ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್: ಅಮಿತ್‌ಗೆ ಬೆಳ್ಳಿ, ರಾಹುಲ್‌ಗೆ ಕಂಚು

ಕ್ಸಿಯಾನ್ (ಚೀನಾ) ಏಪ್ರಿಲ್ 25: ಅನುಭವಿ ಕುಸ್ತಿಪಟು ಅಮಿತ್ ಧಂಕರ್ (74 ಕೆಜಿ) ಮತ್ತು ಕಾಮನ್‌ವೆಲ್ತ್ ಚಾಂಪಿಯನ್ ರಾಹುಲ್ ಆವಾರೆ (61 ಕಜಿ) ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.
ಇದೇ ಕೂಟದಲ್ಲಿ 2013ರಲ್ಲಿ 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದಿದ್ದ 28 ವರ್ಷದ ಹರಿಯಾಣ ಮೂಲದ ಕುಸ್ತಿಪಟು, 74 ಕಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಕಜಕಸ್ತಾನದ ಡ್ಯಾನಿಯಾರ್ ಕೈಸಾನೋವ್ ಎದುರು 0-5 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರು. ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಕಿರ್ಗಿಸ್ತಾನದ ಇಲ್ಗಿಜ್ ಝಾಕಿಬೆಕೊವ್ ವಿರುದ್ಧ ಅಧಿಕಾರಯುತ ಜಯ ದಾಖಲಿಸಿದ್ದರು.
ಇನ್ನು ಪುರುಷರ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ರಾಹುಲ್ ಆವಾರೆ, ಕೊರಿಯಾದ ಜಿನ್‌ಷೆಯೋಲ್ ಕಿಮ್ ಎದುರು 9-2 ಅಂತರದಲ್ಲಿ ಜಯ ದಾಖಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ರಾಹುಲ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 57 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.
ಇದೀಗ ತಲಾ ಒಂದು ಬೆಳ್ಳಿ ಮತ್ತು ಕಂಚಿನೊಂದಿಗೆ ಕೂಟದಲ್ಲಿ ಭಾರತದ ಒಟ್ಟು ಪದಕ ಗಳಿಕೆಯು 5ಕ್ಕೆ (1 ಚಿನ್ನ, 2 ಬೆಳ್ಳಿ, 2 ಕಂಚು) ಏರಿದೆ. ಬಜರಂಗ್ ಪೂನಿಯಾ (65 ಕಜಿ) ಚಿನ್ನ ಗೆದ್ದರೆ, ಪ್ರವೀಣ್ ರಾಣಾ (79ಕೆಜಿ) ಮತ್ತು ಸತ್ಯವ್ರತ್ ಕದಿಯಾನ್ (97ಕೆಜಿ) ಬೆಳ್ಳಿ ಸಾಧನೆ ಮೆರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications