ಕಣ್ಣೀರಿಟ್ಟ ಫುಟ್ಬಾಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೋ: ವೈರಲ್ ವಿಡಿಯೋ

ಲಿಸ್ಬನ್, ಸೆಪ್ಟೆಂಬರ್ 17: ಪೋರ್ಚುಗಲ್ ಮತ್ತು ಯುವೆಂಟಸ್ ತಂಡದ ಸ್ಟಾರ್ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೋ ಸಂದರ್ಶನದ ವೇಳೆ ಕಣ್ಣೀರು ಸುರಿಸಿದ್ದಾರೆ. ಇಂಗ್ಲಿಷ್ ಪತ್ರಕರ್ತ ಪಿಯರ್ಸ್ ಮೊರ್ಗನ್ ಅವರ ಸಂದರ್ಶನದಲ್ಲಿ ಫುಟ್ಬಾಲ್ ದೈತ್ಯ ರೊನಾಲ್ಡೋ ಕಣ್ಣಂಚು ಕರಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ರೊನಾಲ್ಡೋಗೆ ಮೋರ್ಗನ್ ಒಂದು ವಿಡಿಯೋ ತೋರಿಸಿದ್ದಾರೆ. ರೊನಾಲ್ಡೋ ತಂದೆ ಜೋಸ್ ದಿನಿಸ್ ಅವೆರೊ ಅವರಿರುವ ವಿಡಿಯೋ ಅದು. ವಿಡಿಯೋದಲ್ಲಿ ಕ್ರಿಸ್ಚಿಯಾನೊ ತಂದೆ ತನ್ನ ಮಗನ ಸಾಧನೆಗಳ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದರು. ಆದರೆ ಆ ವಿಡಿಯೋವನ್ನು ರೊನಾಲ್ಡೋ ಯಾವತ್ತಿಗೂ ನೋಡಿರಲಿಲ್ಲವಂತೆ.
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಕ್ರಿಯವಾಗಿರುವ ಫುಟ್ಬಾಲ್ ಆಟಗಾರರಲ್ಲಿ ಅತ್ಯಧಿಕ ಗೋಲ್ ಸರದಾರ ರೋನಾಲ್ಡೋ ಕಣ್ಣೀರಿಟ್ಟಿರುವ ಈ ವಿಡಿಯೋ ವೈರಲ್ ಆಗಿದೆ.

ನಾನ್ಯಾವತ್ತೂ ನೋಡಿಲ್ಲ
'ಈ ವಿಡಿಯೋವನ್ನು ನಾನ್ಯಾವತ್ತೂ ನೋಡಿಲ್ಲ. ನನಗೆ ಈ ವಿಡಿಯೋ ನೋಡಲಾಗಲಿಲ್ಲ. ನಂಬಲೇ ಸಾಧ್ಯವಿಲ್ಲ. ನಾನು ನಂ.1 ಆಟಗಾರ ಅನ್ನಿಸಿದ್ದನ್ನು ಬಿಟ್ಟರೆ ಅಪ್ಪ ಬೇರೇನನ್ನೂ ನೋಡಿಲ್ಲ. ನಾನು ಪ್ರಶಸ್ತಿಗಳನ್ನು ಸ್ವೀಕರಿಸೋದನ್ನೂ ಅವರು ನೋಡಿಲ್ಲ,' ಎನ್ನುತ್ತ ರೊನಾಲ್ಡೋ ಕಣ್ಣಲ್ಲಿ ನೀರಾಡಿತು.
ಕುಟುಂಬ ನೋಡಿದೆ
ರೊನಾಲ್ಡೋ ಶ್ರೇಷ್ಠನಾಗಿ ಬೆಳೆದಿದ್ದನ್ನು ಅವೆರೊ ನೋಡಲೇ ಇಲ್ಲವೆ ಎಂಬ ಮೋರ್ಗನ್ ಪ್ರಶ್ನೆಗೆ ಉತ್ತರಿಸಿದ ಫುಟ್ಬಾಲರ್, 'ಯಾವತ್ತಿಗೂ ಇಲ್ಲ. ನಾನು ಬೆಳೆದು ನಿಂತಿದ್ದನ್ನು ನನ್ನ ಕುಟುಂಬ ನೋಡಿದೆ. ನನ್ನ ಅಮ್ಮ, ನನ್ನ ಸಹೋದರರು, ನನ್ನ ದೊಡ್ಡ ಮಗ ಕೂಡ ನೋಡಿದ್ದಾನೆ. ಆದರೆ ಅಪ್ಪ ಏನೂ ನೋಡಿಲ್ಲ. ಯಾಕೆಂದರೆ ಅವರು ಬೇಗನೆ ಸಾವನ್ನಪ್ಪಿದರು,' ಎಂದರು.

ಅವೆರೊ ಸಾವನ್ನಪ್ಪಿದ್ದು
2015ರಲ್ಲಿ ಯುಇಎಫ್‌ಎ ಚಾಂಪಿಯನ್ಸ್ ಲೀಗ್‌ನಲ್ಲಿ ವಿಲ್ಲಾರ್ರಿಯಲ್ ವಿರುದ್ಧದ ಮ್ಯಾನ್ಚೆಸ್ಟರ್ ಯುನೈಟೆಡ್ ಪಂದ್ಯದ ವೇಳೆ ಜೋಸ್ ದಿನಿಸ್ ಅವೆರೊ ಸಾವನ್ನಪ್ಪಿದ್ದರು. ಆ ಸಮಯ ರೊನಾಲ್ಡೋ ಪಂದ್ಯ ತ್ಯಜಿಸಿ ಅಪ್ಪನಿದ್ದ ಆಸ್ಪತ್ರೆಗೆ ಹೋಗಲು ಮ್ಯಾನ್ಚೆಸ್ಟರ್ ಮ್ಯಾನೇಜರ್ ಅಲೆಕ್ಸ್ ಫರ್ಗುಸನ್ ಅನುವು ಮಾಡಿ ಕೊಟ್ಟಿದ್ದರು. ಅವೆರೊ 62ರ ಹರೆಯದಲ್ಲಿ ಸಾವನ್ನಪ್ಪಿದರು.

ಟಾಪ್ ಗೋಲರ್
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಈಗಲೂ ಸಕ್ರಿಯವಾಗಿದ್ದು ಅತ್ಯಧಿಕ ಗೋಲ್ ಬಾರಿಸಿದವರ ಪಟ್ಟಿಯಲ್ಲಿ ಸದ್ಯ 34ರ ಹರೆಯದ ಕ್ರಿಸ್ಚಿಯಾನೊ ರೊನಾಲ್ಡೋ ಅಗ್ರ ಸ್ಥಾನದಲ್ಲಿದ್ದಾರೆ. ಪೋರ್ಚುಗಲ್ ಪರ ರೊನಾಲ್ಡೋ 81 ಗೋಲ್ ದಾಖಲಿಸಿದ್ದಾರೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (64 ಗೋಲ್‌ಗಳು), ಭಾರತದ ಸುನಿಲ್ ಛೆಟ್ರಿ (61), ಸ್ಪೇನ್‌ನ ಡೇವಿಡ್ ವಿಲ್ಲ (59), ಯುಎಸ್‌ಎಯ ಕ್ಲಿಂಟ್ ಡೆಂಪ್ಸೆ (57) ಅನಂತರದ ಸ್ಥಾನಗಳಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications