ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಸೀಸನ್‌ 7: ಈ ಬಾರಿ ಮಿಂಚಬಲ್ಲ ಟಾಪ್‌ 5 ರೇಡರ್‌ಗಳು ಇವರು

Top Five raiders to look out for in Pro Kabaddi league 7

ಬೆಂಗಳೂರು, ಜುಲೈ 19: ಕ್ರೀಡಾಭಿಮಾನಿಗಳಿಗೆ ಐಪಿಎಲ್‌ ಮತ್ತು ವಿಶ್ವಕಪ್‌ ಬಳಿಕ ಕ್ರಿಕೆಟ್‌ನ ಜ್ವರ ಬಿಟ್ಟಿದೆ ಯಾದರೂ, ಇದೀಗ ಕಬಡ್ಡಿ ಕ್ರೀಡೆಯ ಚಳಿ ಆವರಿಸಲು ಶುರುವಾಗಿದೆ.

ದೇಶದಲ್ಲಿ ಕ್ರಿಕೆಟ್‌ ಬಳಿಕ ಅತಿ ಹೆಚ್ಚು ವೀಕ್ಷಿಸಲ್ಪಡುವ ಕ್ರೀಡೆಯಾಗಿ ಹೊರಹೊಮ್ಮಿರುವ ಪ್ರೊ ಕಬಡ್ಡಿ ಲೀಗ್‌ನ 7ನೇ ಆವೃತ್ತಿಯ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟನ್ಸ್‌ ಮತ್ತು ಮಾಜಿ ಚಾಂಪಿಯನ್ಸ್‌ ಯು ಮುಂಬಾ ಪೈಪೋಟಿ ನಡೆಸಲಿವೆ.

ಪ್ರೊ ಕಬಡ್ಡಿ: ಪ್ರಶಸ್ತಿ ಗೆಲುವಿಗಾಗಿ ಹರಿಯಾಣ ಸ್ಟೀಲರ್ಸ್‌ ರಣತಂತ್ರಪ್ರೊ ಕಬಡ್ಡಿ: ಪ್ರಶಸ್ತಿ ಗೆಲುವಿಗಾಗಿ ಹರಿಯಾಣ ಸ್ಟೀಲರ್ಸ್‌ ರಣತಂತ್ರ

ದೇಶದಲ್ಲಿ ಕ್ರಿಕೆಟ್‌ ಬಳಿಕ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿರುವ ಕಬಡ್ಡಿ ಕ್ರೀಡೆಯ ಫ್ರಾಂಚೈಸಿ ಆಧಾರಿತ ಪ್ರೋ ಕಬಡ್ಡಿ ಲೀಗ್‌ ಮೂಲಕ ಹೊಸ ಹೊಸ ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ ಸಿದ್ಧಾರ್ಥ್ ದೇಸಾಯ್‌ ಯು ಮುಂಬಾ ತಂಡದ ಸ್ಟಾರ್ ರೇಡರ್‌ ಆಗಿ ಅಬ್ಬರಿಸಿದ್ದರು. ಹೊಸ ಮುಖವಾಗಿ ಕಣಕ್ಕಿಳಿದಿದ್ದ ಸಿದ್ಧಾರ್ಥ್ ಟೂರ್ನಿಯ ಅತ್ಯುತ್ತಮ ರೇಡರ್‌ಗಳ ಪೈಕಿ ಮುಂಚೂಣಿಯಲ್ಲಿ ಗುರುತಿಸಿಕೊಂಡರು.

