ಥಾಯ್ಲೆಂಡ್‌: ಫುಟ್ಬಾಲ್ ಆಡುವ ಬಾಲಕರು ಸಿಕ್ಕಿಕೊಂಡಿದ್ದ ಗುಹೆಯ ರೋಚಕ ಕಥೆ

ಮಾಯ್ ಸಾಯ್, ಜುಲೈ 14: ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿಬಿದ್ದಿದ್ದ 12 ಬಾಲಕರು ಮತ್ತು ಅವರ ಕೋಚ್‌ನನ್ನು ರಕ್ಷಿಸಿದ ಕಾರ್ಯಾಚರಣೆ ರೋಚಕವಾಗಿತ್ತು.

ಹೊರಗೆ ಸುರಿಯುವ ಮಳೆ, ಪ್ರವಾಹದಿಂದ ಆವೃತವಾದ ಗುಹೆಯೊಳಗಿನ ಕಿಂಡಿಯಲ್ಲಿ ನುಸುಳಿ ಅವರನ್ನು ರಕ್ಷಿಸಿದ ರಕ್ಷಣಾ ತಂಡದ ಸಿಬ್ಬಂದಿಯ ಸಾಹಸ ಅಪ್ರತಿಮವಾದುದು.

ಥೈಲ್ಯಾಂಡ್‌ ಗುಹೆಯಿಂದ ವಾಪಸಾದ ವೀರ ಮಕ್ಕಳು ಈಗ ಹೇಗಿದ್ದಾರೆ ನೋಡಿ

ಬೃಹತ್ ಬೆಟ್ಟಸಾಲಿನ ತಪ್ಪಲಿನಲ್ಲಿರುವ ಈ ಗುಹೆಯ ಕಥೆಯೂ ಅಷ್ಟೇ ರೋಚಕವಾಗಿದೆ. ಅದು ಬರಿಯ ಗುಹೆಯಲ್ಲ, ಹೊಸ ಜಗತ್ತಿನ ಹೆಬ್ಬಾಗಿಲು.

ಈ ಗುಹೆಯನ್ನು ಅಲ್ಲಿನ ಜನರು ಕರೆಯುವುದು ಥಾಮ್ ಲುವಾಂಗ್ ನಾಂಗ್ ನಾನ್ ಎಂದು. ಅದರ ಅರ್ಥ, 'ಒರಗಿ ಕುಳಿತ ಮಹಿಳೆಯ ಬೃಹತ್ ಗುಹೆ'.

ಚಿಯಾಂಗ್ ರುಂಗ್ ನಗರದ ಸ್ಥಳೀಯ ಸಾಮ್ರಾಜ್ಯವೊಂದರ ಯುವರಾಣಿಯ ಆತ್ಮ ಅಲ್ಲಿ ನೆಲೆಸಿದೆ ಎಂಬುದು ಅಲ್ಲಿನ ಜನರ ನಂಬಿಕೆ.

ಪ್ರೀತಿ ಒಪ್ಪದ ರಾಜ

ಪ್ರೀತಿ ಒಪ್ಪದ ರಾಜ

ಆ ಯುವರಾಣಿ ಸಾಮಾನ್ಯ ವ್ಯಕ್ತಿಯೊಬ್ಬನನ್ನು ಪ್ರೀತಿಸಿ, ಆತನಿಂದ ಗರ್ಭಿಣಿಯಾದಳು. ಅಲ್ಲಿನ ರಾಜನಾದ ಆತನ ತಂದೆ ಅವರ ಪ್ರೇಮವನ್ನು ಒಪ್ಪಿಕೊಳ್ಳಲಿಲ್ಲ.

ತಂದೆಯಿಂದ ತಪ್ಪಿಸಿಕೊಂಡು ಬಂದ ಯುವರಾಣಿ ಪ್ರೇಮಿ ಜತೆ ಗುಹೆಯೊಂದರಲ್ಲಿ ಆಶ್ರಯ ಪಡೆದಳು. ಆಹಾರ ತರಲು ಹೊರಗೆ ಹೋದ ಪ್ರಿಯಕರ ಮರಳುವವರೆಗೂ ಗುಹೆಯಲ್ಲಿಯೇ ಇರಲು ಆಕೆ ನಿರ್ಧರಿಸಿದ್ದಳು.

