬೂ ಇಶಾಂತ್ ಶರ್ಮಾ ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಭಾರತದ ಪರ ಗರಿಷ್ಠ ವಿಕೆಟ್ ಪಡೆದಿದ್ದಲ್ಲದೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಪರದಾಡುವಂತೆ ಮಾಡಿದರು. ತಮ್ಮೆಲ್ಲ ಅನುಭವವನ್ನು ಬಳಸಿದರೂ ಇಶಾಂತ್ ಶರ್ಮಾ ಅವರು ಪಂದ್ಯಗಳನ್ನು ಗೆಲ್ಲಿಸುವಲ್ಲಿ ಸಹಕಾರಿಯಾಗಲಿಲ್ಲ. ಏಕೆಂದರೆ, ಇನ್ನೊಂದು ಬದಿಯಿಂದ ಅವರಿಗೆ ಅಷ್ಟು ಬೆಂಬಲ ಸಿಗಲಿಲ್ಲ.

ಜಸ್ಪ್ರಿತ್ ಬೂಮ್ರಾ : 3 ಪಂದ್ಯ, 6 ಇನ್ನಿಂಗ್ಸ್, 131 ಓವರ್ಸ್, 14 ವಿಕೆಟ್, 5/85 ಅತ್ಯುತ್ತಮ

ಜಸ್ಪ್ರಿತ್ ಬೂಮ್ರಾ : 3 ಪಂದ್ಯ, 6 ಇನ್ನಿಂಗ್ಸ್, 131 ಓವರ್ಸ್, 14 ವಿಕೆಟ್, 5/85 ಅತ್ಯುತ್ತಮ

ಮೊದಲೆರಡು ಪಂದ್ಯಗಳನ್ನು ಅವರು ಆಡದಿದ್ದರೂ ಮುಂದಿನ ಮೂರು ಪಂದ್ಯಗಳಲ್ಲಿ ಜಸ್ಪ್ರಿತ್ ಬೂಮ್ರಾ ಅವರು ತಮ್ಮ ಕೌಶಲ್ಯವನ್ನು ಮೆರೆದರು. ಭಾರತ ಗೆದ್ದ ಪಂದ್ಯದಲ್ಲಿ ಕೂಡ ಅವರು ಅತ್ಯುತ್ತಮ ಸಾಧನೆ ತೋರಿದರು. ಏಕದಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವ ಬೂಮ್ರಾ ಅವರು ಟೆಸ್ಟ್ ಪಂದ್ಯಗಳಲ್ಲಿಯೂ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.

ಮೊಹಮದ್ ಶಮಿ : 5 ಪಂದ್ಯ, 10 ಇನ್ನಿಂಗ್ಸ್, 172.4 ಓವರ್ಸ್, 16 ವಿಕೆಟ್, 4/57 ಅತ್ಯುತ್ತಮ

ಮೊಹಮದ್ ಶಮಿ : 5 ಪಂದ್ಯ, 10 ಇನ್ನಿಂಗ್ಸ್, 172.4 ಓವರ್ಸ್, 16 ವಿಕೆಟ್, 4/57 ಅತ್ಯುತ್ತಮ

ಭಾರತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ವಿವಾದದ ಸುಳಿಗೆ ಸಿಲುಕಿದ್ದರೂ, ಕರಾರುವಾಕ್ ಬೌಲಿಂಗ್ ಮತ್ತು ಔಟ್ ಸ್ವಿಂಗರ್ ಗಳಿಗೆ ಹೆಸರುವಾಸಿಯಾಗಿರುವ ಮೊಹಮ್ಮದ್ ಶಮಿ ಅವರು ಇಂಗ್ಲೆಂಡ್ ನ ಪಿಚ್ ಗಳನ್ನು ಉತ್ತಮವಾಗಿ ಬಳಸಿಕೊಂಡರೂ ದುರಾದೃಷ್ಟವಂತ ಎಂದೇ ಹೇಳಬೇಕು.

ರಿಶಬ್ ಪಂತ್ : 3 ಪಂದ್ಯ, 6 ಇನ್ನಿಂಗ್ಸ್, 162 ರನ್, 114 ಗರಿಷ್ಠ, 27 ಸರಾಸರಿ

ರಿಶಬ್ ಪಂತ್ : 3 ಪಂದ್ಯ, 6 ಇನ್ನಿಂಗ್ಸ್, 162 ರನ್, 114 ಗರಿಷ್ಠ, 27 ಸರಾಸರಿ

ಮೂರನೇ ಪಂದ್ಯದಿಂದ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಯುವ ಆಟಗಾರ ರಿಶಬ್ ಪಂತ್, ಮೊದಲ ಹೊಡೆತವನ್ನೇ ಸಿಕ್ಸರ್ ಗೆ ಅಟ್ಟಿ ಭರ್ಜರಿ ಚಪ್ಪಾಳೆ ಗಿಟ್ಟಿಸಿದರು. ಕಡೆಯ ಮತ್ತು ಐದನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್ ಮೂಲಕವೇ ಸೆಂಚುರಿಯನ್ನೂ ಬಾರಿಸಿದರು ಈ ಪ್ರತಿಭಾವಂತ ವಿಕೆಟ್ ಕೀಪರ್. ದೆಹಲಿ ಪರ ಆಡುವ ಈ 20 ವರ್ಷದ ಯುವ ಆಟಗಾರ ತಮ್ಮ ಸಾಮರ್ಥ್ಯವೇನೆಂಬುದನ್ನು ಈ ಸರಣಿಯಲ್ಲಿ ಸಾಬೀತುಪಡಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಸ್ಥಾನವನ್ನು ರಿಶಬ್ ಪಂತ್ ಪರ್ಫೆಕ್ಟ್ ಆಗಿ ತುಂಬಬಲ್ಲರು ಎಂದು ಸೆಹ್ವಾಗ್ ಹಾಡಿ ಹೊಗಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, September 14, 2018, 12:01 [IST]
Other articles published on Sep 14, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more