ಪ್ರೊ ಕಬಡ್ಡಿ ಸೀಸನ್‌ 7: ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ಕಣಕ್ಕೆಪ್ರೊ ಕಬಡ್ಡಿ ಸೀಸನ್‌ 7: ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ಕಣಕ್ಕೆ

ಇನ್ನು ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿದ ಬೆಂಗಳೂರು ಬುಲ್ಸ್‌ ತಂಡದ ಪರ ಪವನ್‌ ಸೆಹ್ರಾವತ್‌ ಅತ್ಯುತ್ತಮ ಆಟ ಪ್ರದರ್ಶಿಸಿ ಜಯದ ರೂವಾರಿಯಾಗಿದ್ದರು. ಅಂದಹಾಗೆ ಈ ಬಾರಿ ಯಾವ ರೇಡರ್‌ಗಳು ಮಿಂಚಬಲ್ಲರು ಎಂಬುದರ ಕುರಿತಾಗಿ ಮೈಖೇಲ್‌ ಕನ್ನಡ 5 ಅಗ್ರಮಾನ್ಯ ರೇಡರ್‌ಗಳ ಮಾಹಿತಿ ಕಲೆಹಾಕಿದೆ.

ಪರ್ದೀಪ್‌ ನರ್ವಾಲ್‌ (ಪಟನಾ ಪೈರೇಟ್ಸ್‌)

ಪ್ರೋ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು (858) ಅಂಕಗಳನ್ನು ಗಳಿಸಿದ ರೇಡರ್‌ ಆಗಿರುವ ಪಟನಾ ಪೈರೇಟ್ಸ್‌ ತಂಡ ಪರ್ದೀಪ್‌ ನರ್ವಾಲ್‌, ಕಬಡ್ಡಿ ಕ್ರೀಡೆಯ ವಿರಾಟ್‌ ಕೊಹ್ಲಿ ಇದ್ದಂತೆ. ವಿರಾಟ್‌ ಬ್ಯಾಟ್‌ ಹಿಡಿದರೆ ರನ್‌ ಹೊಳೆ ಹರಿಯುವುದು ಹೇಗೆ ಖಚಿತವೋ, ಪರ್ದೀಪ್‌ ದಾಳಿ ನಡೆಸಿದರೆ ಎದುರಾಳಿ ತಂಡದ ಡಿಫೆಂಡರ್‌ಗಳು ಚೆಲ್ಲಾಪಿಲ್ಲಿಯಾಗಿ ಅಂಕಗಳ ಸುರಿಮಳೆಯಾಗುವುದು ಅಷ್ಟೇ ಖಚಿತ. ಚಂಗನೆ ನೆಗೆದು ಎದುರಾಳಿಗಳಿಗೆ ಚಳ್ಳೆ ಹಣ್ಣು ತಿನ್ನಿಸುವುದರಲ್ಲಿ ಪರಿಣತರಾದ ಪರ್ದೀಪ್‌ 'ಡುಬ್ಕೀ ಕಿಂಗ್‌' ಎಂದೇ ಖ್ಯಾತಿ ಪಡೆದಿದ್ದಾರೆ. ಪರ್ದೀಪ್‌ ಇನ್ನು 42 ಅಂಕಗಳನ್ನು ಗಳಿಸಿದರೆ ಒಟ್ಟು 900 ಅಂಕಗಳನ್ನು ಗಳಿಸಿದಂತಾಗುತ್ತದೆ. ಇನ್ನು ಈ ಹಿಂದಿನ ಆವೃತ್ತಿಗಳಂತೆ ಈ ಬಾರಿಯೂ ಎದುರಾಳಿ ಅಂಗಣವನ್ನು ಪರ್ದೀಪ್‌ ಖಾಲಿ ಮಾಡಲು ಆರಂಭಿಸಿದರೆ ಇದೇ ಆವೃತ್ತಿಯಲ್ಲಿ ಒಟ್ಟಾರೆ 1000 ಅಂಕಗಳನ್ನು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ.