ಆದರೆ, ಆತ ಬರಲಿಲ್ಲ. ರಾಜನ ಸೈನಿಕರು ಆಕೆಯ ಪ್ರೇಮಿಯನ್ನು ಕೊಂದು ಹಾಕಿದರು. ಆತನ ಹಿಂದಿರುಗಿ ಬಾರದಿದ್ದರಿಂದ ನೊಂದ ಆಕೆ ತನ್ನನ್ನು ತಾನು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.

ಮಕ್ಕಳನ್ನು ಉಳಿಸಿ ಬಂದ ವೈದ್ಯನಿಗೆ ಸಿಕ್ಕಿದ್ದು ಆಘಾತಕಾರಿ ಸುದ್ದಿ

ದೇಹವೇ ಪರ್ವತ, ಜನನಾಂಗವೇ ಗುಹೆ

ದೇಹವೇ ಪರ್ವತ, ಜನನಾಂಗವೇ ಗುಹೆ

ಅಲ್ಲಿಂದ ಹರಿದು ಹೋದ ಆಕೆಯ ನೆತ್ತರು ಮಾಯ್ ನಾಮ್ ಮಾಯ್ ಸಾಯ್ ನದಿಯಾಯಿತು. ಒರಗಿ ಕುಳಿತ ಆಕೆಯ ದೇಹ 'ದೊಯ್ ನಾಂಗ್ ನಾನ್' ಪರ್ವತವಾಗಿ ಬೆಳೆಯಿತು.

ಆಕೆಯ ಜನನಾಂಗ ಈ ಗುಹೆಯಾಗಿ ಬದಲಾಯಿತು. ಈ ಗುಹೆಯನ್ನು ಆಕೆಯ ಆತ್ಮ ಕಾಯುತ್ತಿದೆ ಎನ್ನಲಾಗುತ್ತದೆ. ಆಕೆಯ ಈ ಪರ್ವತ ಮತ್ತು ಗುಹೆ ಎರಡರ 'ಜೋ ಮಾಯಿ' (ಸಾಮ್ರಾಜ್ಞೆ).

ಹೀಗಾಗಿ ಗುಹೆಯೊಳಗೆ ಪ್ರವೇಶಿಸುವ ಮುನ್ನ ಪ್ರವಾಸಿಗರು ಆಕೆಯನ್ನು ಪೂಜಿಸಬೇಕು. ಇಲ್ಲದಿದ್ದರೆ, ಪ್ರವಾಹದಲ್ಲಿ ಸಿಲುಕಿ ಸಾಯುತ್ತಾರೆ ಎನ್ನುವುದು ಇಲ್ಲಿನ ಐತಿಹ್ಯ.

ಈ ಗುಹೆ 'ಯಕ್ಷ' ಎಂಬ ಹೆಸರಿನ ಅತಿಮಾನುಷ ಶಕ್ತಿಯುಳ್ಳ ದೈತ್ಯರ ನೆಲೆಯಾಗಿತ್ತು. ಅವರನ್ನು ಮಹಾರಾಜನೊಬ್ಬ ಆಳುತ್ತಿದ್ದನು. ಮುಂದೆ ಅರಸನ ಸಾವಿನ ಬಳಿಕ ಅದು ದುರವಸ್ಥೆಗೆ ತಲುಪಿತು ಎಂಬ ಮತ್ತೊಂದು ಕಥೆಯನ್ನು ಸಹ ಸ್ಥಳೀಯರು ಹೇಳುತ್ತಾರೆ.

ಥಾಯ್ಲೆಂಡ್: ಬುದ್ಧನಿಂದಾಗಿ ಸಾವು ಗೆದ್ದರೇ ಈ ಬಾಲಕರು?

ಸುಂದರಿಗೆ ಮರುಳಾದ ದೇವತೆ

ಇನ್ನೊಂದು ಐತಿಹ್ಯವೂ ಈ ಗುಹೆಗಿದೆ. ಉತ್ತರದ ಥಾಯ್ ದೇವತೆ ಜಾವೊ ಲುವಾಂಗ್ ಖಾಮ್ ದಾಯೆಂಗ್, ಮಹಿಳೆಯೊಬ್ಬಳ ಸೌಂದರ್ಯಕ್ಕೆ ಮರುಳಾಗಿ ಹಿಂಬಾಲಿಸಿಕೊಂಡು ಬಂದಾಗ ಆ ಗುಹೆ ಹೊಕ್ಕನು.

