ಮಹಿಳಾ ಕುಸ್ತಿ: ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಎರಡು ಪದಕ

Posted By:
Indian women wrestlers got two medal

ನವದೆಹಲಿ, ಮಾರ್ಚ್‌ 05: ಕಳೆದ ವಾರ ಭಾರತದ ಮಹಿಳಾ ಕುಸ್ತಿಗೆ ಉತ್ತಮ ವಾರ, ಶುಕ್ರವಾರದಂದು ವಿನೇಶಾ ಪೋಗಟ್ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರೆ, ಅಂದೇ ಏಷ್ಯನ್ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ನವಜೋತ್ ಕೌರ್ ಅವರು ಚಿನ್ನ ಗೆದ್ದುಕೊಂಡಿದ್ದಾರೆ.

ಮಹಿಳೆಯರ 50ಕೆ.ಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ ಹೋರಾಟದಲ್ಲಿ ವಿನೇಶಾ 2-3ರಲ್ಲಿ ಚೀನಾದ ಚನ್‌ ಲೀ ಎದುರು ಸೋತು ಬೆಳ್ಳಿ ಪದಕ ಗೆದ್ದುಕೊಂಡಿದ್ದರೆ, ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ನವಜೋತ್‌ ಮಹಿಳೆಯರ 65ಕೆ.ಜಿ ವಿಭಾಗದ ಫೈನಲ್‌ನಲ್ಲಿ ಜಪಾನ್‌ನ ಮಿಯಾ ಇಯಾಮ್‌ ಅವರನ್ನು ಮಣಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

ವಿನೇಶಾ ಅವರು ಬೌಟ್‌ನ ಆರಂಭದಲ್ಲಿಯೇ 0-1ರಲ್ಲಿ ಹಿನ್ನಡೆ ಸಾಧಿಸಿದರು. ಈ ಹಂತದಲ್ಲಿ ಪ್ರಬಲ ಸ್ಪರ್ಧೆ ಒಡ್ಡುವ ಮೂಲಕ ಎರಡು ಪಾಯಿಂಟ್ಸ್ ಪಡೆದು ಮುನ್ನಡೆ ಸಾಧಿಸಿದರು. ಪಂದ್ಯದ ಕೊನೆಯ ವೇಳೆ ಎದುರಾಳಿಗೆ ಎರಡು ಪಾಯಿಂಟ್ಸ್ ಬಿಟ್ಟುಕೊಡುವ ಮೂಲಕ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು. ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಿದ್ದ ಚನ್‌ ಅಂತಿಮ ಹಂತದಲ್ಲಿ ಚುರುಕಿನ ದಾಳಿಯಿಂದ ಗಮನಸೆಳೆದರು.

ವಿನೇಶಾ ಅವರು ಸೆಮಿಫೈನಲ್‌ ಪಂದ್ಯದಲ್ಲಿ ಜಪಾನ್‌ನ ಯೂಕಿ ಇರಿಯಾ ಎದುರು ಗೆದ್ದು ಫೈನಲ್‌ ಪ್ರವೇಶಿಸಿದ್ದರು. 'ಫೈನಲ್‌ನಲ್ಲಿ ಸೋತಿದ್ದರಿಂದ ಹೆಚ್ಚು ಬೇಸರವಾಗಿಲ್ಲ. 2018ರ ಋತುವನ್ನು ಪದಕದ ಮೂಲಕ ಆರಂಭಿಸಿದ್ದೇನೆ. ಇದು ಒಳ್ಳೆಯ ಬೆಳವಣಿಗೆ. ಮಹತ್ವದ ಟೂರ್ನಿಗಳು ಇರುವ ಈ ವರ್ಷದಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಿದೆ' ಎಂದು ವಿನೇಶಾ ಹೇಳಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ ಅವರು ನವಜೋತ್ ಅವರಿಗೆ ಶುಭಾಷಯ ಕೋರಿದ್ದಾರೆ. 'ಪಂಜಾಬ್ ಹಾಗೂ ಭಾರತಕ್ಕೆ ಗೌರವ ತಂದ ನವಜೋತ್ ಅವರಿಗೆ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Story first published: Monday, March 5, 2018, 16:01 [IST]
Other articles published on Mar 5, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