ಸಿದ್ಧಾರ್ಥ್‌ ದೇಸಾಯ್‌ (ತೆಲುಗು ಟೈಟನ್ಸ್‌)

ಕಳೆದ ಬಾರಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ನೂತನ ತಾರೆಯೊಬ್ಬನ ಉದಯವಾಗಿತ್ತು. ನಾಸಿಕ್‌ನ ಪುಟ್ಟ ಗ್ರಾಮದಿಂದ ಕನಸಿನ ಬೆಟ್ಟ ಹೊತ್ತು ಪ್ರೊ ಕಬಡ್ಡಿ ಅಖಾಡಕ್ಕೆ ಧುಮುಕಿದ್ದ ಯುವ ರೇಡರ್‌ ಸಿದ್ಧಾರ್ಥ್‌ ನೋಡ ನೋಡುತ್ತಿದ್ದಂತೆಯೇ ಟೂರ್ನಿಯ ಟಾಪ್‌ ರೇಡರ್‌ಗಳಲ್ಲಿ ಒಬ್ಬರಾಗಿಬಿಟ್ಟರು. ಪಿಕೆಎಲ್‌ನ ಆರನೇ ಆವೃತ್ತಿಯಲ್ಲಿ ಯು ಮುಂಬಾ ತಂಡದ ಸ್ಟಾರ್‌ ಆಟಗಾರ ಎನಿಸಿಕೊಂಡಿದ್ದ ಸಿದ್ಧಾರ್ಥ್‌ ಅವರನ್ನು ಆಟಗಾರರ ಹರಾಜಿನಲ್ಲಿ ಬರೋಬ್ಬರಿ 1.45 ಕೋಟಿ ರೂ. ಮೊತ್ತ ನೀಡಿ ತೆಲುಗು ಟೈಟನ್ಸ್‌ ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಳೆದ ಬಾರಿ ಆಡಿದ 18 ಪಂದ್ಯಗಳಿಂದ 218 ಅಂಕಗಳನ್ನು ಗಳಿಸಿ ಆರೂವರೆ ಅಡಿ ಎತ್ತರದ ಅಜಾನುಭಾಹು ಪ್ರೊ ಕಬಡ್ಡಿಗೆ ಪದಾರ್ಪಣೆ ಮಾಡಿದ ಅತ್ಯುತ್ತಮ ಆಟಗಾರ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು.

ರಾಹುಲ್‌ ಚೌಧರಿ (ತಮಿಳ್‌ ತಲೈವಾಸ್‌)

ಪ್ರೋ ಕಬಡ್ಡಿ ಲೀಗ್‌ನ ಹಾರ್ಟ್‌ಥ್ರೋಬ್‌ ಎನಿಸಿಕೊಂಡಿರುವ ಸ್ಟಾರ್‌ ರೇಡರ್‌ ರಾಹುಲ್‌ ಚೌಧರಿ, ಇದೇ ಮೊದಲ ಬಾರಿ ತಮ್ಮ ನೆಚ್ಚಿನ ತೆಲುಗು ಟೈಟನ್ಸ್‌ ಫ್ರಾಂಚೈಸಿಯಿಂದ ಹೊರಬಂದಿದ್ದು, ಈ ಬಾರಿ ತಮಿಳ್‌ ತಲೈವಾಸ್‌ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ 21 ಪಂದ್ಯಗಳಿಂದ 159 ಅಂಕಗಳನ್ನು ಗಳಿಸಿದ್ದ ರಾಹುಲ್‌, ಪಿಕೆಎಲ್‌ ಇರಿಹಾಸದಲ್ಲಿ ರೇಡಿಂಗ್‌ ಮತ್ತು ಟ್ಯಾಕಲ್‌ ಎರಡರಿಂದಲೂ ಅತಿ ಹೆಚ್ಚು ಅಂಕಗಳನ್ನು (876) ಗಳಿಸಿದ ಆಟಗಾರ ಎನಿಸಿದ್ದಾರೆ. ಇನ್ನು ಕೇವಲ ರೇಡಿಂಗ್‌ ಅಂಕಗಳಲ್ಲಿ ಎರಡನೇ ಅತಿ ಹೆಚ್ಚು (825) ಅಂಕಗಳನ್ನು ಗಳಿಸಿದ ಆಟಗಾರನಾಗಿದ್ದಾರೆ. ಈ ಪಟ್ಟಿಯಲ್ಲಿ ಪರ್ದೀಪ್‌ ನರ್ವಾಲ್‌ ಅಗ್ರಸ್ಥಾನದಲ್ಲಿದ್ದಾರೆ.