ಆಗ ಗುಹೆಯೊಳಗಿದ್ದ ರಾಕ್ಷಸೀಯ ಆತ್ಮಗಳು ಆತನನ್ನು ಕೊಂದು ಹಾಕಿದವು. ಒಂದು ನಂಬಿಕೆಯ ಪ್ರಕಾರ ಆತ ಸತ್ತ ಬಳಿಕ ಅಲ್ಲಿನ ರಾಜನಾಗಿ ಆಡಳಿತ ಮಾಡುತ್ತಿದ್ದ.

ಈ ಗುಹೆಯು ಅತಿಮಾನುಷ ಶಕ್ತಿಯ ಜಾಗ. ಇವು ಅಪಾಯಕಾರಿಯಾದರೂ ಪರ್ವತ ಹಾಗೂ ಆತ್ಮಗಳ ಶಕ್ತಿಗಳನ್ನು ಪೂಜಿಸುತ್ತಿರುವವರೆಗೂ ಉತ್ತರ ಥಾಯ್ ಪ್ರದೇಶವನ್ನು ಸುರಕ್ಷಿತ, ಸಮೃದ್ಧ ಹಾಗೂ ಆರೋಗ್ಯಕರವಾಗಿ ಇರಿಸುತ್ತವೆ ಎಂಬ ನಂಬಿಕೆ ಅಲ್ಲಿನ ಜನರಲ್ಲಿದೆ.

ಧಾರ್ಮಿಕ ನಂಬಿಕೆಗಳ ಸಂಗಮ

ಧಾರ್ಮಿಕ ನಂಬಿಕೆಗಳ ಸಂಗಮ

ಉತ್ತರ ಥಾಯ್ಲೆಂಡ್‌ನ ಪರ್ವತಗಳಲ್ಲಿನ ಗುಹೆಗಳು ಧಾರ್ಮಿಕ ಸಂಪ್ರದಾಯಗಳ ಸಂಗಮ. ಇಲ್ಲಿನ ಬಹುತೇಕ ಗುಹೆಗಳ ಕುರಿತು ಒಂದಲ್ಲೊಂದು ಕಥೆಗಳಿವೆ.

ಈ ಕಥೆಗಳೆಲ್ಲವೂ ರಾಜನ ಆಡಳಿತ, ದೇವತೆಗಳು ಹಾಗೂ ಅತಿಮಾನುಷ ಶಕ್ತಿಗಳಿಗೆ ಸಂಬಂಧಿಸಿದಂತಹವು.

ಇಲ್ಲಿ ಈ ಹಿಂದೆ ಹಿಂದೂ ಸಂಪ್ರದಾಯವನ್ನು ಪಾಲಿಸುವ ರಾಜಮನೆತನಗಳ ಆಳ್ವಿಕೆಯಿತ್ತು. ಬಳಿಕ ಬುದ್ಧನ ಪ್ರಭಾವಳಿ ಆವರಿಸಿಕೊಂಡಿತು.

ಬುದ್ಧ ಮತ್ತು ಹಿಂದೂ ಸನ್ಯಾಸಿಗಳ ಆಶ್ರಮದಂತೆಯೇ ಪರ್ವತದ ಅತಿಮಾನುಷ ಶಕ್ತಿಯ ದೇವತೆಗಳೂ ಸಹ ಒಂದೇ ಸ್ಥಳದಲ್ಲಿ ನೆಲೆಸಿವೆ.

ಈ ಮೂರು ಸಂಪ್ರದಾಯಗಳು ಪ್ರತ್ಯೇಕವಾಗಿ ಆಚರಣೆಯಾಗುತ್ತಿಲ್ಲ. ಮೂರೂ ಪರಸ್ಪರ ಒಂದರೊಳಗೊಂದು ಸಮ್ಮಿಳಿತಗೊಂಡಿವೆ.

