ಕಾಮನ್‌ವೆಲ್ತ್ ಗೇಮ್ಸ್: 5ನೇ ದಿನದ ಆರಂಭದಲ್ಲಿಯೇ ಮೂರು ಪದಕ

Posted By:
commonwealth games: 3 medals for india

ಬೆಂಗಳೂರು, ಏಪ್ರಿಲ್ 09: ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಜಿತು ರಾಯ್ ದೇಶಕ್ಕೆ ಮತ್ತೊಂದು ಚಿನ್ನದ ಪದಕ ತಂದಿತ್ತಿದ್ದಾರೆ. ಮತ್ತೊಬ್ಬ ಶೂಟರ್ ಓಂ ಮಿತ್ತರ್‌ವಾಲ್ ಕಂಚಿನ ಪದಕ ಗಳಿಸಿದ್ದಾರೆ.

ಜಿತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅವರು ಫೈನಲ್‌ನಲ್ಲಿ 235.1 ಸ್ಕೋರ್ ಮಾಡಿದರು. ಆಸ್ಟ್ರೇಲಿಯಾದ ಕೆರ್ರಿ ಬೆಲ್ 233.5 ಸ್ಕೋರ್ ಮಾಡಿ ಬೆಳ್ಳಿ ಪದಕ ಗೆದ್ದರೆ, 214.3 ಸ್ಕೋರ್ ಮಾಡಿದ ಮಿತ್ತರ್‌ವಾಲ್ ಕಂಚಿಗೆ ಕೊರಳೊಡ್ಡಿದರು.

ಕಾಮನ್‌ವೆಲ್ತ್ ಗೇಮ್ಸ್: ಶೂಟಿಂಗ್ ನಲ್ಲಿ ಚಿನ್ನ ಗೆದ್ದ 16ರ ಮಧು ಭಾಕೇರ್

ಎಲಿಮೇಷನ್ ಸುತ್ತಿನಲ್ಲಿ ಜಿತು ಮೊದಲ ಸ್ಥಾನದಲ್ಲಿದ್ದರೆ ಮಿತ್ತರ್‌ವಾಲ್ ಎರಡನೆಯ ಸ್ಥಾನದಲ್ಲಿದ್ದರು. ಆದರೆ ಅಂತಿಮವಾಗಿ ಮಿತ್ತರ್‌ವಾಲ್ ಮೂರನೇ ಸ್ಥಾನಕ್ಕೆ ಕುಸಿದರು.

ಬೆಳ್ಳಿ ಗೆದ್ದ ವೇಯ್ಟ್‌ ಲಿಫ್ಟರ್ ಪರ್ದೀಪ್ ಸಿಂಗ್
ಸ್ವಲ್ಪದರಲ್ಲಿಯೇ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ಎಡವಿದ ಭಾರತದ ವೇಯ್ಟ್ ಲಿಫ್ಟರ್ ಪರ್ದೀಪ್ ಸಿಂಗ್ ಬೆಳ್ಳಿ ಪದಕ ಜಯಿಸಿದ್ದಾರೆ.

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಐದನೇ ದಿನವಾದ ಸೋಮವಾರ, ಪರ್ದೀಪ್ ಸಿಂಗ್ ಪುರುಷರ 105 ಕೆಜಿ ವಿಭಾಗದಲ್ಲಿ ರಜತ ಪದಕ ಗೆದ್ದರು.

ಸಮೊವಾದ ಸನೆಲೆ ಮಾವೊ ಅವರೊಂದಿಗೆ ನಿಕಟ ಪೈಪೋಟಿ ನಡೆಸಿದ ಪರ್ದೀಪ್ ಸಿಂಗ್, ಒಟ್ಟು 352 ಕೆಜಿ ತೂಕ ಎತ್ತಿದರು.

ಕ್ಲೀನ್ ಮತ್ತು ಜೆರ್ಕ್ ವಿಭಾಗದಲ್ಲಿ 211 ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದ ಅವರು, ತಮ್ಮ ಅಂತಿಮ ಪ್ರಯತ್ನದಲ್ಲಿ ವಿಫಲರಾದರು.

ಎರಡನೆಯ ಅವಕಾಶದಲ್ಲಿ 209 ಕೆಜಿ ತೂಕ ಎತ್ತಿದರೂ, ತೀರ್ಪುಗಾರರು ಅದನ್ನು ಮಾನ್ಯಗೊಳಿಸಲಿಲ್ಲ.

'ಈ ಹಿಂದೆ 215 ಕೆಜಿ ತೂಕ ಎತ್ತಿರುವುದು ನನ್ನ ವೈಯಕ್ತಿಕ ಸಾಧನೆ. ಆದರೆ, ಇದು ನನ್ನ ದಿನವಾಗಿರಲಿಲ್ಲ' ಎಂದು 23 ವರ್ಷದ ಪರ್ದೀಪ್ ನಿರಾಸೆ ವ್ಯಕ್ತಪಡಿಸಿದ್ದಾರೆ.

ತಮ್ಮ ಅಂತಿಮ ಪ್ರಯತ್ನದಲ್ಲಿ 215 ಕೆಜಿ ತೂಕವನ್ನು ಎತ್ತುವಲ್ಲಿ ಮಾವೊ ಕೂಡ ವಿಫಲರಾದರು. ಆದರೆ ಎರಡನೆಯ ಅವಕಾಶದಲ್ಲಿ 206 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದು ಸಂಭ್ರಮಿಸಿದರು. ಅವರು ಸ್ಪರ್ಧೆಯಲ್ಲಿ ಒಟ್ಟು 360 ಕೆಜಿ ತೂಕ ಎತ್ತಿದರು.

ಇಂಗ್ಲೆಂಡಿನ ಓವೆನ್ ಬಾಕ್ಸಲ್ 351 ಕೆಜಿ ತೂಕ ಎತ್ತಿ ಕಂಚಿನ ಪದಕ ಗೆದ್ದರು.

Story first published: Monday, April 9, 2018, 10:06 [IST]
Other articles published on Apr 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