ಪವನ್‌ ಕುಮಾರ್‌ ಸೆಹ್ರಾವತ್‌ (ಬೆಂಗಳೂರು ಬುಲ್ಸ್‌)

ಹಿಂದಿನ ಐದು ಪ್ರಯತ್ನಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲಗೊಂಡಿದ್ದ ಬೆಂಗಳೂರು ಬುಲ್ಸ್‌ ತಂಡ 6ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಇದಕ್ಕೆ ತಂಡದ ಯುವ ಹಾಗೂ ಪ್ರತಿಭಾನ್ವಿತ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಅವರ ಭರ್ಜರಿ ರೇಡ್‌ಗಳೇ ಕಾರಣ. ಆರನೇ ಆವೃತ್ತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ (282) ರೇಡರ್‌ ಎನಿಸಿಕೊಂಡ ಪವನ್‌ ಕುಮಾರ್‌ 'ಅತ್ಯಂತ ಮೌಲ್ಯಯುತ ಆಟಗಾರ' ಪ್ರಶಸ್ತಿಗೂ ಭಾಜನರಾಗಿದ್ದರು. ಈ ಭಾರಿಯೂ ಪವನ್‌ ಕುಮಾರ್‌ ಬೆಂಗಳೂರು ಪರ ಆಡಲಿದ್ದು, ನಾಯಕ ರೋಹಿತ್‌ ಕುಮಾರ್‌ಗೆ ಬಲ ಒದಗಿಸಲಿದ್ದಾರೆ.

ಅಜಯ್‌ ಠಾಕೂರ್‌ (ತಮಿಳ್‌ ತಲೈವಾಸ್‌)

ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ಅನುಭವಿ ರೇಡರ್‌ ಹಾಗೂ ಭಾರತ ತಂಡದ ನಾಯಕ ಕೂಡ ಆಗಿರುವ ಅಜಯ್‌ ಠಾಕೂರ್‌ ತಮಿಳ್‌ ತಲೈವಾಸ್‌ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಏಕಾಂಗಿಯಾಗಿ ಹೋರಾಡಿ ಪಂದ್ಯಗಳನ್ನು ಗೆದ್ದುಕೊಡುವ ಸಾಮರ್ಥ್ಯ ಹಾಗೂ ಕೀರ್ತಿ ಅಜಯ್‌ ಠಾಕೂರ್‌ ಅವರದ್ದು. 5ನೇ ಆವೃತ್ತಿಯ ಟೂರ್ನಿಯಲ್ಲಿ ಅವರು ಒಟ್ಟು 213 ಅಂಕಗಳನ್ನು ಗಳಿಸಿದ್ದರು. ಕಳೆದ ಬಾರಿಯೂ ದ್ವಿಶತಕ (203) ಬಾರಿಸಿದ್ದರಾದರೂ ತಂಡದ ಪ್ರದರ್ಶನ ಅಷ್ಟು ಹೇಳಿಕೊಳ್ಳುವಂತಿರಲಿಲ್ಲ. ಆದರೆ, ಈ ಬಾರಿ ಅಜಯ್‌ ಠಾಕೂರ್‌ ಜೊತೆಗೆ ರಾಹುಲ್‌ ಚೌಧರಿ ಕೈ ಜೋಡಿಸುತ್ತಿದ್ದು ತಲೈವಾಸ್‌ ತಂಡ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

Story first published: Friday, July 19, 2019, 17:06 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X