ಬುದ್ಧ ನಿಯೋಜಿಸಿದ ಶಕ್ತಿ

ಬುದ್ಧ ನಿಯೋಜಿಸಿದ ಶಕ್ತಿ

ಶ್ರೀಲನ್ನಾ ರಾಷ್ಟ್ರೀಯ ಪಾರ್ಕ್‌ ಪ್ರದೇಶದಲ್ಲಿ ಇರುವ ಗುಹೆಗಳಲ್ಲಿ ಇಬ್ಬರು ರಾಜಕುಮಾರಿಯರು ತಮ್ಮ ಸಾಮ್ರಾಜ್ಯ ಪತನವಾದಾಗ ಅಡಗಿಕೊಂಡಿದ್ದರು ಎನ್ನಲಾಗಿದೆ.

ಗುಹೆಯಲ್ಲಿ ರಕ್ಷಣೆ ಕೋರಿ ಬುದ್ಧ ದೇವ ಅವರನ್ನು ಕಾಪಾಡಲು ಗುಹೆಯಲ್ಲಿ ಅತ್ಯಂತ ಪ್ರಭಾವಶಾಲಿ ಶಕ್ತಿಯೊಂದನ್ನು ನಿಯೋಜಿಸಿದ. ಇಂದು ಈ ರಾಜಮನೆತನಗಳು, ಬುದ್ಧಿಸಂ ಮತ್ತು ಅತಿಮಾನುಶ ಶಕ್ತಿಗಳೆಲ್ಲವೂ ಒಂದೇ ಕತೆಯೊಳಗೆ ಬೆರತುಹೋಗಿವೆ.

ಇಲ್ಲಿನ ಗುಹೆಗಳು ಬೃಹದಾಕಾರವಾಗಿದ್ದರೂ ಕೆಲವೆಡೆ ಕಿರಿದಾದ ದಾರಿ ಹೊಂದಿವೆ. ಇವು ಮತ್ತೊಂದು ಜಗತ್ತಿಗೆ ತೆರೆದುಕೊಳ್ಳುತ್ತವೆ. ಅಲ್ಲಿ ಕಗ್ಗತ್ತಲು, ದುರ್ಗಮದ ದಾರಿ ಮತ್ತು ಹನ್ನೆರಡು ಬಾಲಕರ ಕಥೆಯಂತೆಯೇ ಅನೇಕ ಜನರು ಬಂಧಿಯಾದ ಜಾಗ.

ವಿಚಿತ್ರ ಆಚರಣೆಗಳು

ವಿಚಿತ್ರ ಆಚರಣೆಗಳು

ಥಾಯ್ಲೆಂಡ್‌ನ ಪವಿತ್ರ ಗುಹಾ ಸ್ಥಳಗಳೆಲ್ಲವೂ ಶಕ್ತಿ ಶಾಲಿಯಾಗಿದ್ದರೂ ಅಷ್ಟೇ ಅಪಾಯಕಾರಿಯೂ ಆಗಿವೆ. ಇಲ್ಲಿನ ಆತ್ಮಗಳು ಹಳ್ಳಿಗೆ ತೊಂದರೆ ಕೊಡಬಾರದು ಎಂದು ಪ್ರತಿ ವರ್ಷವೂ ಪೂಜೆ ಸಲ್ಲಿಸುವುದೂ ನಡೆಯುತ್ತದೆ.

ಚಿಯಾಂಗ್ ಮಾಯ್‌ನಲ್ಲಿ ಪ್ರತಿ ವರ್ಷ ಸ್ಥಳೀಯರು ಪೂಜೆಯ ಆಚರಣೆ ನಡೆಸುತ್ತಾರೆ. ಇಲ್ಲಿ ಎರಡು ಪರ್ವತ ಆತ್ಮಗಳು ಮನುಷ್ಯರೊಳಗೆ ಸೇರಿಕೊಳ್ಳುತ್ತವೆ.

ಜೀವಂತ ಕೋಣವನ್ನು ಕಚ್ಚಿ ಅದರ ರಕ್ತ ಕುಡಿಯುತ್ತವೆ. ಬಳಿಕ ಬುದ್ಧನಿಗೆ ಶರಣಾಗಿ, ಅಲ್ಲಿನ ಜನರಿಗೆ ತಣ್ಣನೆಯ ಗಾಳಿ ಮತ್ತು ಶುದ್ಧ ನೀರು ಕುಡಿಯುವ ನೀರು ಒದಗಿಸುವುದಾಗಿ ಒಪ್ಪಿಕೊಳ್ಳುತ್ತವೆ.

ಥಾಯ್ಲೆಂಡ್‌ನ ಹಳ್ಳಿಗಳಲ್ಲಿ ಇಂತಹ ಅನೇಕ ಸಂಪ್ರದಾಯಗಳು ನಡೆಯುತ್ತವೆ. ಬುದ್ಧ ಹಾಗೂ ಆತ್ಮಗಳು ಎರಡನ್ನೂ ಪೂಜಿಸುವ ಸಮುದಾಯಗಳು ಅಲ್ಲಿ ಸಾಕಷ್ಟಿವೆ. ಬಹುತೇಕ ಗುಹೆಗಳು ತಮ್ಮ ಹೆಸರಿನ ಜತೆ ಒಂದಿಲ್ಲೊಂದು ಕಥೆಗಳನ್ನು ಹೆಣೆದುಕೊಂಡಿರುತ್ತವೆ.

ಬೆಳೆ ನಾಶವಾಯಿತು, ಹಣವೂ ಹೋಯಿತು

ಬೆಳೆ ನಾಶವಾಯಿತು, ಹಣವೂ ಹೋಯಿತು

ಸುಮಾರು ಒಂದು ವಾರ ನಡೆದ ಬಾಲಕರ ರಕ್ಷಣಾ ಕಾರ್ಯಾಚರಣೆ ವೇಳೆ ಗುಹೆಯ ಸಮೀಪದಲ್ಲಿನ ಭತ್ತದ ಗದ್ದೆಗಳೆಲ್ಲ ಹಾಳಾಗಿವೆ.

ಗುಹೆಯಿಂದ ಹೊರಗೆ ತೆಗೆಯಲಾದ ಲಕ್ಷಾಂತರ ಲೀಟರ್ ನೀರನ್ನು ಬೆಳೆಯುತ್ತಿದ್ದ ಭತ್ತದ ಗದ್ದೆಯ ಮೇಲೆ ಹಾಯಿಸುವುದರ ವಿನಾ ರಕ್ಷಣಾ ಕಾರ್ಯಪಡೆಗೆ ಬೇರೆ ದಾರಿ ಇರಲಿಲ್ಲ.

ವಾಹನಗಳು, ಉಪಕರಣಗಳನ್ನು ಇರಿಸಿದ್ದರಿಂದ ನೀರು ಹಾಯಿಸಿದ್ದರಿಂದ ಇಲ್ಲಿನ ರೈತರು ತಮ್ಮ ಬೆಳೆ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಹೂಡಿದ್ದ ಹಣವೂ ನಷ್ಟವಾಗಿದೆ.

ಪ್ರಾಣ ಉಳಿಯಿತಲ್ಲ ಸಾಕು

ಆದರೆ, ಸ್ಥಳೀಯರು ಭತ್ತದ ಬೆಳೆ ನಾಶವಾಗಿರುವುದಕ್ಕೆ ಚಿಂತಿಸುತ್ತಿಲ್ಲ. ಆ ಬಾಲಕರ ಪ್ರಾಣ ಉಳಿಯಿತಲ್ಲ ಸಾಕು ಎನ್ನುತ್ತಿದ್ದಾರೆ.

'ನಾನು ಭತ್ತ ಬೆಳೆಯುವಾಗ, ಅದು ಸತ್ತರೆ ಮತ್ತೆ ಬೆಳೆಯಬಹುದು. ಆದರೆ, ಆ ಹದಿಮೂರು ಮಕ್ಕಳಿದ್ದರಲ್ಲ, ಅವರಿಗೆ ಏನಾದರೂ ಆಗಿದ್ದರೆ... ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಕಳೆದುಕೊಂಡಿರುವುದನ್ನು 13 ಮಕ್ಕಳ ಪ್ರಾಣಕ್ಕೆ ಹೋಲಿಸಲಾಗದು' ಎಂದಿದ್ದಾರೆ ಎಲ್ಲಿನ ಬಡ ರೈತ ಬೂನ್ರತ್ ಕಸೆಮ್ರಾದ್.

ಚಿಯಾಂಗ್ ರೈನ ಕೆಳಭಾಗದ ಪ್ರದೇಶದಲ್ಲಿರುವ ಹೊಲಗಳಿಗೆ ರಕ್ಷಣಾ ಕಾರ್ಯಾಚರಣೆ ವೇಳೆ 1.6 ಮಿಲಿಯನ್ ಲೀಟರ್‌ಗೂ ಹೆಚ್ಚು ನೀರನ್ನು ಗುಹೆಯಿಂದ ತೆಗೆದು ಪಂಪ್ ಮಾಡಲಾಗಿದೆ.

ಗುರುವಾರ ಆಸ್ಪತ್ರೆಯಿಂದ ಬಿಡುಗಡೆ

ಗುಹೆಯಿಂದ ರಕ್ಷಣೆಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿರುವ 12 ಬಾಲಕರು ಮತ್ತು ಅವರ ಕೋಚ್‌ಅನ್ನು ಮುಮದಿನ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಥಾಯ್ಲೆಂಡ್‌ನ ಆರೋಗ್ಯ ಸಚಿವ ಪಿಯಸಕೊಲ್ ಸಕೊಲ್ಸಟಯಾದೊರ್ನ್ ತಿಳಿಸಿದ್ದಾರೆ.

ತೂಕ ಹೆಚ್ಚಿಸಿಕೊಂಡ ಬಾಲಕರು

ತೂಕ ಹೆಚ್ಚಿಸಿಕೊಂಡ ಬಾಲಕರು

ಸುಮಾರು 17 ದಿನ ಗುಹೆಯಲ್ಲಿದ್ದ ಬಾಲಕರಲ್ಲಿ ಕೆಲವರು ಎರಡು ಕೆ.ಜಿ.ತೂಕ ಕಳೆದುಕೊಂಡಿದ್ದರೆ, ಇನ್ನು ಕೆಲವರು ಐದು ಕೆ.ಜಿ. ತೂಕ ಕಳೆದುಕೊಂಡಿದ್ದರು.

ಆಸ್ಪತ್ರೆಯಲ್ಲಿರುವ ಅವರಲ್ಲಿ ಕೆಲವರಲ್ಲಿ ತೂಕದ ಪ್ರಮಾಣದ ಸ್ವಲ್ಪ ಹೆಚ್ಚಾಗಿದೆ. ಅವರು ಚೆನ್ನಾಗಿ ಊಟ ಮಾಡುತ್ತಿದ್ದು, ಆರೋಗ್ಯವಾಗಿದ್ದಾರೆ. ತಮಗೆ ಇಷ್ಟವಾದ ಆಹಾರವನ್ನು ತರಿಸಿಕೊಂಡು ತಿನ್ನುತ್ತಿದ್ದಾರೆ.

ಪ್ರಸಿದ್ಧಿಯಿಂದ ತೊಂದರೆ

ಪ್ರಸಿದ್ಧಿಯಿಂದ ತೊಂದರೆ

ಆದರೆ, ಮಕ್ಕಳಿಗೆ ದೊರೆತಿರುವ ಕೀರ್ತಿ ಅಲ್ಲಿನ ಆಡಳಿತ ಮತ್ತು ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಹಾಲಿವುಡ್‌ನ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಮಕ್ಕಳು ಹಾಗೂ ರಕ್ಷಣಾ ಕಾರ್ಯಾಚರಣೆ ಬಗ್ಗೆ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿವೆ.

ಇದು ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಹಾಗೂ ಅವರ ಸಹಜ ಬದುಕಿಗೆ ಅಡ್ಡಿಯುಂಟು ಮಾಡುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಅಪಾಯ ಇರುವುದರಿಂದ ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ತಡೆಯಲು ಅವರ ಸಂಬಂಧಿಕರಿಗೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

  Story first published: Saturday, July 14, 2018, 17:47 [IST]
  Other articles published on Jul 14, 2018
  + ಇನ್ನಷ್ಟು
  POLLS

  myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more